ಬೆಂಗಳೂರಿನಲ್ಲಿ ಅರ್ಧ ಗಂಟೆ ಮಳೆಗೆ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳ ದುಸ್ಥಿತಿಗೆ ತೆರಿಗೆ ಏರಿಸುತ್ತಿರುವ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೂಲಸೌಕರ್ಯ ಸರಿಪಡಿಸದ ಸರ್ಕಾರ ತೆರಿಗೆ ಮಾತ್ರ ವಸೂಲಿ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಬೆಂಗಳೂರು (ಏ.3): ಬರೀ ಅರ್ಧಗಂಟೆಯ ಮಳೆಗೆ ಬೆಂಗಳೂರಿನ ಅರ್ಧಕ್ಕರ್ಧ ಭಾಗದಲ್ಲಿ ಪ್ರವಾಹದ ರೀತಿಯಲ್ಲಿ ರಸ್ತೆಯಲ್ಲಿ ನೀರು ನಿಂತುಕೊಂಡಿದೆ. ಔಂಟರ್ ರಿಂಗ್‌ರೋಡ್‌ನಲ್ಲಿ ವಾಹನಗಳು ತಿರುಗಾಡೋದೇ ಕಷ್ಟ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು ಮೊಣಕಾಲುದ್ದದ ನೀರಿನಲ್ಲೇ ನಡೆದುಕೊಂಡು ಶಾಲೆಗೆ ಹೋಗುವ ದೃಶ್ಯಗಳು ಸಾಮಾನ್ಯವಾಗಿದೆ. ಆದರೆ, ಇದ್ಯಾವುದು ಸರ್ಕಾರ ಚಿಂತೆ ಮಾಡ್ತಿಲ್ಲ. ಸರ್ಕಾರ ಯೋಚನೆ ಮಾಡ್ತಿರೋದು ಟ್ಯಾಕ್ಸ್ ಬಗ್ಗೆ ಮಾತ್ರ.
ವಿದ್ಯುತ್, ಮೆಟ್ರೋ, ಬಸ್, ಹಾಲು, ಡೀಸೆಲ್, ಆಸ್ತಿ ಎಲ್ಲದಕ್ಕೂ ತೆರಿಗೆ ಏರಿಸಿರುವ ಸರ್ಕಾರಕ್ಕೆ, ರಸ್ತೆ ಮೇಲೆ ನಿಲ್ಲೋ ನೀರಿಗೂ ಟ್ಯಾಕ್ಸ್ ಕಟ್ಟಬೇಕಾ ಎಂದು ಜನ ಲೇವಡಿಯಾಗಿ ಪ್ರಶ್ನೆ ಮಾಡುತ್ತಿದ್ದಾರೆ. ಇಡೀ ದೇಶದ ಐಟಿ ಆದಾಯದಲ್ಲಿ ಶೇ.32ರಷ್ಟು ಪಾಲು ನೀಡೋದು ಔಟರ್ ರಿಂಗ್ ರಸ್ತೆಯಲ್ಲಿನ ವಿಶ್ವದರ್ಜೆಯ ಐಟಿ ಕಂಪನಿಗಳು. ಇನ್ನು ಅಲ್ಲಿನ ರಸ್ತೆಗಳಲ್ಲೇ ಈ ರೀತಿಯ ದಯನೀಯ ಸ್ಥಿತಿ ಇರುವಾಗ ಬೆಂಗಳೂರಿನ ಒಳಭಾಗದಲ್ಲಿ ಅವಸ್ಥೆ ಕೇಳೋದೇ ಬೇಡ.
