ಬಿಜೆಪಿ ಬೆಂಬಲದೊಂದಿಗೆ ಮತ್ತೆ ಬಿಹಾರ ಸಿಎಂ ಗದ್ದುಗೆಗೇರಿರುವ ಜೆಡಿಯುನ ನಿತೀಶ್‌ ಕುಮಾರ್‌ ಇಂದು ಅಗ್ನಿಪರೀಕ್ಷೆ ಎದುರಿಸಲಿದ್ದಾರೆ. ಬಿಹಾರದಲ್ಲಿ ಇಂದು ವಿಶೇಷ ಅಧಿವೇಶನ ನಡೆಯಲಿದೆ.

ಬಿಹಾರ(ಜು.28): ಬಿಜೆಪಿ ಬೆಂಬಲದೊಂದಿಗೆ ಮತ್ತೆ ಬಿಹಾರ ಸಿಎಂ ಗದ್ದುಗೆಗೇರಿರುವ ಜೆಡಿಯುನ ನಿತೀಶ್‌ ಕುಮಾರ್‌ ಇಂದು ಅಗ್ನಿಪರೀಕ್ಷೆ ಎದುರಿಸಲಿದ್ದಾರೆ. ಬಿಹಾರದಲ್ಲಿ ಇಂದು ವಿಶೇಷ ಅಧಿವೇಶನ ನಡೆಯಲಿದೆ.

ನಿತೀಶ್‌ ಕುಮಾರ್‌ ಇಂದು ವಿಧಾನಸಭೆಯಲ್ಲಿ ಬಹುಮತ ಸಾಬೀಪಡಿಸಲು ಮುಂದಾಗಿದ್ದಾರೆ. ಒಟ್ಟು 243 ಸದಸ್ಯರ ಸಂಖ್ಯಾ ಬಲವನ್ನು ಬಿಹಾರ ವಿಧಾನಸಭೆ ಹೊಂದಿದ್ದು, ಸರ್ಕಾರ ರಚನೆಗೆ 122 ಶಾಸಕರ ಬೆಂಬಲ ಬೇಕಿದೆ. ಜೆಡಿಯು ಮತ್ತು ಬಿಜೆಪಿ ಮೈತ್ರಿಗೆ 132 ಶಾಸಕರ ಬೆಂಬಲ ಇದೆ ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ನಿತೀಶ್‌ ತಿಳಿಸಿದ್ದಾರೆ.

ಜೆಡಿಯುನ 71, ಬಿಜೆಪಿಯ 53, ಎಲ್‌‌ಜಿಪಿ, ಆರ್‌‌ಎಲ್‌ಎಸ್‌ಪಿಯ ತಲಾ ಇಬ್ಬರು ಹಾಗೂ ಹೆಚ್‌‌ಎಎಂ-ಎಸ್‌‌ನ ಓರ್ವ ಶಾಸಕನ ಬೆಂಬಲವಿದೆ ಅಂತಾ ನಿತೀಶ್‌ ಹೇಳಿಕೊಂಡಿದ್ದಾರೆ. ಆದರೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ನಿತೀಶ್ ಕುಮಾರ್ ನಡೆಯಿಂದ ಜೆಡಿಯುನಲ್ಲೇ ಅಸಮಾಧಾನ ವ್ಯಕ್ತವಾಗಿದೆ.

ನಿತೀಶ್‌'ಗೆ ಯಾರೆಲ್ಲಾ ಬೆಂಬಲ ವ್ಯಕ್ತಪಡಿಸುತ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇತ್ತ, ಕಾಂಗ್ರೆಸ್‌ ಮತ್ತು ಆರ್‌ಜೆಡಿ 107 ಜನ ಶಾಸಕರನ್ನು ಹೊಂದಿದ್ದು, ಈ ಮೈತ್ರಿಯ ಬಹುಮತಕ್ಕೆ 15 ಸದಸ್ಯರ ಬೆಂಬಲ ಬೇಕಿದೆ. ಒಂದು ವೇಳೆ ಕಾಂಗ್ರೆಸ್‌ ಮತ್ತು ಆರ್‌ಜೆಡಿ ನಾಯಕರು ಕೊನೆಯ ಗಳಿಗೆಯಲ್ಲಿ ಜೆಡಿಯು ಶಾಸಕರನ್ನು ತಮ್ಮತ್ತ ಸೆಳೆದರೆ ನಿತೀಶ್‌‌ಗೆ ಸಂಕಷ್ಟ ಎದುರಾಗಲಿದೆ.