ಬೆಂಗಳೂರು :  ನಟ ದಿವಂಗತ ವಿಷ್ಣುವರ್ಧನ್‌ ಸ್ಮಾರಕ ಸ್ಥಳಾಂತರ ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಭೇಟಿಗೆ ನಟಿ ಭಾರತಿ ವಿಷ್ಣುವರ್ಧನ್‌ ಮತ್ತು ಅಳಿಯ ಅನಿರುದ್ಧ ತಾಸುಗಟ್ಟಲೆ ಕಾದು ವಾಪಸ್‌ ಹಿಂತಿರುಗಿದ ಘಟನೆ ಜರುಗಿತು.

ಸೋಮವಾರ ಸಂಜೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದರು. ಭೇಟಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಾರತಿ ವಿಷ್ಣುವರ್ಧನ್‌ ಅವರಿಗೆ ಸಮಯವನ್ನು ಸಹ ನೀಡಿದ್ದರು. ಆದರೆ, ಮುಖ್ಯಮಂತ್ರಿಗಳು ಸಾಲು ಸಾಲು ಸಭೆಗಳಲ್ಲಿ ಭಾಗಿಯಾಗಿದ್ದರು. ಸುಮಾರು ಎರಡು ತಾಸುಗಳ ಕಾಲ ಕಾದು ಕುಳಿತರೂ ಅವರನ್ನು ಒಳಗೆ ಕರೆಯದ ಕಾರಣ ಭೇಟಿಯಾಗದೆ ಹಿಂತಿರುಗಿದರು.

ಮತ್ತೊಮ್ಮೆ ಮುಖ್ಯಮಂತ್ರಿಗಳ ಭೇಟಿಗೆ ಸಮಯ ಕೇಳಿ ವಿಷ್ಣುವರ್ಧನ್‌ ಸ್ಮಾರಕ ಸ್ಥಳಾಂತರ ಕುರಿತು ಚರ್ಚಿಸಲಾಗುವುದು ಎಂದು ನಂತರ ಅನಿರುದ್ಧ ಸುದ್ದಿಗಾರರಿಗೆ ತಿಳಿಸಿದರು.