ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ಮತ್ತು ರಸ್ತೆ ಸುರಕ್ಷತಾ ಕಾಯ್ದೆಯ ನಿಯಮಗಳನ್ನು ಖಂಡಿಸಿ ಇವತ್ತು ಕರೆ ಕೊಟ್ಟಿದ್ದ ಭಾರತ್ ಬಂದ್ ಭಾಗಶ: ಯಶಸ್ವಿಯಾಗಿದೆ. ಭಾರತ್ ಬಂದ್​ ನಿಂದಾಗಿ ರಾಜಧಾನಿ ಬೆಂಗಳೂರಿನಲ್ಲೂ ಜನಜೀವನ ಅಸ್ತವ್ಯಸ್ತವಾಗಿತ್ತು.

ವಿವಿಧ ಕಾರ್ಮಿಕ ಮತ್ತು ಇತರೇ ವಲಯಗಳ ಸಂಘಟನೆಗಳು ಕರೆಕೊಟ್ಟಿದ್ದ ಭಾರತ್ ಬಂದ್​ ಗೆ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ ಚಟುವಟಿಕೆಗಳು ಭಾಗಶ: ಸ್ಥಗಿತವಾಗಿದ್ದವು. ಬಸ್ಸು, ಆಟೋಗಳು ಸಿಗದೇ ಪ್ರಯಾಣಿಕರು ಪರದಾಡಿದರು. ನಗರದ ಕೆಲವು ಕಡೆ ರಸ್ತೆಗಿಳಿದಿದ್ದ ಖಾಸಗಿ ಕಾರುಗಳಿಗೆ ಕಲ್ಲು ಹೊಡೆಯಲಾಯ್ತು.

ಇವತ್ತು ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿದ್ದ ಬಂದ್​ ನಿಂದಾಗಿ ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್​ ಗಳು ರಸ್ತೆಗೆ ಇಳಿಯಲಿಲ್ಲ. ಇದರ ಪರಿಣಾಮ ಸಾವಿರಾರು ಪ್ರಯಾಣಿಕರು ಬಸ್ ಸಿಗದೇ ಪರದಾಡಬೇಕಾಯ್ತು.

ಆದರೆ ಈ ಭಾರತ್​ ಬಂದ್​ ಗೆ ನಮ್ಮ ಮೆಟ್ರೋ ಬೆಂಬಲ ಕೊಟ್ಟಿರ್ಲಿಲ್ಲ. ಇಂದು ಬೆಳಗ್ಗೆ 6 ಗಂಟೆಯಿಂದಲೇ ನಮ್ಮ ಮೆಟ್ರೋ ರೈಲುಗಳು ಸಂಚಾರ ಆರಂಭಿಸಿದವು. ಪ್ರತೀ ಐದು ನಿಮಿಷಕ್ಕೊಮ್ಮೆ ಮೆಟ್ರೋ ರೈಲುಗಳ ಸಂಚಾರ ಇತ್ತು. ಬಸ್ಸು, ಆಟೋಗಳು ಸಿಗದ ಕಾರಣ ಅಪಾರ ಸಂಖ್ಯೆಯಲ್ಲಿ ಪ್ರಯಾಣಿಕರು ಮೆಟ್ರೋದಲ್ಲಿ ಓಡಾಡಿದರು. ಇನ್ನು ಬಂದ್ ಹಿನ್ನೆಲೆಯಲ್ಲಿ ಎಲ್ಲ ಮೆಟ್ರೋ ಸ್ಟೇಷನ್ ​ಗಳಿಗೂ ಬಿಗಿ ಪೊಲೀಸ್ ಕಾವಲು ಹಾಕಲಾಗಿತ್ತು.

ಭಾರತ್ ಬಂದ್ ಕೆ.ಆರ್.ಮಾರುಕಟ್ಟೆಗೂ ಬಿಸಿ ಮುಟ್ಟಿಸಿತ್ತು. ಮಾರ್ಕೆಟ್​ ನಲ್ಲಿ ಇಂದು ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ-ವಹಿವಾಟು ನಡೀಲಿಲ್ಲ. ಬಸ್ಸು, ಗೂಡ್ಸ್ ಆಟೋಗಳ ಸಂಚಾರ ಇಲ್ಲದ ಕಾರಣ ತರಕಾರಿ, ಹಣ್ಣು, ಹೂ ವ್ಯಾಪರಿಗಳ ಸಂಖ್ಯೆಯೂ ಮಾರ್ಕೆಟ್​ನಲ್ಲಿ ಕಡಿಮೆಯಿತ್ತು.

