ಬಿಸಿಲಿಗೆ ‘ಬೆಂದ’ಕಾಳೂರಿಗೆ ತಂಪೆರೆದ ಮಳೆ! ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಬೆಂಗಳೂರಿಗೆ ತಂಪೆರೆದ ಮಳೆರಾಯ | ಅಲ್ಲಲ್ಲಿ ತುಂತುರು ಮಳೆ
ಬೆಂಗಳೂರು (ಏ. 09): ಬೇಸಿಗೆ ಬಿಸಿಲ ತಾಪದಿಂದ ಸುಡುತ್ತಿದ್ದ ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಸೋಮವಾರ ವರುಣನ ಸಿಂಚನವಾಯಿತು. ಮುಸ್ಸಂಜೆಯ ಮಳೆ ಇಳೆಗೆ ಕೊಂಚ ತಂಪೆರೆಯಿತು.
ಬೆಂಗಳೂರು ಉತ್ತರ ಭಾಗದ ಕೆಲ ಪ್ರದೇಶಗಳಲ್ಲಿ ಕೆಲವು ಕಾಲ ಸಾಧಾರಣ ಮಳೆಯಾಗಿದ್ದರೆ, ಇನ್ನೂ ಹಲವು ಪ್ರದೇಶಗಳಲ್ಲಿ ತುಂತುರು ಹಾಗೂ ಹಗುರ ಮಳೆಯಾಯಿತು. ಮಂಗಳವಾರವೂ ಕೂಡ ನಗರದ ಹಲವೆಡೆ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೋಮವಾರ ಸಂಜೆ ವೇಳೆಗೆ ನಗರದಲ್ಲಿ ದಟ್ಟಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದ್ದರಿಂದ ಭಾರಿ ಮಳೆಯ ನಿರೀಕ್ಷೆಯಿತ್ತಾದರೂ ಕೆಲವೇ ಕೆಲವು ಪ್ರದೇಶಗಳಲ್ಲಿ ವರುಣನ ಸಿಂಚನವಾಯಿತು. ಇದರಿಂದ ವಾಹನ ಸವಾರರು, ಪಾದಚಾರಿಗಳು ಬಸ್ ನಿಲ್ದಾಣ, ಅಂಗಡಿ-ಮುಂಗಟ್ಟುಗಳು, ದೊಡ್ಡ ಕಟ್ಟಡಗಳ ಆಶ್ರಯ ಪಡೆದರು.
ಕೆಲವರು ಮಳೆಯನ್ನೂ ಲೆಕ್ಕಿಸದೆ ವಾಹನಗಳನ್ನು ಚಲಾಯಿಸಿದರು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಅಶೋಕನಗರ, ಟ್ರಿನಿಟಿ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಕೆಂಪೇಗೌಡ ರಸ್ತೆಯಲ್ಲಿ ಮಳೆಯಿಂದ ಪಾರಾಗುವ ಧಾವಂತದಲ್ಲಿ ಕೆಲ ದ್ವಿಚಕ್ರವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಸಾವರಿಸಿಕೊಂಡ ದೃಶ್ಯಗಳು ಕಂಡು ಬಂದಿತು.
ಮೆಜೆಸ್ಟಿಕ್, ಶೇಷಾದ್ರಿಪುರಂ, ಮೈಸೂರು ಬ್ಯಾಂಕ್ ವೃತ್ತ, ಮಲ್ಲೇಶ್ವರ, ರಾಜಾಜಿನಗರ, ಲಾಲ್‌ಬಾಗ್, ಗುಟ್ಟಹಳ್ಳಿ, ವಿಧಾನಸೌಧ, ಶಿವಾಜಿನಗರ, ಶಾಂತಿನಗರ, ಬಸವನಗುಡಿ, ಹೊಸಕೆರೆಹಳ್ಳಿ, ಚಾಮರಾಜಪೇಟೆ, ಮೈಸೂರು ರಸ್ತೆ, ವಿಜಯನಗರ, ಜಯನಗರ, ಮಾಗಡಿ ರಸ್ತೆ, ಓಕಳಿಪುರ, ಪ್ರಕಾಶನಗರ ಮೊದಲಾದ ಕಡೆ ತುಂತುರು ಮಳೆಯಾಯಿತು.
ತಾವರೆಕೆರೆಯಲ್ಲಿ 22.5 ಮಿ.ಮೀ. ಮಳೆ
ಬೆಂಗಳೂರು ಉತ್ತರ ಭಾಗದ ತಾವರೆಕೆರೆಯಲ್ಲಿ ಅತಿ ಹೆಚ್ಚು 22.5 ಮಿ.ಮೀ ಮಳೆಯಾಗಿದೆ. ಉಳಿದಂತೆ ಎಚ್‌ಎಸ್‌ಆರ್ ಲೇಔಟ್ 17.5, ಕಸಘಟ್ಟಪುರ 10, ಎಚ್‌ಎಎಲ್ ಏರ್‌ಪೋರ್ಟ್ 10, ಸೊಂಡೆಕೊಪ್ಪ 8, ಹೆಗ್ಗನಹಳ್ಳಿ 7.5, ಕೋನೇನ ಅಗ್ರಹಾರ 6.5, ವಡೇರಹಳ್ಳಿ 5.5, ಮಾಚೋಹಳ್ಳಿ 6.5, ಕಿತ್ತಗಾನಹಳ್ಳಿ 5, ಚನ್ನೇನಹಳ್ಳಿ 5, ಬೊಮ್ಮನಹಳ್ಳಿ 4.5, ಪುಲಿಕೇಶಿನಗರ 4.5, ಕೊಡಿಗೇಹಳ್ಳಿ 3, ರಾಜರಾಜೇಶ್ವರಿನಗರ
ಐದು ಮರ ಧರೆಗೆ
ಸೋಮವಾರ ಸಂಜೆ ಸುರಿದ ಮಳೆಗೆ ನಗರದ ಲಾಲ್‌ಬಾಗ್ ಪಶ್ಚಿಮ ದ್ವಾರದ ಆರ್.ವಿ.ಟೀಚರ್ಸ್ ಕಾಲೋನಿ ರಸ್ತೆ, ಕೋರಮಂಗಲ 1ನೇ ಹಂತದ ಐದನೇ ಅಡ್ಡರಸ್ತೆ ಸೇರಿದಂತೆ ವಿವಿಧ ಭಾಗಗಳಲ್ಲಿ ಐದು ಮರ ಹಾಗೂ ಕೊಂಬೆಗಳು ಮರಿದು ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಳೆಯ ಜತೆಗೆ ಜೋರು ಗಾಳಿ ಬೀಸಿದ್ದರಿಂದ ಬುಡ ಸಡಿಲಗೊಂಡು ಮರಗಳು ಧರೆಗೆ ಉರುಳಿವೆ.
