Asianet Suvarna News Asianet Suvarna News

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಫೆ.2ರಿಂದ

* ಇದೇ ಮೊದಲ ಬಾರಿ ಶೇ.30ರಷ್ಟುಮಹಿಳಾ ನಿರ್ದೇಶಕರ ಚಿತ್ರಗಳಿಗೆ ಆದ್ಯತೆ
* ರಾಜಾಜಿನಗರದ ಒರಾಯನ್‌ ಮಾಲ್‌ ಪಿವಿಆರ್‌ ಸಿನಿಮಾಸ್‌'ನ 11 ಪರದೆಗಳಲ್ಲಿ ಪ್ರದರ್ಶನ
* ಮೈಸೂರಿನ ಐನಾಕ್ಸ್‌ ಸಿನಿಮಾಸ್‌'ನ 4 ಪರದೆಗಳು ಚಿತ್ರಗಳ ಪ್ರದರ್ಶನಕ್ಕೆ ನಿಗದಿ

biffes film festival from feb 2nd

ಬೆಂಗಳೂರು: ಚಿತ್ರಪ್ರೇಮಿಗಳ ಬಹುನಿರೀಕ್ಷಿತ ‘ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮಾಮೋತ್ಸವ'ಕ್ಕೆ ದಿನ ನಿಗದಿ​ಯಾಗಿದೆ. 2017ರ ಫೆಬ್ರುವರಿ 2ರಿಂದ 9ರವರೆಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಸಿನಿಮೋತ್ಸವ ನಡೆಯಲಿದೆ. 50 ದೇಶಗಳ ವಿವಿಧ ಭಾಷೆಯ 180 ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ವಿಶೇಷ​ವಾಗಿ ಈ ಬಾರಿ ಶೇ.30ರಷ್ಟುಮಹಿಳಾ ನಿರ್ದೇಶಕರ ಚಿತ್ರಗಳಿಗೆ ಸಿನಿಮೋತ್ಸವ ಆದ್ಯತೆ ನೀಡಿದೆ.

ಈ ವರ್ಷವೂ ಬೆಂಗಳೂರಿನ ರಾಜಾಜಿ​ನಗರ​ದಲ್ಲಿರುವ ಒರಾಯನ್‌ ಮಾಲ್‌ನಲ್ಲಿರುವ ಪಿವಿಆರ್‌ ಸಿನಿಮಾಸ್‌'ನಲ್ಲಿನ 11 ಪರದೆಗಳು ಹಾಗೂ ಮೈಸೂರು ಐನಾಕ್ಸ್‌ ಸಿನಿಮಾಸ್‌ನಲ್ಲಿನ 4 ಪರದೆಗಳು ಚಿತ್ರ ಪ್ರದರ್ಶನಕ್ಕೆ ನಿಗದಿಯಾಗಿವೆ. ಏಷ್ಯನ್‌, ಭಾರತೀಯ ಹಾಗೂ ಕನ್ನಡ ಚಿತ್ರಗಳ ವಿಭಾಗ ಜತೆಗೆ ಇದೇ ಮೊದಲ ಬಾರಿಗೆ ಕನ್ನಡದ ಜನಪ್ರಿಯ ಮನರಂಜನಾ ಚಿತ್ರಗಳಿಗೂ ಸಿನಿಮೋತ್ಸವದಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಸ್ಪರ್ಧೆಗೆ ಆಯ್ಕೆಯಾದ ಚಿತ್ರಗಳ ವಿವರ ಜನವರಿ ಮೊದಲ ವಾರ ಪ್ರಕಟವಾಗಲಿದೆ.

ಸಮಕಾಲೀನ ವಿಶ್ವ ಸಿನಿಮಾ, ದೇಶ ನೋಟ, ಪುನರಾವಲೋಕನ, ಗೌರವ ಹಾಗೂ ಹಲವು ಗಣ್ಯರ ನೆನಪಿನ ಮೂಲಕ ಸಿನಿಮೋತ್ಸವ ಪ್ರಚಲಿತ ವಿದ್ಯ​ಮಾನW​Üಳಿಗೆ ಮುಖಾ ಮುಖಿ ಆಗಲಿದೆ. ಏಷಿಯನ್‌ ಹಾಗೂ ವಿಶ್ವ ಸಿನಿಮಾ ವಿಭಾಗದಲ್ಲಿ ಪ್ರದರ್ಶನವಾಗುವ ಸಾಕಷ್ಟುಚಿತ್ರಗಳು ಬರ್ಲಿನ್‌, ಕಾನ್‌, ಟೊರೆಂಟೊ, ಗೋವಾ, ಮುಂಬೈ ಹಾಗೂ ಕೇರಳ ಸೇರಿದಂತೆ ವಿವಿಧೆಡೆಗಳಲ್ಲಿನ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಪಾಲ್ಗೊಂಡಿವೆ. ಅವುಗಳ ಜತೆಗೆ 15ಕ್ಕೂ ಹೆಚ್ಚು ಚಿತ್ರಗಳು ಬೆಂಗಳೂರು ಸಿನಿಮೋತ್ಸ​ವದಲ್ಲಿ​ಯೇ ಮೊದಲ ಬಾರಿಗೆ ಪ್ರದರ್ಶನಗೊಳ್ಳುತ್ತಿವೆ.