ಇನ್ನು ಈ ಬಂದ್ ನಡುವೆಯೂ ಪೊಲಿಸರು ಬಸ್, ಆಟೋ ಸಿಗದೇ ಪರದಾಡುತ್ತಿದ್ದ ಸಾರ್ವಜನಿಕರ ನೆರವಿಗೆ ಧಾವಿಸಿದರು. ಇಂದು ಬೆಳಗ್ಗೆ ಬೆಂಗಳೂರಿಗೆ ಆಘಮಿಸಿದ ತರಾಯಚೂರು ಮೂಲದ ದಂಪತಿ ಮೆಜೆಸ್ಟಿಕ್ ಬಸ್​ ನಿಲ್ದಾಣದಲ್ಲಿ ಕಾಯ್ತಿದ್ರು. ಈ ದಂಪತಿ ಮಡಿವಾಳಕ್ಕೆ ಹೋಗಬೇಕಿತ್ತು. ಬಸ್​ಗಾಗಿ ತುಂಬಾ ಹೊತ್ತು ಕಾದುಕೂತಿದ್ದ ದಂಪತಿಯನ್ನು ಪೊಲೀಸರೇ ತಮ್ಮ ವಾಹನದಲ್ಲೇ ಕಳಿಸಿಕೊಟ್ಟು ಮಾನವೀಯತೆ ಮೆರೆದರು.

ಇನ್ನು ಭಾರತ್​ ಬಂದ್​ ಗೆ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಬೆಂಬಲ ಕೊಟ್ಟಿರಲಿಲ್ಲ. ಬಂದ್​ ಇದ್ರೂ ನಗರದಲ್ಲಿ ಪೆಟ್ರೋಲ್ ಬಂಕ್​ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ ಬಂದ್ ಕಾರಣ ಖಾಸಗಿ ವಾಹನಗಳು ಅಷ್ಟಾಗಿ ರಸ್ತೆಗೆ ಇಳಿದಿರಲಿಲ್ಲ.

ಇನ್ನು ನಗರದ ಹೊಟೇಲ್​ ಗಳ ಸಂಘದಿಂದಲೂ ಬಂದ್​ ಗೆ ಬೆಂಬಲ ಕೊಟ್ಟಿರಲಿಲ್ಲ. ಹೊಟೇಲ್ ಉದ್ಯಮ ಎಂದಿನಂತೆ ಕಾರ್ಯನಿರ್ವಹಿಸಿತು. ಜನರಿಗೆ ಬಸ್ಸು, ಆಟೋ ಸಿಗದಿದ್ರೂ ಇವತ್ತು ತಿಂಡಿ, ಊಟಕ್ಕೇನೂ ಬರ ಇರಲಿಲ್ಲ. ಆದ್ರೆ ಬಂದ್​ ನಿಂದಾಗಿ ಹೊಟೇಲ್ ಉದ್ದಿಮೆ ವಹಿವಾಟು ಕೊಂಚ ಇಳಿಮುಖವಾಗಿತ್ತು.

ಸಾರಿಗೆ ಬಂದ್ ​ನಿಂದಾಗಿ ನಗರದ ಆಸ್ಪತ್ರೆಗಳಲ್ಲಿ ರೋಗಿಗಳೂ ಪರದಾಡಬೇಕಾಯ್ತು. ಸಾರಿಗೆ ಸೌಕರ್ಯ ಇಲ್ಲದ ಕಾರಣ ದೂರದೂರುಗಳಿಂದ ಬರುತ್ತಿದ್ದ ರೋಗಿಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಒಂದಷ್ಟು ಮಂದಿ ಬಂದ್ ನಡುವೆಯೂ ರಸ್ತೆಗಿಳಿದಿದ್ದ ಆಟೋ, ಕಾರ್​ಗಳ ಮೂಲಕ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬರ್ತಿದರು. ಆದ್ರೆ ಆಸ್ಪತ್ರೆಗಳಲ್ಲಿ ಇಂದು ರೋಗಿಗಳನ್ನು ಡಿಸ್ ​ಚಾರ್ಜ್ ಮಾಡಲಿಲ್ಲ. ಇನ್ನು ಮೆಡಿಕಲ್ ಷಾಪ್​ ಗಳು ಎಂದಿನಂತೆ ಬಾಗಿಲು ತೆರೆದಿದವು. ಆಂಬುಲೆನ್ಸ್​ಗಳ ಸೇವೆಗೂ ವ್ಯತ್ಯಯ ಆಗಲಿಲ್ಲ.

