Asianet Suvarna News Asianet Suvarna News

ಭೀಮಾತೀರದಲ್ಲಿ ಕೂತೂಹಲದ ಕದನ

ಅಬಕಾರಿ ಗುತ್ತಿಗೆದಾರರಾಗಿದ್ದ ಮಾಲೀಕಯ್ಯ ಗುತ್ತೇದಾರ್ ಅವರನ್ನು ಕಾಂಗ್ರೆಸ್ಸಿಗೆ ಕರೆತಂದು, ಟಿಕೆಟ್ ಕೊಡಿಸಿ 1985ರ ವಿಧಾನಸಭೆ ಚುನಾವಣೆ ಕಣಕ್ಕಿಳಿಸಿದವರಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಮುಖರು.

Bhima Teera Election war

ಶೇಷಮೂರ್ತಿ ಅವಧಾನಿ

ಕಲಬುರಗಿ : ಅಬಕಾರಿ ಗುತ್ತಿಗೆದಾರರಾಗಿದ್ದ ಮಾಲೀಕಯ್ಯ ಗುತ್ತೇದಾರ್ ಅವರನ್ನು ಕಾಂಗ್ರೆಸ್ಸಿಗೆ ಕರೆತಂದು, ಟಿಕೆಟ್ ಕೊಡಿಸಿ 1985ರ ವಿಧಾನಸಭೆ ಚುನಾವಣೆ ಕಣಕ್ಕಿಳಿಸಿದವರಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಮುಖರು.

ಬದಲಾದ ಕಾಲಘಟ್ಟದಲ್ಲಿ ಈಗ ಗುತ್ತೇದಾರ್ ಅವರು ಖರ್ಗೆ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದಾರೆ. ಖರ್ಗೆ ‘ಪುತ್ರ ವ್ಯಾಮೋಹ’ ಟೀಕಿಸಿ ಕಾಂಗ್ರೆಸ್ ತೊರೆದು, ಬಿಜೆಪಿಗೆ ಜಿಗಿದು, ಆ ಪಕ್ಷದ ಅಭ್ಯರ್ಥಿಯೂ ಆಗಿದ್ದಾರೆ. ಗುತ್ತೇದಾರ್ ಮಾಡಿದ ಪಕ್ಷಾಂತರ ಕಲಬುರಗಿ ಜಿಲ್ಲೆ ಭೀಮಾ ನದಿ ತೀರದ ಅಫ್ಜಲ್‌ಪುರ ಕ್ಷೇತ್ರದ ಅಖಾಡವನ್ನೇ ಸದ್ಯ ಬದಲು ಮಾಡಿಬಿಟ್ಟಿದೆ.

ಬಿಜೆಪಿ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದ ಎಂ.ವೈ. ಪಾಟೀಲ್ ಅವರು ಕಾಂಗ್ರೆಸ್ಸಿಗೆ ಹಾರಿದ್ದಾರೆ. ಅವರು ಆ ಪಕ್ಷದ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಇನ್ನು ಬಿಜೆಪಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಒಡ್ಡುತ್ತಿದ್ದ ಉದ್ಯಮಿ ರಾಜು ಗೌಡ ಪಾಟೀಲ ರೇವೂರ್ ಅವರು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಅಫ್ಜಲ್‌ಪುರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಿಶ್ಚಿತವಾಗಿದೆ.

ಕಾಂಗ್ರೆಸ್ ತೊರೆದ ಬಳಿಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗುತ್ತೇದಾರ್ ನಿರಂತರ ವಾಗ್ಬಾಣ ಹರಿಬಿಡುತ್ತಿದ್ದಾರೆ. ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಖರ್ಗೆ ಕುಟುಂಬವನ್ನು ಮಣಿಸುವುದಾಗಿ ಅಬ್ಬರಿಸುತ್ತಿದ್ದಾರೆ. ಆದರೆ ಶೋಷಿತ ವರ್ಗದ ನಾಯಕ ಖರ್ಗೆ ವಿರುದ್ಧ ಗುತ್ತೇದಾರ್ ಆಡುತ್ತಿರುವ ಇಂತಹ ಮಾತುಗಳು ಅವರಿಗೆ ಲಾಭವಾಗುತ್ತವೋ ಅಥವಾ ಪ್ರತಿಕೂಲವಾಗಿ ಪರಿಣಮಿಸುತ್ತವೋ ಎಂಬುದನ್ನು ಕಾದು ನೋಡಬೇಕಾಗಿದೆ.

