ಬೆಂಗಳೂರು (ಆ. 09): ನಗರ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವುದಕ್ಕಾಗಿ ಪ್ರತಿ ತಿಂಗಳು 8 ಮತ್ತು 9ರಂದು ಸಂಜೆ 6ರಿಂದ ರಾತ್ರಿ 11ರವರೆಗೂ ಸಮೀಕ್ಷೆ ನಡೆಸುವಂತೆ ಸಾರ್ವಜನಿಕ ಶಿಕ್ಷಣ ಹೊರಡಿಸಿರುವ ಆದೇಶಕ್ಕೆ ಶಿಕ್ಷಕಿಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಶಾಲೆ ಬಿಟ್ಟಮಕ್ಕಳನ್ನು ಪತ್ತೆ ಹಚ್ಚಲು ಶಿಕ್ಷಕರು ಸಂಜೆ 6ರಿಂದ ರಾತ್ರಿ 11ರವರೆಗೆ ಬೀದಿ ಸುತ್ತಿ ಸಮೀಕ್ಷೆ ಮಾಡುವಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಅವೈಜ್ಞಾನಿಕವಾಗಿದೆ.ಬೆಳಗ್ಗೆಯಿಂದ ಸಂಜೆಯವರೆಗೂ ತರಗತಿಗಳಲ್ಲಿ ಬೋಧನೆ ಮಾಡುವ ಶಿಕ್ಷಕರು, ರಾತ್ರಿ 11ರವರೆಗೂ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ.

ಅಲ್ಲದೆ, ಮಹಾನಗರಗಳಂತಹ ಪ್ರದೇಶಗಳಲ್ಲಿ ರಾತ್ರಿ ವೇಳೆ ಮಹಿಳೆಯರು ಮಕ್ಕಳನ್ನು ಪತ್ತೆ ಹಚ್ಚುವುದಕ್ಕಾಗಿ ಬೀದಿ ಸುತ್ತುವುದು ರಕ್ಷಣಾ ದೃಷ್ಟಿಯಿಂದಲೂ ಸರಿಯಾದ ಕ್ರಮವಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಸಮೀಕ್ಷಾ ಸಮಯವನ್ನು ಬದಲಾಯಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ತಿಂಗಳ ದಿನಾಂಕ ಬದಲು:

ಮತ್ತೊಂದೆಡೆ ಆ.9 ರಂದು ವರಮಹಾಲಕ್ಷ್ಮೇ ಹಬ್ಬ ಇರುವ ಹಿನ್ನೆಲೆಯಲ್ಲಿ ಸಮೀಕ್ಷೆ ದಿನಾಂಕ ಬದಲಾವಣೆ ಮಾಡುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಾಡಿದ್ದ ಮನವಿಗೆ ಸ್ಪಂದಿಸಿರುವ ಇಲಾಖೆ, ಆ.13 ಮತ್ತು 14ರಂದು ಸಮೀಕ್ಷೆ ನಡೆಸುವಂತೆ ಇಲಾಖೆ ಆಯುಕ್ತರು ನಿರ್ದೇಶನ ನೀಡಿದೆ.