ಯುಪಿಯಲ್ಲಿ ಬಿಜೆಪಿಗೆ ಬಿಗ್ ಶಾಕ್.. !

First Published 15, Mar 2018, 7:44 AM IST
Big Shock To BJP
Highlights

2019ರ ಲೋಕಸಭಾ ಚುನಾವಣೆಯ ಗೆಲುವಿನ ಮೇಲೆ ಕಣ್ಣಿಟ್ಟಿದ್ದ ಬಿಜೆಪಿಗೆ, ಬುಧವಾರ ಪ್ರಕಟವಾದ ಉತ್ತರಪ್ರದೇಶದ 2 ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಭರ್ಜರಿ ಶಾಕ್‌ ನೀಡಿದೆ.

ಖನೌ/ಪಟನಾ: 2019ರ ಲೋಕಸಭಾ ಚುನಾವಣೆಯ ಗೆಲುವಿನ ಮೇಲೆ ಕಣ್ಣಿಟ್ಟಿದ್ದ ಬಿಜೆಪಿಗೆ, ಬುಧವಾರ ಪ್ರಕಟವಾದ ಉತ್ತರಪ್ರದೇಶದ 2 ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಭರ್ಜರಿ ಶಾಕ್‌ ನೀಡಿದೆ.

ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಮತ್ತು ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ ರಾಜೀನಾಮೆಯಿಂದ ತೆರವಾಗಿದ್ದ ಗೋರಖ್‌ಪುರ ಮತ್ತು ಫäಲ್ಪುರ ಲೋಕಸಭಾ ಕ್ಷೇತ್ರದಲ್ಲಿ, ಬಿಎಸ್ಪಿ ಬೆಂಬಲಿತ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಈ ಫಲಿತಾಂಶ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಈಶಾನ್ಯದ ಮೂರು ರಾಜ್ಯಗಳ ಚುನಾವಣೆ ಬಳಿಕ ಭಾರೀ ಉತ್ಸಾಹದಲ್ಲಿದ್ದ ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆ ಎಂದೇ ಬಣ್ಣಿಸಲಾಗಿದೆ.

ಇದೇ ವೇಳೆ ಬಿಹಾರದ ಅರಾರಿಯಾ ಲೋಕಸಭಾ ಕ್ಷೇತ್ರ ಮತ್ತು ಜೆಹನಾಬಾದ್‌ ವಿಧಾನಸಭಾ ಕ್ಷೇತ್ರವನ್ನು ಆರ್‌ಜೆಡಿ ಉಳಿಸಿಕೊಂಡಿದ್ದರೆ, ಭಬುವಾ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುವ ಮೂಲಕ ಸಮಾಧಾನ ಪಟ್ಟುಕೊಂಡಿದೆ.

ಈ ಫಲಿತಾಂಶ ನಮ್ಮ ಅತಿಯಾದ ಆತ್ಮವಿಶ್ವಾಸದ ಪರಿಣಾಮ. ತಪ್ಪುತಿದ್ದಿಕೊಳ್ಳುತ್ತೇವೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದರೆ, ಬಿಜೆಪಿ ಆಡಳಿತದ ಬಗೆಗಿನ ಅಸಮಾಧಾನವನ್ನು ಜನರು ಮತದ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಫಲಿತಾಂಶದ ಬೆನ್ನಲ್ಲೇ, ತೀರಾ ಅಪರೂಪದ ಬೆಳವಣಿಗೆಯೊಂದರಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ಸಿಂಗ್‌ ಯಾದವ್‌ ಅವರು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರನ್ನು ಭೇಟಿ ಮಾಡಿ, ಗೆಲುವಿಗೆ ಸಹಕರಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಯೋಗಿಗೆ ಶಾಕ್‌: ಸಿಎಂ ಯೋಗಿ ಆದಿತ್ಯನಾಥ್‌ ರಾಜೀನಾಮೆಯಿಂದ ತೆರವಾಗಿದ್ದ ಗೋರಖ್‌ಪುರದಲ್ಲಿ ಜೆಪಿ ಅಭ್ಯರ್ಥಿ ಉಪೇಂದ್ರ ದತ್‌ರನ್ನು ಎಸ್‌ಪಿಯ ಪ್ರವೀಣ್‌ ನಿಶಾದ್‌ 21,961 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರ ಕಳೆದುಕೊಂಡಿದೆ.

27 ವರ್ಷಗಳ ಬಳಿಕ ಗೋರಖ್‌ಪುರದಲ್ಲಿ ಬಿಜೆಪಿಗೆ ಅಧಿಕಾರ ಇಲ್ಲ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಭದ್ರಕೋಟೆ ಗೋರಖ್‌ಪುರದಲ್ಲಿ ಬಿಜೆಪಿ 27 ವರ್ಷಗಳ ಬಳಿಕ ಅಧಿಕಾರ ಕಳೆದುಕೊಂಡಿದೆ. ಯೋಗಿ ಆದಿತ್ಯನಾಥ್‌ ಅವರ ಗುರು ಮಹಾಂತ್‌ ಅವೈದ್ಯನಾಥ್‌ 1991ರಲ್ಲಿ ಗೋರಖ್‌ಪುರ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. 1996ರಲ್ಲಿ ಎರಡನೇ ಅವಧಿಗೆ ಅವೈದ್ಯನಾಥ್‌ ಆಯ್ಕೆಯಾಗಿದ್ದರು. ಅವರ ಬಳಿಕ ಯೋಗಿ ಆದಿತ್ಯನಾಥ್‌ ಅವರು 1998ರಲ್ಲಿ ಇದೇ ಕ್ಷೇತ್ರದಿಂದ ಮೊದಲ ಬಾರಿ ಗೆಲುವು ದಾಖಲಿಸಿದ್ದರು. ಬಳಿಕ ಸತತ ನಾಲ್ಕು ಅವಧಿಗೆ ಆಯ್ಕೆಯಾಗಿದ್ದರು. ಹೀಗಾಗಿ ಗೋರಖ್‌ಪುರದಲ್ಲಿ ಬಿಜೆಪಿ 27 ವರ್ಷಗಳಿಂದ ಅಧಿಪತ್ಯ ಸಾಧಿಸಿತ್ತು.

loader