ತಮ್ಮ ವಿರುದ್ಧ ತಿರುಗಿಬಿದ್ದಿರುವ ಗುತ್ತೇದಾರ್‌ರನ್ನು ಮಣಿಸಲು ಖರ್ಗೆ ಪಾಳೆಯ ಕೂಡ ತಂತ್ರಗಾರಿಕೆ ಹೆಣೆದಿದೆ. ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಎಂ.ವೈ. ಪಾಟೀಲ್‌ರನ್ನು ಕಾಂಗ್ರೆಸ್ಸಿಗೆ ಕರೆತಂದಿದೆ. ದಶಕಗಳಿಂದ ಅಫ್ಜಲ್‌ಪುರ ರಾಜಕಾರಣದಲ್ಲಿ ಈ ಇಬ್ಬರೂ ಎದುರಾಳಿಗಳಾಗಿದ್ದವರು. ಈಗ ಪಕ್ಷ ಅದಲು-ಬದಲು ಮಾಡಿಕೊಂಡು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ನಡುವೆ, ಉದ್ಯಮಿ  ರಾಜುಗೌಡ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವುದರೊಂದಿಗೆ ಕಣ ತೀವ್ರ ರಂಗೇರಿದೆ. ಅಫ್ಜಲ್ ಪುರದಲ್ಲಿ ಮೇಲ್ನೋಟಕ್ಕೆ ಮಾಲೀಕಯ್ಯ- ಎನ್. ವೈ.ಪಾಟೀಲ್-ರಾಜುಗೌಡ ನಡುವೆ ಹಣಾಹಣಿ ಕಂಡುಬಂದರೂ ಪರೋಕ್ಷವಾಗಿ ಮಾಲೀಕಯ್ಯ- ಖರ್ಗೆ ಮಧ್ಯೆ ಸಮರ ಏರ್ಪಟ್ಟಂತಾಗಿದೆ.

ಕಣ ಚಿತ್ರಣ: 1983 ವರೆಗೆ ಪಕ್ಷ ಕೇಂದ್ರಿತ ರಾಜಕಾರಣಕ್ಕೆ ಸಾಕ್ಷಿಯಾಗುತ್ತಿದ್ದ ಅಫ್ಜಲ್‌ಪುರ 1985 ರ ತರುವಾಯ ವ್ಯಕ್ತಿ ಕೇಂದ್ರಿತ ಅಖಾಡ ವಾಗಿ ಬದಲಾಯಿತು. 1985 ರಿಂದ ಈವರೆಗೆ ನಡೆದಿರುವ 7 ಚುನಾವಣೆಗಳಲ್ಲಿ 6 ಬಾರಿ ಮಾಲೀಕಯ್ಯ ಗೆದ್ದಿದ್ದರೆ, ಒಮ್ಮೆ ಎಂ.ವೈ. ಪಾಟೀಲ್ ಜಯ ಸಾಧಿಸಿದ್ದಾರೆ. ಈ ಅವಧಿಯಲ್ಲಿ ಮಾಲೀಕಯ್ಯ ಕಾಂಗ್ರೆಸ್, ಕೆಸಿಪಿ, ಜೆಡಿಎಸ್ ಎಂದು ಮೂರು ಬಾರಿ ಪಕ್ಷಾಂತರ ಮಾಡಿದ್ದಾರೆ.

ಈಗ ಬಿಜೆಪಿ ಸೇರ್ಪಡೆ ಅವರ ನಾಲ್ಕನೇ ಜಿಗಿತ. ಎಂ.ವೈ.ಪಾಟೀಲ್ ಅವರು ಜನತಾ ಪಕ್ಷ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಕೆಜೆಪಿ, ಬಿಜೆಪಿ ಮುಗಿಸಿ ಈಗ ಕಾಂಗ್ರೆಸ್ಸಿಗೆ ಮರಳಿದ್ದಾರೆ. ನಾಯ ಕರಿಲ್ಲದೆ ಸೊರಗಿದ್ದ ಜೆಡಿಎಸ್‌ಗೆ ರಾಜುಗೌಡ ಪಾಟೀಲ್ ರೇವೂರ್ ಸೇರ್ಪಡೆ ತುಸು ಚೈತನ್ಯ ತುಂಬಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜುಗೌಡರಿಗೆ ಮಾಲೀಕಯ್ಯ ಪಕ್ಷಾಂತರವು ರಾಜಕೀಯ ನಡೆ ಬದಲಿಸು ವಂತೆ ಮಾಡಿದೆ. ಪ್ರಬಲರು ಪಕ್ಷದ ತೆಕ್ಕೆಗೆ ಬಂದಾಗೆಲ್ಲಾ ಜೆಡಿಎಸ್ ಇಲ್ಲಿ ಗೆದ್ದಿದೆ. 1999ರಲ್ಲಿ ಮಾಲೀಕಯ್ಯ ಹಾಗೂ 2004 ರಲ್ಲಿ ಎಂ.ವೈ. ಪಾಟೀಲ್ ಜೆಡಿಎಸ್‌ನಿಂದ ಗೆದ್ದಿದ್ದರು. ಕಳೆದ ಬಾರಿ ವಿಠಲ ಹೆರೂರ್ ಪೈಪೋಟಿ ಒಡ್ಡಿದ್ದರು.

Follow Us:
Download App:
  • android
  • ios