ಸಿಎಂ ಆಪ್ತ ಎಚ್ ಸಿ ಮಹದೇವಪ್ಪಗೆ ಬೆಂಗಳೂರು ಟಿಕೆಟ್

news | Monday, January 22nd, 2018
Suvarna Web Desk
Highlights

ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜ್ಯದ 100 ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಸಿ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು  ಪರೋಕ್ಷವಾಗಿ ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ನಗರದ ಎರಡು ಕ್ಷೇತ್ರಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ನೆಪದಲ್ಲಿ ಆ ಕ್ಷೇತ್ರಗಳ ಅಭ್ಯರ್ಥಿಗಳು ಯಾರು ಎಂಬುದನ್ನು ಮತದಾರರಿಗೆ ಪರೋಕ್ಷವಾಗಿ ಸೂಚಿಸಿದರು.

ಬೆಂಗಳೂರು (ಜ.22): ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜ್ಯದ 100 ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಸಿ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು  ಪರೋಕ್ಷವಾಗಿ ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ನಗರದ ಎರಡು ಕ್ಷೇತ್ರಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ನೆಪದಲ್ಲಿ ಆ ಕ್ಷೇತ್ರಗಳ ಅಭ್ಯರ್ಥಿಗಳು ಯಾರು ಎಂಬುದನ್ನು ಮತದಾರರಿಗೆ ಪರೋಕ್ಷವಾಗಿ ಸೂಚಿಸಿದರು.

ಈ ಪೈಕಿ ಸಿ.ವಿ.ರಾಮನ್ ನಗರ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದ ವೇಳೆ ತಮ್ಮ ಆಪ್ತ ಹಾಗೂ  ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಹೆಸರನ್ನು ಪರೋಕ್ಷವಾಗಿ ಸೂಚಿಸಿದರೆ, ಚಾಮರಾಜಪೇಟೆಯಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ವಲಸೆ ಬರಲು  ಸಜ್ಜಾಗಿರುವ ಜಮೀರ್ ಅಹಮದ್‌ಗೆ ಟಿಕೆಟ್ ನೀಡುವುದಾಗಿ ಪರೋಕ್ಷವಾಗಿ ಪ್ರಕಟಿಸಿದರು.

ಸಚಿವ ಮಹದೇವಪ್ಪ ತಮ್ಮ ಪುತ್ರ ಸುನೀಲ್ ಬೋಸ್ ಅವರಿಗಾಗಿ ಸ್ವಕ್ಷೇತ್ರ  ತಿರುಮಕೂಡಲು ನರಸೀಪುರವನ್ನು ತ್ಯಾಗ ಮಾಡಿ, ಬೆಂಗಳೂರಿನ  ಸಿ.ವಿ.ರಾಮನ್ ನಗರ ಕ್ಷೇತ್ರದಲ್ಲಿ ಸ್ಪರ್ಧೆಗೆ ಮುಂದಾಗಿದ್ದಾರೆ ಎಂದು  ಕನ್ನಡಪ್ರಭ ನಾಲ್ಕು ತಿಂಗಳ ಹಿಂದೆ ವರದಿ ಮಾಡಿತ್ತು. ಈ ನಡುವೆ ಮಹದೇವಪ್ಪ ಅವರು ನರಸೀಪುರ ಕ್ಷೇತ್ರವನ್ನು ಉಳಿಸಿಕೊಂಡು, ಪುತ್ರನಿಗೆ ನಂಜನಗೂಡು  ಕ್ಷೇತ್ರದಲ್ಲಿ ಟಿಕೆಟ್ ಕೊಡಿಸಲು ತೀವ್ರ ಪ್ರಯತ್ನ ನಡೆಸಿದರು.

ಆದರೆ, ಉಪ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ನಿಂದ ಪಕ್ಷಕ್ಕೆ ಸೇರಿ, ಮಹತ್ವದ ಗೆಲುವನ್ನು ಕಾಂಗ್ರೆಸ್‌ಗೆ ತಂದುಕೊಟ್ಟ ಕಳಲೆ ಕೇಶವ  ಮೂರ್ತಿ ಅವರಿಗೆ ಟಿಕೆಟ್ ತಪ್ಪಿಸಿ ಸುನೀಲ್  ಬೋಸ್‌'ಗೆ ಟಿಕೆಟ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುತರಾಂ ಒಪ್ಪಿರಲಿಲ್ಲ. ಹೀಗಾಗಿ ಖುದ್ದು ಸಿದ್ದರಾಮಯ್ಯ ಅವರೇ ಮಹದೇವಪ್ಪ ಅವರಿಗೆ ಟಿ.ನರಸೀಪುರವನ್ನು  ಪುತ್ರನಿಗೆ ಬಿಟ್ಟುಕೊಟ್ಟು, ಸಿ.ವಿ.ರಾಮನ್ ನಗರಕ್ಕೆ ಆಗಮಿಸುವಂತೆ ಸೂಚಿಸಿದ್ದರು.

