ಇದ್ದದ್ದು 8 ವರ್ಷ, ಟ್ರಾಫಿಕ್ ಸಮಸ್ಯೆ ನೆನಪಾದದ್ದು ಕೊನೆಯ ದಿನವೇ?

Bengaluru Techie Rides Horse To Work On Last Day To Protest Traffic
Highlights

ಕೆಲಸಕ್ಕೆ ಕೊನೆ ದಿನ ಕುದುರೆ ಮೇಲೆ ಬಂದ ಟೆಕ್ಕಿ

ಟ್ರಾಫಿಕ್ ಸಮಸ್ಯೆ ಕುರಿತು ಜಾಗೃತಿ ಮೂಡಿಸಲು ಕುದುರೆ ಸವಾರಿ

8 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ರೂಪೇಶ್

ಕೊನೆಯ ದಿನ ಕುದುರೆ ಸವಾರಿ ಮಾಡಿ ಜಾಗೃತಿ

ಬೆಂಗಳೂರು(ಜೂ.16): ಕೆಲಸದ ಕೊನೆಯ ದಿನವನ್ನು ಸಹೋದ್ಯೋಗಿಗಳೊಂದಿಗೆ ಲೋಕಾಭಿರಾಮವಾಗಿ ಕಳೆಯಬೇಕು ಎಂಬುದು ಎಲ್ಲರ ಕನಸಾಗಿರುತ್ತದೆ. ಕಚೇರಿಯಲ್ಲಿ ಪಾದರಸದಂತೆ ಅತ್ತಿಂದಿತ್ತ ಓಡಾಡುತ್ತಾ, ಎಲ್ಲರನ್ನೂ ಭೆಟಿ ಮಾಡಿ ನಗುತ್ತಾ ಕಾಲ ಕಳೆಯುವುದು ಯಾರಿಗೆ ಇಷ್ಟ ಇಲ್ಲ ಹೇಳಿ?. ಆದರೆ ಬೆಂಗಳೂರಿನ ಈ ಸಾಫ್ಟವೇರ್ ಇಂಜಿನಿಯರ್ ಮಾತ್ರ ತನ್ನ ಕೆಲಸದ ಕೊನೆಯ ದಿನವನ್ನು ಕಳೆದಿದ್ದು ಪ್ರತಿಭಟನೆ ಮೂಲಕ. ಅದೂ ನಗರವನ್ನು ಕುದುರೆ ಮೇಲೆ ಸುತ್ತುವ ಮೂಲಕ.

ಯಾಕೆ ಅಂತೀರಾ?. ಈ ಟೆಕ್ಕಿಗೆ ನಗರದ ಟ್ರಾಫಿಕ್ ಕಂಡರೆ ಆಗಲ್ವಂತೆ. ಕಳೆದ ೮ ವರ್ಷಗಳಿಂದ ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ರೂಪೇಶ್ ಕುಮಾರ್ ವರ್ಮಾ, ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಮನೆ ಕಡೆ ಹೆಜ್ಜೆ ಹಾಕಿದ್ದಾರೆ. ಆದರೆ ಹೊರಡುವ ಮೊದಲಿ ನಗರದ ಟ್ರಾಫಿಕ್ ಕಿರಿಕಿರಿ ಕುರಿತು ಜಾಗೃತಿ ಮೂಡಿಸಲು ಕುದುರೆ ಮೇಲೆ ಕಚೇರಿಗೆ ಬಂದಿದ್ದಾರೆ.

ಕಳೆದ 8 ವರ್ಷಗಳಿಂದ ನಿತ್ಯವೂ ಈ ಟ್ರಾಫಿಕ್‌ನಲ್ಲಿ ಓಡಾಡುತ್ತಿದ್ದು, ಕೆಲಸ ಮುಗಿಸಿ ಮನೆ ತಲುಪುವುದೆಂದರೆ ಯುದ್ದವನ್ನೇ ಗೆದ್ದಂತೆಯೇ ಸರಿ. ಹೀಗಾಗಿಯೇ ಟ್ರಾಫಿಕ್ ಸಮಸ್ಯೆ ಕುರಿತು ಸಂಬಂಧಪಟ್ಟವರ ಗಮನ ಸೆಳೆಯಲು ಕುದುರೆ ಮೇಲೆ ಕಚೇರಿಗೆ ಬಂದಿದ್ದಾಗಿ ರೂಪೇಶ್ ಹೇಳಿದ್ದಾರೆ. ಕುದುರೆ ಮೇಲೆ 'ಸಾಫ್ಟವೇರ್ ಇಂಜಿನಿಯರ್ ಆಗಿ ನನ್ನ ಕೊನಯ ದಿನ' ಎಂದು ಬೋರ್ಡ್ ಹಾಕಿಕೊಂಡೇ ಕಚೇರಿಗೆ ಬಂದಿದ್ದಾರೆ ರೂಪೇಶ್. ಆಧರೆ ರೂಪೇಶ್ ಅವರನ್ನು ಕಂಪನಿಯ ಗೇಟ್ ಬಳಿಯೇ ತಡೆದ ಭದ್ರತಾ ಸಿಬ್ಬಂದಿ ಅವರನ್ನು ಒಳ ಹೋಗಲು ಬಿಟ್ಟಿಲ್ಲ.

ಇನ್ನು ರೂಪೇಶ್ ಅವರ ಈ ವಿನೂತನ ಪ್ರತಿಭಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಹುತೇಕರು ರೂಪೇಶ್ ಅವರ ಪ್ರತಿಭಟನಾ ವೈಖರಿಯನ್ನು ಮೆಚ್ಚಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರೂಪೇಶ್, ತಮ್ಮ ಈ ಪ್ರತಿಭಟನೆಗೆ ಇಷ್ಟೊಂದು ಪ್ರಮಾಣದಲ್ಲಿ ಪ್ರತಿಕ್ರಿಯೆ ಬರುತ್ತದೆ ಎಂಬುದು ಗೊತ್ತಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಆದರೆ ರೂಪೇಶ್ ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿದ್ದು, ಇಲ್ಲಿನ ಎಲ್ಲ ಸೌಲಭ್ಯಗಳನ್ನೂ ಪಡೆದಿದ್ದಾರೆ. ಆದರೆ ಹೊರಡುವ ಕೊನೆ ಗಳಿಗೆಯಲ್ಲಿ ನಗರದ ಟ್ರಾಫಿಕ್ ಸಮಸ್ಯೆ ಇವರಿಗೆ ನೆನಪಾಗಿದ್ದೇಕೆ ಎಂಬುದು ಅವಾರಿಗೆ ಯಾರೂ ಕೇಳದ ಪ್ರಶ್ನೆಯಾಗಿದೆ. ಈ 8 ವರ್ಷಗಳಲ್ಲಿ ಟ್ರಾಫಿಕ್ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳತ್ತ ರೂಪೇಶ್ ಯಾಕೆ ಗಮನ ಹರಿಸಲಿಲ್ಲ ಎಂಬುದನ್ನೂ ಅವರು ಉತ್ತರಿಸಬೇಕಾಗುತ್ತದೆ.

loader