ನವದೆಹಲಿ[ಜು.10]: ಕಂಪ್ಯೂಟರ್‌ಗಳು, ಕಂಪನಿಯ ಸರ್ವರ್‌ಗಳನ್ನು ಹ್ಯಾಕ್‌ ಮಾಡುವುದನ್ನು ಕೇಳಿದ್ದೇವೆ. ಆದರೆ ಸೂರತ್‌ನಲ್ಲಿ ಕಂಡುಕೇಳರಿಯದ ಪ್ರಕರಣವೊಂದು ವರದಿಯಾಗಿದೆ. ಮನೆಯೊಂದರ ಬೆಡ್‌ರೂಂನಲ್ಲಿ ಅಳವಡಿಸಲಾಗಿದ್ದ ಸ್ಮಾರ್ಟ್‌ ಟೀವಿಯನ್ನು ಹ್ಯಾಕ್‌ ಮಾಡಿ, ದಂಪತಿಯ ಲೈಂಗಿಕ ಕ್ರಿಯೆ ದೃಶ್ಯಗಳನ್ನು ಸೆರೆ ಹಿಡಿದು, ಅಶ್ಲೀಲ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಲಾಗಿರುವ ಘಟನೆ ನಡೆದಿದೆ. ತನ್ನದೇ ವಿಡಿಯೋ ಆನ್‌ಲೈನ್‌ ಅಶ್ಲೀಲ ಜಾಲತಾಣದಲ್ಲಿರುವುದನ್ನು ಪತಿ ನೋಡಿದ ಬಳಿಕ ಈ ಅಕ್ರಮ ಬಯಲಾಗಿದೆ. ಇದು ಸ್ಮಾರ್ಟ್‌ ಟೀವಿ ಬಳಕೆದಾರರಿಗೆ ಎಚ್ಚರಿಕೆ ಗಂಟೆಯಾಗಿದೆ.

ಪೊಲೀಸರಿಗೆ ದೂರು ನೀಡಿದರೆ ಮುಜುಗರಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಈ ದಂಪತಿ, ಖಾಸಗಿ ಸೈಬರ್‌ ತಜ್ಞರ ಸಹಾಯದಿಂದ ಅಶ್ಲೀಲ ವೆಬ್‌ ತಾಣದಿಂದ ವಿಡಿಯೋವನ್ನು ಅಳಿಸಿ ಹಾಕುವಲ್ಲಿ ಸಫಲವಾಗಿದೆ.

ಆಗಿದ್ದೇನು?:

ಸೂರತ್‌ನಲ್ಲಿರುವ, ಹೆಚ್ಚಾಗಿ ಸಿರಿವಂತರು ವಾಸಿಸುವ ಬಡಾವಣೆಯ ನಿವಾಸಿಯಾಗಿರುವ ರಾಜೇಶ್‌ (ಹೆಸರು ಬದಲಿಸಲಾಗಿದೆ) ಎಂಬುವರಿಗೆ ಸ್ಮಾರ್ಟ್‌ ಟೀವಿ ಮೂಲಕ ಅಶ್ಲೀಲ ವೆಬ್‌ಸೈಟ್‌ಗಳನ್ನು ಸಂದರ್ಶಿಸಿ, ವಿಡಿಯೋ ನೋಡುವ ಅಭ್ಯಾಸವಿದೆ. ಒಂದು ದಿನ ಇದೇ ರೀತಿಯ ವಿಡಿಯೋ ನೋಡುತ್ತಿರುವಾಗ, ರಾಜೇಶ್‌ ಅವರು ತಮ್ಮ ಪತ್ನಿ ಜತೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ವೆಬ್‌ಸೈಟ್‌ನಲ್ಲಿ ಗೋಚರವಾಗಿದೆ. ಇದನ್ನು ನೋಡಿ ದಂಗಾದ ಅವರು ಪೊಲೀಸರಿಗೆ ದೂರು ನೀಡಲು ಮುಜುಗರವಾಗಿದೆ. ಹೀಗಾಗಿ ಖಾಸಗಿ ಸೈಬರ್‌ ತಜ್ಞರ ಮೊರೆ ಹೋಗಿದ್ದಾರೆ.

ಆ ತಜ್ಞರು ರಾಜೇಶ್‌ ಮಲಗುವ ಕೋಣೆಯಲ್ಲೆಲ್ಲಾ ಜಾಲಾಡಿದ್ದಾರೆ. ಯಾವುದೇ ಕ್ಯಾಮೆರಾ ಸಿಕ್ಕಿಲ್ಲ. ವಿಡಿಯೋ ಯಾವ ರೀತಿ ಸೆರೆಯಾಯಿತು ಹಾಗೂ ಅಪ್‌ಲೋಡ್‌ ಆಯಿತು ಎಂಬ ವಿಚಾರಕ್ಕಾಗಿ ಸಾಕಷ್ಟುತಲೆಕೆಡಿಸಿಕೊಂಡಿದ್ದಾರೆ. ಕೊನೆಗೆ ಕೋಣೆಯಲ್ಲಿದ್ದ ಟೀವಿ ಮೇಲೆ ಅನುಮಾನ ಬಂದಿದೆ.

ರಾಜೇಶ್‌ ಅವರು ಅಶ್ಲೀಲ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಿದ್ದರು. ಆ ಸಂದರ್ಭದಲ್ಲಿ ಹ್ಯಾಕರ್‌ ಟೀವಿಯನ್ನು ಕಂಪ್ಯೂಟರ್‌ ರೀತಿ ಹ್ಯಾಕ್‌ ಮಾಡಿದ್ದಾನೆ. ಅದರಲ್ಲಿದ್ದ ಕೆಮೆರಾವನ್ನು ನಿಯಂತ್ರಿಸಿ, ತನಗೆ ಬೇಕಾದಾಗ ವಿಡಿಯೋ ಸೆರೆ ಹಿಡಿದಿದ್ದಾನೆ. ಆ ಟೀವಿ ವೈಫೈ ಜತೆ ಸಂಪರ್ಕ ಹೊಂದಿದ್ದ ಕಾರಣ ದೃಶ್ಯಗಳು ನೇರವಾಗಿ ಆತನಿಗೆ ಸಿಕ್ಕಿವೆ. ಬಳಿಕ ಆತ ವಿಡಿಯೋವನ್ನು ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡಿದ್ದಾನೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ರಾಜೇಶ್‌ ಅವರು ಸೈಬರ್‌ ತಜ್ಞರ ಸಹಾಯದಿಂದ ಆ ವಿಡಿಯೋವನ್ನು ಅಳಿಸಿ ಹಾಕುವಲ್ಲಿ ಸಫಲರಾಗಿದ್ದಾರೆ. ಟೀವಿ ತಯಾರಿಕಾ ಕಂಪನಿಗಳು ಹಲವು ಭದ್ರತಾ ಅಂಶಗಳನ್ನು ಅಳವಡಿಸಿರುವುದಾಗಿ ಹೇಳಿದರೂ, ಆನ್‌ಲೈನ್‌ ಭದ್ರತೆಯ ಖಾತ್ರಿ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ.