ಬೆಂಗಳೂರು (ಸೆ. 11):  ‘ಇರಾನ್‌, ಇರಾಕ್‌ನಲ್ಲಿ ನಮ್ಮ ಮಾವಂದಿರು ಇಲ್ಲ. ತೈಲವನ್ನು ಪುಕ್ಕಟ್ಟೆಯಾಗಿ ನೀಡುವುದಿಲ್ಲ. ಕೊಟ್ಟರೆ ನಾವು ಕೊಡುತ್ತಿದ್ದೆವು. ನಿಮ್ಮ ಮಾವಂದಿರು ಇದ್ದರೆ ಹೇಳಿ.’ ನೀರಿನಲ್ಲಿ ಬಸ್‌ ಓಡಿಸುವುದಕ್ಕೆ ಆಗುವುದಿಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿಕೆಗೆ ಮಾಜಿ ಸಚಿವ ಸಿ.ಟಿ.ರವಿ ನೀಡಿದ ತಿರುಗೇಟು ಇದು.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಹತಾಶೆ ಹೆಚ್ಚಾಗಿದೆ. ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸುತ್ತಿದ್ದಾರೆ. ಕುಟುಂಬದ ನಿಯಂತ್ರಣದಿಂದ ಅಧಿಕಾರ ಕೈತಪ್ಪಿ ಚಡಪಡಿಕೆ ಅಧಿಕವಾಗಿದೆ. ಇದಕ್ಕಾಗಿ ಭಾರತ್‌ ಬಂದ್‌ ನಡೆಸಲಾಗಿದೆ ಎಂದರು.

ರಾಜ್ಯದ ತೆರಿಗೆಯನ್ನು ಕಡಿಮೆ ಮಾಡಬೇಕು. ಬೆಲೆ ಇಳಿಸಬೇಕಿರುವುದು ರಾಜ್ಯ ಸರ್ಕಾರವೇ ಹೊರತು ಕೇಂದ್ರ ಸರ್ಕಾರವಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಪೆಟ್ರೋಲ್‌, ಡಿಸೇಲ್‌ ಬೆಲೆಯಲ್ಲಿ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರವು 6 ರು. ಮಾತ್ರ ತೆರಿಗೆ ಹಾಕಿದರೆ ರಾಜ್ಯ ಸರ್ಕಾರವು 26 ರು. ತೆರಿಗೆ ಹಾಕುತ್ತಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಂದ್‌ಗೆ ಬೆಂಬಲ ನೀಡುವ ಮೊದಲು ತಮ್ಮ ಪಾತ್ರವೇನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

ಇವರಿಗೆ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ನಂಬಿಕೆ ಇಲ್ಲ. ಹಾಗಾಗಿ ನಮ್ಮ ಕಾರ್ಯಕರ್ತರ ಮೇಲೆ ಹತಾಶೆಯಿಂದ ಹಲ್ಲೆ ನಡೆಸಿದ್ದಾರೆ. ಬೆಲೆ ಎರಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಕಾರಣವೇ ಹೊರತು ಮೋದಿ ಅಲ್ಲ ಎಂದು ಜನರಿಗೆ ಗೊತ್ತು. ಜನರು ನಮ್ಮೊಂದಿಗೆ ಇದ್ದಾರೆ. ಇವರ ದೌರ್ಜನ್ಯವನ್ನು ನಾವು ಜನರೊಟ್ಟಿಗೆ ಸೇರಿ ಎದುರಿಸುತ್ತೇವೆ ಎಂದರು.