ವಿತರಿಸಿದ್ದ ಸಾಲವನ್ನು, ಬ್ಯಾಂಕ್‌ನ ಮುಖ್ಯಸ್ಥರು 2014ರಲ್ಲೇ ಅನುತ್ಪಾದಕ ಆಸ್ತಿ (ಎನ್‌ಪಿಎ- ನಾನ್ ಫರ್ಮಾರ್ಮಿಂಗ್ ಅಸೆಟ್)ಎಂದು ಘೋಷಿಸುವ ಮೂಲಕ 68 ಕೋಟಿ ರು. ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ನವದೆಹಲಿ: ಸಾಲ ಪಡೆದವರು ದೀರ್ಘ ಕಾಲದವರೆಗೆ ಅದನ್ನು ಮರುಪಾವತಿ ಮಾಡದೇ ಹೋದಲ್ಲಿ ಅದನ್ನು ಅನುತ್ಪಾದಕ ಆಸ್ತಿ ಎಂದು ಬ್ಯಾಂಕ್‌ಗಳು ಪರಿಗಣಿಸುವುದು ಸಾಮಾನ್ಯ. ಆದರೆ 2013 ರಲ್ಲಿ ವಿತರಿಸಿದ್ದ ಸಾಲವನ್ನು, ಬ್ಯಾಂಕ್‌ನ ಮುಖ್ಯಸ್ಥರು 2014ರಲ್ಲೇ ಅನುತ್ಪಾದಕ ಆಸ್ತಿ (ಎನ್‌ಪಿಎ- ನಾನ್ ಫರ್ಮಾರ್ಮಿಂಗ್ ಅಸೆಟ್)ಎಂದು ಘೋಷಿಸುವ ಮೂಲಕ 68 ಕೋಟಿ ರು. ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಕೆನರಾ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ಕೆ.ದುಬೆ ಹಾಗೂ ಬ್ಯಾಂಕ್ ನ 2 ಕಾರ್ಯನಿರ್ವಾಹಕ ನಿರ್ದೇಶ ಕರ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ.

ಪ್ರಕರಣ ಹಿನ್ನೆಲೆ: ಅಕೇಷನಲ್ ಸಿಲ್ವರ್ ಕಂಪನಿಯ ಪ್ರವರ್ತಕರಾದ ಕಪಿಲ್ ಗುಪ್ತಾ ಮತ್ತು ರಾಜ್‌ಕುಮಾರ್ ಗುಪ್ತಾ, ಕೆನರಾ ಬ್ಯಾಂಕ್‌ನ ಸಿಎಂಡಿ ದುಬೆಗೆ ಪರಿಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಕಂಪನಿ, 2013ರಲ್ಲಿ ಕೆನರಾ ಬ್ಯಾಂಕ್‌ಗೆ ಸಾಲ ಕೋರಿ ಅರ್ಜಿ ಸಲ್ಲಿಸಿತ್ತು. ಇದಾದ ಬಳಿಕ ಸಿಎಂಡಿ ದುಬೆ, ಬ್ಯಾಂಕ್‌ನ ಕಿರಿಯ ಅಧಿಕಾರಿಗಳಿಗೆ ಎಸ್‌ಎಂಎಸ್ ಮೂಲಕ ಗುಪ್ತಾ ಸೋದರರಿಗೆ ಸಾಲ ನೀಡಲು ಸೂಚಿಸಿದ್ದರು.

ಹೀಗೆ ಅರ್ಜಿ ಸಲ್ಲಿಸಿದ ಮೂರೇ ತಿಂಗಳಲ್ಲಿ ಕೋಟ್ಯಂತರ ಮೊತ್ತದ ಸಾಲ ಮಂಜೂರಾಗಿತ್ತು. ಸಾಲಪಡೆದ ಬಳಿಕ ಸ್ವಲ್ಪ ಮೊತ್ತವನ್ನು ಮಾತ್ರ ಕಂಪನಿ ಮರುಪಾವತಿ ಮಾಡಿ ಬಳಿಕ ಸುಮ್ಮನಾಗಿತ್ತು. ಅಚ್ಚರಿಯ ವಿಷಯವೆಂದರೆ 2014ರಲ್ಲಿ ಈ ಸಾಲವನ್ನು, ಬ್ಯಾಂಕ್ ಅನುತ್ಪಾದಕ ಆಸ್ತಿ ಎಂದು ಘೋಷಿಸುವ ಮೂಲಕ ಅದು ಮರುಪಾವತಿ ಸಾಧ್ಯತೆ ಇಲ್ಲ ಎಂಬ ನಿರ್ಣಯಕ್ಕೆ ಬಂದಿತ್ತು.

ಈ ಬಗ್ಗೆ ತನಿಖೆ ನಡೆಸಿದ ಸಿಬಿಐ, ಹಗರಣದಲ್ಲಿ ಬ್ಯಾಂಕ್ ಸಿಎಂಡಿಆರ್.ಕೆ.ದುಬೆ, ನಿರ್ದೇಶಕರಾದ ಅಶೋಕ್ ಕುಮಾರ್ ಗುಪ್ತಾ ಮತ್ತು ವಿ.ಎಸ್.ಕೃಷ್ಣ ಕುಮಾರ್ ಶಾಮೀಲಾಗಿದ್ಧಾರೆ ಎಂದು ಆರೋಪಿಸಿ ಆರೋಪಪಟ್ಟಿ ಸಲ್ಲಿಸಿದೆ.