ಬೆಂಗಳೂರು : ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಕೋಲಾರ ಜಿಲ್ಲೆಯ ಕೆರೆ ತುಂಬಿಸುವ ಕೆ.ಸಿ.ವ್ಯಾಲಿ ಯೋಜನೆಯ ಅಧ್ವಾನದ ಮತ್ತೊಂದು ಮುಖ ಇದೀಗ ಅನಾವರಣಗೊಂಡಿದೆ. ಇತ್ತೀಚೆಗೆ ಕೆ.ಸಿ.ವ್ಯಾಲಿಯಿಂದ ಕೋಲಾರದ ಲಕ್ಷ್ಮೀಸಾಗರ ಕೆರೆಗೆ ಹರಿದ ನೀರಿನಲ್ಲಿ ಬೆಂಗಳೂರಿನ ಬೆಳ್ಳಂದೂರು ಕೆರೆಯ ಮಾದರಿಯಲ್ಲಿ ನೊರೆ ಕಾಣಿಸಿಕೊಂಡು, ತೀವ್ರ ಆತಂಕ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕೆರೆ ಹಾಗೂ ಕಾಲುವೆಯಲ್ಲಿ ನೂರಾರು ಜಲಚರಗಳು ಸತ್ತುಬಿದ್ದಿರುವುದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. 

ಕೆರೆ ಮತ್ತು ಕಾಲುವೆಗಳಲ್ಲಿ ನೂರಾರು ಮೀನುಗಳು ಹಾಗೂ ಹಾವು, ಏಡಿಯಂಥ ಜಲಚರಗಳೂ ಸತ್ತಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ವಿಷಪೂರಿತ ನೀರು ಹರಿದೇ ಈ ಘಟನೆ ಸಂಭವಿಸಿದೆ ಎಂದು ನೀರಾವರಿ ಹೋರಾಟಗಾರರು, ಗ್ರಾಮಸ್ಥರು ಆರೋಪಿಸಿದ್ದಾರೆ. 

ಬುಧವಾರ ಈ ಕುರಿತು ಪರಿಶೀಲಿಸಿದ ಹೋರಾಟಗಾರರು ಹಾಗೂ ಗ್ರಾಮಸ್ಥರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರಿನಲ್ಲಿ ವಿಷ ಮಿಶ್ರಣವಾಗಿರುವುದೇ ಜಲಚರಗಳು ಸಾಯಲು  ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕೆ.ಸಿ.ವ್ಯಾಲಿ ನೀರು ವಿಷಕಾರಿಯಾಗಿದೆ. ಹಾಗಾಗಿ ವೈಜ್ಞಾನಿಕವಾಗಿ, ಸೂಕ್ತವಾಗಿ ಸಂಸ್ಕರಿಸದೆ ಹರಿಸಬಾರದು ಎಂದು ನಾವು ಪ್ರತಿಪಾದಿಸುತ್ತಾ ಬಂದಿದ್ದೆವು. ಆದರೆ, ಸರ್ಕಾರ ನಮ್ಮ ವಾದವನ್ನು ಉಡಾಫೆ ಎಂದು ಭಾವಿಸಿತ್ತು. 

ಅದೃಷ್ಟಕ್ಕೆ ನೀರು ಹರಿಸಿದ ಕೆಲವೇ ದಿನಗಳಲ್ಲಿ ನೊರೆ ಕಾಣಿಸಿಕೊಂಡು ನಮ್ಮ ವಾದ ಸತ್ಯ ಎಂಬುದು ಸಾಬೀತಾಯಿತು’ ಎಂದು ಹೋರಾಟಗಾರರು ಹೇಳಿದ್ದಾರೆ. ‘ಮೇಲ್ನೋಟಕ್ಕೆ ಕಾಲುವೆಯಲ್ಲಿ ನೂರಾರು ಜಲಚರಗಳು ಸತ್ತು ಬಿದ್ದಿರುವುದು ಗೋಚರಿಸುತ್ತಿದೆ. ಕೆರೆಯಲ್ಲಿ ಇನ್ನೆಷ್ಟು ಮೀನುಗಳು ಸತ್ತಿವೆಯೋ ಏನೋ ಎಂದು ನೀರಾವರಿ ಹೋರಾಟಗಾರರು ಮತ್ತು ಲಕ್ಷ್ಮೀಸಾಗರ ಹಾಗೂ ನರಸಾಪುರ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಸಾಂದರ್ಬಿಕ ಚಿತ್ರ