ಬೆಂಗಳೂರು :  ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್‌ನ ಎರಡನೇ ದಿನವಾದ ಬುಧವಾರದಂದು ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇದೆ.

ಮೊದಲ ದಿನವೇ ಒಂದೆರಡು ಜಿಲ್ಲೆಗಳನ್ನು ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಬುಧವಾರದ ಬಂದ್‌ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲ ಜಿಲ್ಲಾ ಕೇಂದ್ರಗಳಿಗೆ ಸೀಮಿತವಾಗಿರುವುದರಿಂದ ಬಂದ್‌ ಬಿಸಿ ಸ್ವಲ್ಪ ಮಟ್ಟಿಗೆ ಪ್ರಮುಖ ನಗರಗಳಿಗೆ ತಟ್ಟುವ ಸಾಧ್ಯತೆ ಇದೆ.

ಹೋಟೆಲ್‌, ಮಾಲ್‌, ಅಂಗಡಿ ಮಾಲೀಕರು, ಕೆಲ ಆಟೋ ಸಂಘಟನೆಗಳು ಮೊದಲ ದಿನವೇ ಬಂದ್‌ಗೆ ನೈತಿಕ ಬೆಂಬಲವನ್ನಷ್ಟೇ ವ್ಯಕ್ತಪಡಿಸಿದ್ದವು. ಹಾಗಾಗಿ ಬುಧವಾರವೂ ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಆದರೆ, ಕಾರ್ಮಿಕರು ಪ್ರತಿಭಟನೆ, ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದರಿಂದ ಗಾರ್ಮೆಂಟ್ಸ್‌ , ಪೌರಕಾರ್ಮಿಕರು, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತೆಯರು, ಅಂಚೆ ಕಚೇರಿ ಸೇರಿದಂತೆ ಕೆಲ ಕೇಂದ್ರ, ರಾಜ್ಯ ಸರ್ಕಾರಿ ಇಲಾಖೆಗಳಡಿ ಬರುವ ಹೊರಗುತ್ತಿಗೆ ನೌಕರರು, ಸಿಬ್ಬಂದಿ ಕೂಡ ಪಾಲ್ಗೊಳ್ಳುವುದರಿಂದ ಸೇವಾ ವಲಯದಲ್ಲಿ ಕೊಂಚ ಅಡಚಣೆಯಾಗಬಹುದು.

ಇಂದು ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ

ಬೆಂಗಳೂರು: ಎರಡನೇ ದಿನದ ಬಂದ್‌ ವೇಳೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸುವ ನಿರ್ಧಾರವನ್ನು ಈಗಾಗಲೇ ಸರ್ಕಾರ ಆಯಾ ಜಿಲ್ಲಾಡಳಿತಗಳಿಗೆ ನೀಡಿವೆ. ಇದನ್ನು ಆಧರಿಸಿ ಈಗಾಗಲೇ ಬೆಂಗಳೂರು, ಮೈಸೂರು, ಕೋಲಾರ, ಬಾಗಲಕೋಟೆ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಬುಧವಾರ ರಜೆ ಇಲ್ಲ. ಎಂದಿನಂತೆ ಶಾಲಾ, ಕಾಲೇಜುಗಳು ಕಾರ್ಯನಿರ್ವಹಿಸಲಿವೆ ಎಂದು ಘೋಷಿಸಿದ್ದಾರೆ. ಇನ್ನೂ ಕೆಲ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಬೀಳಬೇಕಿದೆ.

ಬುಧವಾರ ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅದೇ ರೀತಿ ಬಂದ್‌ ಬಿಸಿ ಮುಂದುವರೆದರೆ ಬೆಂಗಳೂರು ಸೇರಿದಂತೆ ಕೆಲ ಜಿಲ್ಲಾ ಕೇಂದ್ರಗಳಲ್ಲಿ ಕೆಎಸ್‌ಆರ್‌ಟಿಸಿ ಸೇರಿದಂತೆ ನಗರ ಸಾರಿಗೆ ಬಸ್ಸುಗಳ ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯವಾಗಬಹುದು. ಪರಿಸ್ಥಿತಿ ನೀಡಿಕೊಂಡು ಆಯಾ ನಿಗಮಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿವೆ ಎಂದು ಕೆಎಸ್‌ಆರ್‌ಟಿಸಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇನ್ನು, ಸರ್ಕಾರಿ ನೌಕರರ ಸಂಘಕೂಡ ಬಂದ್‌ಗೆ ನೈತಿಕ ಬೆಂಬಲ ನೀಡಿರುವುದರಿಂದ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.