ಬೆಂಗಳೂರು : ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಕೊಲೆ ಸಂಚು ಪ್ರಕರಣದ ತನಿಖೆ ಪೂರ್ಣಗೊಳಿಸಿದ ಉಪ್ಪಾರಪೇಟೆ ಠಾಣೆ ಪೊಲೀಸರು, ಹಿರಿಯ ಪತ್ರಕರ್ತೆ ಗೌರಿ ಹತ್ಯೆ ಕೃತ್ಯದ ಪ್ರಮುಖ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ 730 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರಾದ ಮದ್ದೂರು ತಾಲೂಕಿನ ಕೆ.ಟಿ. ನವೀನ್ ಕುಮಾರ್, ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದ ಸುಜಿತ್ ಕುಮಾರ್ ಅಲಿ ಯಾಸ್ ಪ್ರವೀಣ್, ಮಹಾರಾ ಷ್ಟ್ರದ ಅಮೋಲ್ ಕಾಳೆ ಅಲಿ ಯಾಸ್ ಬಾಯ್‌ಸಾಬ್, ಅಮಿತ್ ದೇಗ್ವೇಕರ್ ಅಲಿಯಾಸ್ ಪ್ರದೀಪ್ ಹಾಗೂ ವಿಜಯ ಪುರ ಜಿಲ್ಲೆ ರತ್ನಾಪುರ ಗ್ರಾಮದ ಮನೋಹರ್ ದುಂಡಪ್ಪ ಯಡವೆ ಅಲಿಯಾಸ್ ಮನೋಜ್ ಅವರು ಕೊಲೆ ಸಂಚಿನ ಪಾಲ್ಗೊಂಡಿರುವುದಕ್ಕೆ ತನಿಖೆಯಲ್ಲಿ ಸಾಕ್ಷ್ಯ ಲಭ್ಯವಾಗಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 730ಪುಟಗಳ ಆರೋಪಪಟ್ಟಿ ಸಲ್ಲಿಸಿರುವ  ಪೊಲೀಸರು, ಇದರಲ್ಲಿ ಪ್ರೊ.ಕೆ.ಎಸ್.ಭಗವಾನ್, ಆರೋಪಿ ಕೆ.ಟಿ.ನವೀನ್ ಅಲಿಯಾಸ್ ಹೊಟ್ಟೆ ಮಂಜನ ಸ್ನೇಹಿತ ಶ್ರೀರಂಗಪಟ್ಟಣದ ಅನಿಲ್ ಕುಮಾರ್ ಸೇರಿದಂತೆ 160 ಮಂದಿ ಸಾಕ್ಷಿಗಳ ಹೇಳಿಕೆ ಹಾಗೂ ಎಫ್‌ಎಸ್‌ಎಲ್ ತಜ್ಞರ ವರದಿ ಸಹ
ಲಗತ್ತಿಸಿದ್ದಾರೆ ಎಂದು ತಿಳಿದು ಬಂದಿದೆ. 

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ, ಇದೇ ವರ್ಷ ಫೆ.18 ರಂದು ಮೆಜೆಸ್ಟಿಕ್ ಬಳಿ ಶಸ್ತ್ರಾಸ್ತ್ರ ಮಾರಾಟ ಯತ್ನಿಸಿದ್ದಾಗ ಹೊಟ್ಟೆ ಮಂಜನ ಬಗ್ಗೆ ಮಾಹಿತಿ ಪಡೆದು ಬಂಧಿಸಿತು. ಬಳಿಕ ಆತನ ವಿಚಾರಣೆ ನಡೆಸಿದಾಗ ಪ್ರೊ.ಭಗವಾನ್ ಕೊಲೆ ಸಂಚು ಬಯಲಾಗಿತ್ತು. ಈ ಸಂಬಂಧ ಉಪ್ಪಾರಪೇಟೆ ಠಾಣೆಯ ಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಐವರು ಆರೋಪಿಗಳು ಕೊಲೆ ಸಂಚಿನಲ್ಲಿ ಪಾಲ್ಗೊಂಡಿರುವ ಕುರಿತು ಖಚಿತ ಪುರಾವೆಗಳನ್ನು ಸಂಗ್ರಹಿಸಿದೆ ಎನ್ನಲಾಗಿದೆ.