ಫಿಪ್ರೆಸ್ಕಿ (ಚಲನಚಿತ್ರ ವಿಮರ್ಶಕರ ಅಂತಾರಾಷ್ಟ್ರೀಯ ಒಕ್ಕೂಟ) ವಿಮರ್ಶಕರ ಪ್ರಶಸ್ತಿ ಪಡೆದ ಚಿತ್ರಗಳು ಮತ್ತು ನೆಟ್‌ಪ್ಯಾಕ್‌ ಪ್ರಶಸ್ತಿ ಪಡೆದ ಚಿತ್ರಗಳ ಜತೆಗೆ ವಿಶೇಷ ವಿಷಯಾಧರಿತ ವಿಭಾಗದಲ್ಲಿ ಅದ್ವೀತಿಯ ಹಾಸ್ಯ ಚಿತ್ರಗಳು ಮತ್ತು ಮಹಿಳಾ ನಿರ್ದೇಶಕರ ಚಿತ್ರಗಳು ಸಿನಿಮೋತ್ಸವದ ಪ್ರಮುಖ ಆಕರ್ಷಣೆ ಎನಿಸಿವೆ. ಸಾಕ್ಷ್ಯಚಿತ್ರಗಳ ವಿಭಾಗದಲ್ಲಿ ಚಿತ್ರ ನಿರ್ಮಾಪಕರು, ಬರಹಗಾರರು, ಕಲಾವಿದರು ಮತ್ತು ಸಂಗೀತಗಾರರ ಕುರಿತ ಸಾಕ್ಷ್ಯಚಿತ್ರಗಳು ಆಯ್ಕೆಯಾಗಿವೆ. ಕಳೆದ ಬಾರಿಯಂತೆಯೇ ಸಿನಿಮೋತ್ಸವದ ಉದ್ಘಾಟನೆ ವಿಧಾನ ಸೌಧದ ಮುಂ​ಭಾಗ ನಡೆಯಲಿದೆ. ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಮೈಸೂರಿಗೆ ನಿಗದಿಯಾಗಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ನಡೆಯುವ ಬೆಂಗಳೂರು ಅಂತಾ​ರಾಷ್ಟ್ರೀ​ಯ ಸಿನಿಮೋತ್ಸವದ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಪ್ರಧಾನ ಕಾರ್ಯ​ದರ್ಶಿ ಎಂ.ಲಕ್ಷೀನಾರಾಯಣ್‌, ನಿರ್ದೇಶಕ ಎನ್‌.ಆರ್‌.ವಿಶು ಕುಮಾರ್‌, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್‌ ಬಾಬು ವಿವರ ನೀಡಿ​ದರು. ಸಿನಿಮೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾ​ಶಂಕರ್‌ ಸಿನಿಮೋತ್ಸವಕ್ಕೆ ಆಯ್ಕೆಯಾದ ಸಿನಿಮಾಗಳ ಕುರಿತು ಮಾಹಿತಿ ನೀಡಿದರು. 

ನೋಂದಣಿ ಜನವರಿ ಮೊದಲ ವಾರದಿಂದ ಆರಂಭವಾಗಲಿದೆ. ಬೆಂಗ​ಳೂರಿನ ಚಲನಚಿತ್ರ ಅಕಾಡೆಮಿ ಕಾರ್ಯಾಲಯ ಹಾಗೂ ಮೈಸೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೋಂದಾಯಿಸಿ​ಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ www.biffes.in ವೆಬ್‌ಸೈಟ್‌ ಸಂಪರ್ಕಿಸಬಹುದು.

ಸಿನಿಮೋತ್ಸವಕ್ಕೆ ಪ್ರತ್ಯೇಕ ಸೆಲ್‌:
ಪ್ರತಿಷ್ಠಿತ ಸಿನಿಮೋತ್ಸವಗಳ ಮಾದರಿಯಲ್ಲೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಕೆಲಸ ಕಾರ್ಯಗಳಿಗೂ ಸರ್ಕಾರ ಪ್ರತ್ಯೇಕ ಸೆಲ್‌ ರಚಿಸಿದ್ದು, ಆದೇಶವೂ ಹೊರಬಿದ್ದಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೇನಾರಾಯಣ್‌ ತಿಳಿಸಿದರು. ವಾರ್ತಾ ಇಲಾಖೆಯಲ್ಲಿಯೇ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಬೇಕೆನ್ನುವ ಬೇಡಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿನಿಮೋತ್ಸವದ ಕೆಲಸ ಕಾರ್ಯಗಳಿಗೆ ಸೆಲ್‌ ಮಾತ್ರವೇ ಸಾಕು. ಈಗಾಗಲೇ ಸರ್ಕಾರ ಅದಕ್ಕೆ ಆದೇಶ ಹೊರಡಿಸಿದೆ ಎಂದರು. ನಿರ್ದೇಶನಾಲಯದ ಬೇಡಿಕೆಗೆ ಅವರು ಸ್ಪಷ್ಟವಿವರ ನೀಡಲು ನಿರಾಕರಿಸಿದರು.

(epaper.kannadaprabha.in)