Asianet Suvarna News Asianet Suvarna News

ಭಾಸ್ಕರ್ ಶೆಟ್ಟಿ ಆಸ್ತಿಗಾಗಿ ಸಂಬಂಧಿಕರ ಕಿತ್ತಾಟ

ಭಾಸ್ಕರ ಶೆಟ್ಟಿ ಅವರ ಮಾಲೀಕತ್ವದಲ್ಲಿರುವ ಉಡುಪಿಯ ದುರ್ಗಾ ಇಂಟರ್ ನ್ಯಾಷನಲ್ ಹೋಟೆಲ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಂದೇಶ್ ಶೆಟ್ಟಿ ಎಂಬವರಿಗೆ ಕೊಲೆ ಬೆದರಿಕೆ ಒಡ್ಡಲಾಗಿದೆ.

bhaskar shetty relatives clash for property

ಉಡುಪಿ(ಅ.14): ಇತ್ತೀಚೆಗೆ ಕೊಲೆಯಾದ ದುಬೈ ಉದ್ಯಮಿ ಭಾಸ್ಕರ್ ಶೆಟ್ಟಿ ಅವರ ಆಸ್ತಿಗಾಗಿ ಈಗ ತಾಯಿ ಮತ್ತು ಸಂಬ ಕರ ನಡುವೆ ಕಿತ್ತಾಟ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಭಾಸ್ಕರ ಶೆಟ್ಟಿ ಅವರ ಮಾಲೀಕತ್ವದಲ್ಲಿರುವ ಉಡುಪಿಯ ದುರ್ಗಾ ಇಂಟರ್ ನ್ಯಾಷನಲ್ ಹೋಟೆಲ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಂದೇಶ್ ಶೆಟ್ಟಿ ಎಂಬವರಿಗೆ ಕೊಲೆ ಬೆದರಿಕೆ ಒಡ್ಡಲಾಗಿದೆ. ಭಾಸ್ಕರ್ ಶೆಟ್ಟಿ ಅವರ ಕೊಲೆ ಆರೋಪಿ, ಪತ್ನಿ ರಾಜೇಶ್ವರಿ ಶೆಟ್ಟಿ ಅವರ ಸಹೋದರಿ ರೂಪಾ ಶೆಟ್ಟಿ ಮತ್ತು ಇತರ ನಾಲ್ವರು ಈ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಉಡುಪಿ ನಗರ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣದಲ್ಲಿ ಹೆಸರಿಸಲಾಗಿದೆ.

ಕೊಲೆಯಾದ ಎನ್‌ಆರ್‌ಐ ಉದ್ಯಮಿ ಭಾಸ್ಕರ್ ಶೆಟ್ಟಿ ಅವರು ತಮ್ಮ ಭಾವ, ರೂಪಾ ಶೆಟ್ಟಿ ಅವರ ಪತಿ ಮಣಿಪಾಲದ ಭಾಸ್ಕರ ಶೆಟ್ಟಿ ಎಂಬುವರ ಪಾಲುದಾರಿಕೆಯಲ್ಲಿ ಈ ಹೋಟೆಲ್ ಉದ್ಯಮ ಆರಂಭಿಸಿದ್ದರು. ಆದರೆ, ಕೊಲೆಗೂ ಕೆಲ ತಿಂಗಳು ಮುನ್ನ ತಮ್ಮ ಪಾಲುದಾರಿಕೆಯನ್ನು ರದ್ದುಗೊಳಿಸಿದ್ದರು. ಭಾಸ್ಕರ್ ಶೆಟ್ಟಿ ಕೊಲೆ ಬಳಿಕ ಅವರ ತಾಯಿ ಗುಲಾಬಿ ಶೆಟ್ಟಿ ಅವರು ಹೋಟೆಲ್ ನೋಡಿಕೊಳ್ಳಲು ಸಂದೇಶ್ ಶೆಟ್ಟಿ ಎಂಬುವರನ್ನು ನೇಮಿಸಿದ್ದರು. ಈ ಹೋಟೆಲ್‌ಗೆ ದ.ಕ. ಜಿಲ್ಲೆ ಪುತ್ತೂರಿನ ಬಾಲಕೃಷ್ಣ ಆಳ್ವ ಅವರು ಮ್ಯಾನೇಜರ್ ಆಗಿದ್ದಾರೆ. ಅ.7ರ ಸಂಜೆ ರೂಪಾ ಶೆಟ್ಟಿ, ರೇಣುಕಾ ರೈ ಮತ್ತು ಇತರ 4 ಮಂದಿ ಹೋಟೆಲ್‌ಗೆ ಬಂದು ಬಾಲಕೃಷ್ಣ ಆಳ್ವ ಮತ್ತು ಸಂದೇಶ್ ಶೆಟ್ಟಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಮರುದಿನ ಬೆಳಗ್ಗೆ ಪುನಃ ಹೋಂಡಾ ಅಮೇಜ್ ಕಾರಿನಲ್ಲಿ ಬಂದು ಮತ್ತೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೋಟೆಲ್ ಮ್ಯಾನೇಜರ್ ಬಾಲಕೃಷ್ಣ ಆಳ್ವ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಹೋಟೆಲ್‌ನಲ್ಲಿ ಬಾರ್ ಆ್ಯಂಡ್ ರೆಸ್ಟೊರೆಂಟ್, ಲಾಡ್ಜ್ ಮತ್ತಿತರ ಹತ್ತಾರು ಬಾಡಿಗೆ ಮಳಿಗೆಗಳಿವೆ. ಈ ಅಂಗಡಿಗಳವರು ತಮ್ಮ ಮಳಿಗೆಗಳ ಬಾಡಿಗೆಯನ್ನು ಈ ಮುನ್ನ ಭಾಸ್ಕರ್ ಶೆಟ್ಟಿ ಅವರಿಗೆ ನೀಡುತ್ತಿದ್ದರು. ಆದರೀಗ ಭಾಸ್ಕರ್ ಶೆಟ್ಟಿ ಅವರು ಇಲ್ಲದಿರುವುದರಿಂದ ಲಕ್ಷಾಂತರ ರು. ಬಾಡಿಗೆಯನ್ನು ಯಾರಿಗೆ ನೀಡಬೇಕೆಂಬ ಬಗ್ಗೆ ಬಾಡಿಗೆದಾರರಿಗೆ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್‌ನ ಮಾಜಿ ಪಾಲುದಾರ ಮಣಿಪಾಲದ ಭಾಸ್ಕರ್ ಶೆಟ್ಟಿ ಅವರ ಪತ್ನಿ ರೂಪಾ ಶೆಟ್ಟಿ ಅವರು ಈ ಲಕ್ಷಾಂತರ ರು.ಗಳ ವ್ಯವಹಾರದ ಮೇಲೆ ಕಣ್ಣಿಟ್ಟಿದ್ದು, ಅದಕ್ಕಾಗಿ ಸಂದೇಶ್ ಶೆಟ್ಟಿ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಉಡುಪಿ ನಗರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.