ಇತ್ತ ಮಾರತ್ತಹಳ್ಳಿಯಲ್ಲಿ ಕಿಡಿಗೇಡಿಗಳು ರಸ್ತೆಗಿಳಿದಿದ್ದ 20ಕ್ಕೂ ಹೆಚ್ಚು ಖಾಸಗಿ ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ ಘಟನೆಯ ನಡೀತು. ಕಿಡಿಗೇಡಿಗಳು ಮಚ್ಚು ಲಾಂಗು ಬಳಸಿ ಕಾರುಗಳ ಗಾಜುಗಳನ್ನು ಒಡೆದು ಹಾಕಿದರು ಎನ್ನಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನೆಲೆಸಿತ್ತು. ಸ್ಥಳಕ್ಕೆ ಎಚ್​ಎಎಲ್ ಠಾಣೆ ಪೊಲಿಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಇನ್ನು ಕೇಂದ್ರದ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಕಾಯ್ದೆಯ ನಿಯಮಗಳನ್ನು ಖಂಡಿಸಿ ರಾಜ್ಯ ಟ್ಯಾಕ್ಸಿ ಡ್ರೈವರ್​ಗಳ ಸಂಘದ ಸದಸ್ಯರು ಟೌನ್​ಹಾಲ್ ಬಳಿ ಪ್ರತಿಭಟನೆ ನಡೆಸಿದರು. ರಸ್ತೆ ಸುರಕ್ಷತಾ ಕಾಯ್ದೆಯನ್ನು ರದ್ದು ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಇತ್ತ ಗೊರಗುಂಟೆಪಾಳ್ಯದಲ್ಲೂ ಕೂಡಾ ಕೇಂದ್ರ ಕೇಂದ್ರದ ಕಾರ್ಮಿಕ ನೀತಿ ಖಂಡಿಸಿ ವಿವಿಧ ಕೈಗಾರಿಕೆಗಳ ಕಾರ್ಮಿಕರು ಪ್ರತಿಭಟಿಸಿದರು. ಇನ್ನು ಒಂದಷ್ಟು ಆಟೋಗಳು ಸಾರ್ವಜನಕರಿಂದ ಹೆಚ್ಚು ದರ ಪಡೆದು ಪ್ರಯಾಣಿಕರ ಸುಲಿಗೆಗೆ ಇಳಿದಿದವು. ಅಲ್ಲದೇ ಮೀಟರ್ ಹಾಕದೆಯೂ ಆಟೋ ಓಡಿಸ್ತಿದರು. ಇಂಥ ಆಟೋಗಳ ಮೇಲೆ ದಾಳಿ ಮಾಡಿದ ಸಾರಿಗೆ ಇಲಾಖೆ ಅಧಿಕಾರಿಗಳು ಆಟೋ ಚಾಲಕರಿಗೆ ದಂಡ ಹಾಕಿದರು.

ಇನ್ನು ಕೇಂದ್ರದ ಕಾರ್ಮಿಕ ನೀತಿಗಳನ್ನು ಖಂಡಿಸಿ ಸಿಐಟಿಯು ಸಂಘಟನೆ ಕಾರ್ಯಕರ್ತರು ಮಿನರ್ವ ವೃತ್ತದಿಂದ ಟೌನ್​ಹಾಲ್ ವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದ್ರು. 500 ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಭಾರತ್ ಬಂದ್ ಬೆಂಬಲಿಸಿ ವಿವಿಧ ಕಾರ್ಮಿಕ ಸಂಘಟನೆಗಳು ನಗರದ ಟೌನ್​ಹಾಲ್ ನಿಂದ ಫ್ರೀಡಂ ಪಾರ್ಕ್​ವರೆಗೂ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಮೊದಲು ಸಿಯಟಿಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಕೇಂದ್ರದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಕೇಂದ್ರದ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ಕಾರಿದ್ರು. ಬಳಿಕ ಫ್ರೀಡಂ ಪಾರ್ಕ್​ವರೆಗೂ ಪ್ರತಿಭಟನಾ ರ್ಯಾಲಿ ನಡೆಸಲಾಯ್ತು.

ಇನ್ನು ಇತ್ತ ಪೀಣ್ಯ ಜಾಲಹಳ್ಳಿಯಲ್ಲೂ ಎಸ್​ಐಟಿಐ ಸಂಘಟನೆಯಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯ್ತು. ಎಸ್​ಎಐಟಿ ಸಂಘಟನೆ ನೇತೃತ್ವದಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ರ್ಯಾಲಿ ನಡೆಸಿ ಕೇಂದ್ರದ ಕಾರ್ಮಿಕ ನೀತಿಯನ್ನು ಖಂಡಿಸಿದ್ರು. ಬಿಗಿ ಪೊಲೀಸ್ ಕಾವಲು ಹಾಕಲಾಗಿತ್ತು.

ಇನ್ನು ಕೇಂದ್ರ ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಎಸ್​ಐ ಆಸ್ಪತ್ರೆಗಳ ನರ್ಸ್​ಗಳೂ ಪ್ರತಿಭಟನೆ ನಡೆಸಿದ್ರು. ರಾಜಾಜಿನಗರದ ಇಎಸ್​ಐ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ನರ್ಸ್​ಗಳು 7ನೇ ವೇತನ ಆಯೋಗದಲ್ಲಿ ಅನ್ಯಾಯ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.