ಬೆಂಗಳೂರು(ಸೆ.8): ಕೇಂದ್ರ ಸರ್ಕಾರದ ತೈಲದರ ಏರಿಕೆ ವಿರುದ್ದ ಪ್ರತಿಪಕ್ಷ ಕಾಂಗ್ರೆಸ್ ನೀಡಿರುವ ಭಾರತ್ ಬಂದ್ ಕರೆಗೆ ಕರ್ನಾಟಕದಲ್ಲಿ ಭಾರೀ ಬೆಂಬಲ ಸಿಗುವ ನಿರೀಕ್ಷೆ ಕಂಡು ಬರುತ್ತಿದೆ. ಕಾಂಗ್ರೆಸ್ ಕರೆ ನೀಡಿರುವ  ಭಾರತ್ ಬಂದ್ ಗೆ ಈಗಾಗಲೇ ರಾಜ್ಯದ ಹಲವು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಅಲ್ಲದೇ ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷ ಜೆಡಿಎಸ್ ಕೂಡ ಬೆಂಬಲ ಬಂದ್ ಗೆ ಘೋಷಿಸಿದೆ.  

ತೈಲದರ ಏರಿಕೆ ವಿರುದ್ದ ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್ ಗೆ ಬೆಂಬಲ ನೀಡಿರುವ ಜೆಡಿಎಸ್, ಬೆಲೆ ಏರಿಕೆ ಬಿಸಿ ಕಡಿಮೆ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ, ಈ ಹಿಂದಿನ ಯಾವ ಸರ್ಕಾರವೂ ಮಾಡಿರದಷ್ಟು ಬೆಲೆ ಏರಿಕೆ ಮಾಡಿದೆ ಎಂದು ಹರಿಹಾಯ್ದಿದೆ.

ಅದರಂತೆ ಸೋಮವಾರದ ಭಾರತ್ ಬಂದ್ ಗೆ ರಾಜ್ಯದ ನಾಲ್ಕೂ ಸಾರಿಗೆ ನಿಗಮದ ನೌಕರರು ಬೆಂಬಲ ಸೂಚಿಸಿದ್ದು, ಕೆಎಸ್ ಆರ್ ಟಿಸಿ ಸ್ಟಾಫ್ ಅಂಡ್ ವರ್ಕ್ಸ್ ಫೆಡರೇಶನ್ ನಿಂದ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸೆ. ೧೦ ರಂದು ಬೆಳಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆವರೆಗೆ ಸುಮಾರು ೧.೧೬ ಲಕ್ಷ ಸಾರಿಗೆ ನೌಕರರು ಪ್ರತಿಭಟನೆ ನಡೆಸಲಿದ್ದು, ನಾಲ್ಕೂ ನಿಗಮದ ೨೫ ಸಾವಿರ ಬಸ್ಸುಗಳು ರಸ್ತೆಗೆ ಇಳಿಯುವದಿಲ್ಲ.

ಇನ್ನು ಸೋಮವಾರದ ಬಂದ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಚಿತ್ರಮಂದಿರಗಳನ್ನು ಬಂದ್ ಮಾಡುವುದಾಗಿ ಹೇಳಿದೆ. ಈ ಕುರಿತು ಮಾತನಾಡಿರುವ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್, ಭಾರತ್ ಬಂದ್ ಪ್ರತಿಭಟನೆ ನಡೆಸುವುದು ಅವಶ್ಯವಾಗಿದ್ದು, ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

ಇನ್ನು ಭಾರತ್ ಬಂದ್ ಕರೆಗೆ ಓಲಾ, ಉಬರ್  ಓನರ್ ಮತ್ತು ಡ್ರೈವರ್ ಅಸೋಸಿಯೇಷನ್ ಕೂಡ ಸಂಪೂರ್ಣ ಬೆಂಬಲ ಸೂಚಿಸಿದೆ. ಸೆ. 10 ರಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ವರೆಗೆ ಖಾಸಗಿ ಕ್ಯಾಬ್ ಗಳು ರಸ್ತೆಗೆ ಇಳಿಯೋದಿಲ್ಲ. ಏರ್ ಪೋರ್ಟ್ ಟ್ಯಾಕ್ಸಿ ಸೇರಿದಂತೆ ಎಲ್ಲಾ ಕ್ಯಾಬ್ ಗಳು ಮುಷ್ಕರದಲ್ಲಿ ಭಾಗಿಯಾಗಲಿವೆ ಎಂದು  ಒಲಾ, ಉಬರ್ ಓನರ್ ಮತ್ತು ಡ್ರೈವರ್ ಅಸೋಸಿಯೇಷನ್ ಅಧ್ಯಕ್ಷ ತನ್ವಿರ್ ಪಾಷಾ ಹೇಳಿದ್ದಾರೆ.

ಒಟ್ಟಿನಲ್ಲಿ ಸೋಮವಾರ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್ ಗೆ ರಾಜ್ಯದಲ್ಲಿ ಭಾರೀ ಬೆಂಬಲ ಸಿಗುವುದು ಖಚಿತವಾಗಿದ್ದು, ಅಗತ್ಯ ಸೇವೆ ಹೊರತುಪಡಿಸಿ ಇಡೀ ರಾಜ್ಯ ಸ್ತಬ್ಧವಾಗುವುದು ಖಚಿತ ಎಂದು ಹೇಳಲಾಗುತ್ತಿದೆ.