ಬೆಂಗಳೂರು :  ನಗರದ ಸಂಚಾರ ವಿಭಾಗದ ಪೊಲೀಸರು ಮಳೆಗಾಲದಲ್ಲಿ ವಾಹನಗಳ ಓಡಾಟಕ್ಕೆ ಅಡ್ಡಿಯಾಗುತ್ತಿದ್ದ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭಿಸಿದ್ದಾರೆ.

ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ನಗರ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸರು 44 ಠಾಣೆಗಳ ಸರಹದ್ದಿನಲ್ಲಿ 221 ರಸ್ತೆ ಗುಂಡಿಗಳನ್ನು ಸಮತಟ್ಟು ಮಾಡುವ ಮೂಲಕ ರಸ್ತೆ ಗುಂಡಿ ಮುಚ್ಚುವ ವಿಷಯದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಅಲಕ್ಷ್ಯಕ್ಕೂ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

‘ರಸ್ತೆಯಲ್ಲಿ ನೀರು ನಿಂತರೆ ಸಂಚಾರ ಪೊಲೀಸರೇ ಸಮಸ್ಯೆ ಎದುರಿಸಬೇಕಾಗಿದೆ. ಅದರಲ್ಲೂ ಸಂಜೆ ಮತ್ತು ರಾತ್ರಿ ವೇಳೆ ಸಂಚಾರ ನಿರ್ವಹಣೆ ಬಹಳ ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಬಿಬಿಎಂಪಿ ಮೇಲೆ ಅವಲಿಂಬಿತವಾಗದೆ ನಾವೇ ಕಾರ್ಯೋನ್ಮುಖರಾಗಿದ್ದೇವೆ’ ಎಂದು ಪಶ್ಚಿಮ ವಿಭಾಗ (ಸಂಚಾರ) ಡಿಸಿಪಿ ಸೌಮ್ಯಲತಾ ತಿಳಿಸಿದರು.

ಮೊದಲು ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದ್ದ 41 ಸ್ಥಳಗಳನ್ನು ಗುರುತಿಸಲಾಯಿತು. ಬಳಿಕ ಆಯಾ ಸಂಚಾರ ಠಾಣೆಗಳ ಪೊಲೀಸರೇ, ಸಿಮೆಂಟ್‌ ಹಾಗೂ ಮರಳು ಹೊಂದಿಸಿ ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭಿಸಿದ್ದಾರೆ. ಇದಕ್ಕೆ ಕೆಲವು ಕಡೆ ಬಿಬಿಎಂಪಿ ಕೆಲಸಗಾರರು ಸಹ ಕೈ ಜೋಡಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಮಳೆಗಾಲ ಶುರುವಾದರೆ ರಸ್ತೆಗಳು ಪುಟ್ಟಕೆರೆಗಳಾಂತಾಗುತ್ತಿದ್ದವು. ಹೀಗಾಗಿ ಯಾವ ರಸ್ತೆಗಳಲ್ಲಿ ಮಳೆ ನೀರು ತುಂಬಿ ಸಮಸ್ಯೆ ಎದುರಾಗುತ್ತಿದೆ ಎಂದು ಬಿಬಿಎಂಪಿಗೆ ವರದಿ ನೀಡಲಾಯಿತು. ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆ ಗುಂಡಿ ಮಚ್ಚುವಂತೆ ಕೋರಲಾಯಿತು. ಆದರೆ ಇದಕ್ಕೆ ಪಾಲಿಕೆ ಪೂರಕವಾಗಿ ಸ್ಪಂದಿಸಿಲ್ಲ. ಕೆಲವು ಕಡೆ ರಸ್ತೆ ಗುಂಡಿ ಮುಚ್ಚಿದರೂ ಹೊರತು ಪೂರ್ಣ ಪ್ರಮಾಣದಲ್ಲಿ ಕೆಲಸವಾಗಲಿಲ್ಲ. ಇದರಿಂದ ಅನಿರ್ವಾಯವಾಗಿ ನಾವೇ ರಸ್ತೆ ಗುಂಡಿ ಮುಚ್ಚುವ ಕೆಲಸ ಪ್ರಾರಂಭಿಸಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಇದುವರೆಗೆ 44 ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ 221 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಆ ಪೈಕಿ ಕುಮಾರಸ್ವಾಮಿ ಲೇಔಟ್‌ 21, ಹೆಬ್ಬಾಳ 16, ಹಲಸೂರು ಮತ್ತು ಜೆ.ಪಿ.ನಗರ, ತಲಾ 12, ರಾಜಾಜಿನಗರ 11, ಸಿಟಿ ಮಾರ್ಕೇಟ್‌, ಹಲಸೂರು ಗೇಟ್‌ ಮತ್ತು ಪುಲಿಕೇಶಿ ನಗರಗಳಲ್ಲಿ ಎಂಟು ಗುಂಡಿಗಳು ಸಮತಟ್ಟಾಗಿವೆ. ಈ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಮುಂಗಾರು ಪ್ರಾರಂಭದ ವೇಳೆಗೆ ಪೂರ್ಣಗೊಳಿಸಲಾಗುತ್ತದೆ. ರಸ್ತೆ ಗುಂಡಿ ಮಾತ್ರವಲ್ಲದೆ ಕೆಲವು ಕಡೆ ರಾಜಕಾಲುವೆ ಸಹ ದುರಸ್ತಿಗೊಳಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.