ಆದರೂ, ಡೋಲಾಯಮಾನ ಮನಸ್ಥಿತಿಯಲ್ಲೇ ಇದ್ದ ಮಹದೇವಪ್ಪ ಅವರನ್ನು ಬೆಂಗಳೂರಿನಿಂದಲೇ ಸ್ಪರ್ಧಿಸಲು ಸಿಎಂ ಮನವೊಲಿಸಿದ್ದರು. ಭಾನುವಾರ ಸಹ ಸಿ.ವಿ. ರಾಮನ್ ನಗರದಲ್ಲಿ ವಿವಿಧ ಕಾಮಗಾರಿಗಳ ಚಾಲನೆ ಸಂದರ್ಭದಲ್ಲೂ ನಾಟಕೀಯವಾಗಿಯೇ ಮಹದೇವಪ್ಪ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಸುಳಿವು ನೀಡಿದರು. ವಾಸ್ತವವವಾಗಿ ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮಹದೇವಪ್ಪ ಅವರ ಹೆಸರು ಅಧಿಕೃತವಾಗಿ ಇಲ್ಲ.

ಆದರೂ, ಅವರು ಸಮಾರಂಭಕ್ಕೆ ಆಗಮಿಸುವಂತೆ ನೋಡಿಕೊಳ್ಳಲಾಯಿತು. ತಮ್ಮ ಭಾಷಣ  ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಭಿಕರನ್ನು ಉದ್ದೇಶಿಸಿ, ‘ಈ ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂದರೆ ಯಾರನ್ನು ಗೆಲ್ಲಿಸಬೇಕು ಎಂದು ಪ್ರಶ್ನಿಸಿದರು. ಪೂರ್ವ ನಿರ್ಧರಿತವೇನೋ ಎಂಬಂತೆ ಸಭಿಕರು ಸಹ ಮಹದೇವಪ್ಪ ಎಂದು ಘೋಷಣೆ ಕೂಗಿದರು. ಆಗ ಸಿದ್ದರಾಮಯ್ಯ, ನಾನು ಇಂದು ಇಲ್ಲಿ ಅಭ್ಯರ್ಥಿ ಘೋಷಣೆ ಮಾಡಲು ಬಂದಿಲ್ಲ. ಆದ್ರೆ ನೀವು ಯಾರ ಹೆಸರು ಹೇಳ್ತಿದ್ದೀರೋ ಅವರಿಗೇ ಟಿಕೆಟ್’ ಎಂದು ಹೇಳುತ್ತಿದ್ದಂತೆಯೇ ಮತ್ತೆ ಮಹದೇವಪ್ಪ ಹೆಸರಿನಲ್ಲಿ ಜಯಘೋಷ ಮೊರೆಯಿತು.

ಸಿಎಂ, ಪರಂ ಬೆಂಗಳೂರಿಗೆ- ವದಂತಿ:

ಚುನಾವಣೆ ಬಿಸಿಯೇರುತ್ತಿರುವಂತೆಯೇ ವದಂತಿಗಳ ಕಾರುಬಾರು ಸಹ ಜೋರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಬೆಂಗಳೂರಿಗೆ ವಲಸೆ ಬರಲಿದ್ದಾರೆ ಎಂಬ ದಟ್ಟ ವದಂತಿ ಈ ಹಿಂದೆ ಹಬ್ಬಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರ ಬದಲಿಸುವ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇದೆ. ಈ ಪೈಕಿ ಅವರು ಬೆಂಗಳೂರಿನ ಹೆಬ್ಬಾಳ ಕ್ಷೇತ್ರಕ್ಕೆ ವಲಸೆ ಬರಲಿದ್ದಾರೆ ಎನ್ನಲಾಗಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿರೋಧಿಗಳು ಒಗ್ಗೂಡಿರುವುದರಿಂದ ಆ ಕ್ಷೇತ್ರದ ಬದಲಾಗಿ ಸಿಎಂ ಬೇರೆ ಕ್ಷೇತ್ರ ಪರಿಶೀಲಿಸುತ್ತಿದ್ದು, ಈ ಪೈಕಿ ಹೆಬ್ಬಾಳ ಕೂಡ ಒಂದು ಎನ್ನಲಾಗುತ್ತಿತ್ತು.

ಇತ್ತೀಚಿನ ಮಾಹಿತಿ ಪ್ರಕಾರ ಚಾಮುಂಡೇಶ್ವರಿ ಜತೆಗೆ ರಾಜ್ಯದ ಮತ್ತೊಂದು ಕ್ಷೇತ್ರದಲ್ಲೂ ಸಿಎಂ ಸ್ಪರ್ಧೆ ಮಾಡಲಿದ್ದು, ಬಾದಾಮಿ ಕ್ಷೇತ್ರದಲ್ಲಿ ಬಾಳಪ್ಪ ಭೀಮಪ್ಪ ಚಿಮ್ಮನಕಟ್ಟಿ ಅವರ ಕ್ಷೇತ್ರದಲ್ಲೂ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಚಿಮ್ಮನಕಟ್ಟಿ ಅವರೇ ಇದನ್ನು ನಿರಾಕರಿಸುತ್ತಿದ್ದು, ತಾವೇ ಚುನಾವಣೆಗೆ ಸ್ಪರ್ಧಿಸುವುದಾಗಿ ಅವರು ಭಾನುವಾರ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಾದರೆ ಅವರ ಆಯ್ಕೆಯ ಪಟ್ಟಿಯಲ್ಲಿ ಹೆಬ್ಬಾಳವೂ ಇದೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

Comments 0
Add Comment

    Related Posts

    CM Two Constituencies Story

    video | Thursday, April 12th, 2018
    Suvarna Web Desk