ತಾವರೆಕರೆ ಮುಖ್ಯರಸ್ತೆ, ಅಗರ ಮುಖ್ಯ ರಸ್ತೆ, ಸರ್ಜಾಪುರ ರಸ್ತೆ, ಅಗರ ಫ್ಲೈಓವರ್, ದೊಡ್ಡಾನೆಕುಂದಿ ಭಾಗಗಳ ರಸ್ತೆಗಳ ಅವಸ್ಥೆಗಳನ್ನು ಕೇಳೋದೇ ಬೇಡ. ರಾಜ್ಯದಲ್ಲಿ ಕಸಕ್ಕೂ ಟ್ಯಾಕ್ಸ್ ಕಟ್ಟಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರ, ರಸ್ತೆಯಲ್ಲಿ ನಿಲ್ಲೋ ನೀರಿಗೂ ಟ್ಯಾಕ್ಸ್ ಕಟ್ಟಿಸಿಕೊಳ್ಳುವ ಹಾಗಿದ್ದರೆ, ಇನ್ನೂ ದೊಡ್ಡ ಪ್ರಮಾಣದಲ್ಲಿ ಆದಾಯ ರಾಜ್ಯದ ಖಜಾನೆಗೆ ಬರುತ್ತಿತ್ತು.
ದನ ಕಾಯೋಕೆ ಮಾತ್ರವೇ ಲಾಯಕ್ಕಿರುವ ಬೆಂಗಳೂರಿನ ಬಿಬಿಎಂಪಿಯ ಅಧಿಕಾರಿಗಳು ರಸ್ತೆ, ಒಳಚರಂಡಿಯಂಥ ಮೂಲಸೌಕರ್ಯವನ್ನೇ ನೆಟ್ಟಗೆ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ. ಇಂಥವರು ಕಳೆದ ಬಜೆಟ್‌ನಲ್ಲಿ 400 ಕೋಟಿ ರೂಪಾಯಿ ವೆಚ್ಚದಲ್ಲಿ ಇಡೀ ಔಟರ್ ರಿಂಗ್ ರೋಡ್‌ನ ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ. ಅದರಲ್ಲಿ ಎಷ್ಟು ಹಣ ರಸ್ತೆಗೆ ಬೀಳುತ್ತದೆ ಅನ್ನೋದು ದೇವರಿಗೆ ಗೊತ್ತು. ಇದೆಲ್ಲರದ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಲ್ಲಿ ಸುರಂಗ ಮಾರ್ಗದ ಯೋಜನೆ ಕೈಗೊಂಡಿರುವುದು ದುರಂತವೇ ಸರಿ ಎಂದು ನಾಗರಿಕರು ಎಚ್ಚರಿಸಿದ್ದಾರೆ.
ಕೇವಲ 30 ನಿಮಿಷಗಳ ಮಳೆಯಿಂದ ನಗರದ ಬೀದಿಗಳು ಈಗಾಗಲೇ ನೀರಿನಿಂದ ತುಂಬಿ ಹೋಗಿವೆ, ಗುಂಡಿಗಳು ಹದಗೆಡುತ್ತಿವೆ ಮತ್ತು ದೈನಂದಿನ ಪ್ರಯಾಣವು ದುಃಸ್ವಪ್ನಗಳಾಗಿ ಬದಲಾಗುತ್ತಿದೆ. ಈಗಿರುವ ರಸ್ತೆಗಳು ಸಣ್ಣ ಮಳೆಯನ್ನು ತಡೆದುಕೊಳ್ಳಲು ಸಾಧ್ಯವಾಗದಿದ್ದರೆ, ಮಳೆಗಾಲದಲ್ಲಿ ಸುರಂಗ ರಸ್ತೆಯು ಭೂಗತ ನದಿಯಾಗಿ ಬದಲಾಗುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಎಂದು ಪ್ರಶ್ನೆ ಮಾಡಿದ್ದಾರೆ.
ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್, ಬೆಂಗಳೂರಲ್ಲಿ ಎಲ್ಲಾ ರೀತಿಯ ಮೂಲಸೌಕರ್ಯ ಇದೆ. ಅದಕ್ಕೆ ತಕ್ಕಂತೆ ಆಸ್ತಿ ತೆರಿಗೆಯನ್ನು ಸರಿಯಾಗಿ ಕಟ್ಟಿ ಎಂದು ಹೇಳಿದ್ದರು. ಬರೀ 30 ನಿಮಿಷದ ಮಳೆಯನ್ನು ತಡೆಯಲು ಸಾಧ್ಯವಾಗದ ಬೆಂಗಳೂರಿನ ಮೂಲಸೌಕರ್ಯಕ್ಕೆ ಯಾವ ರೀತಿಯ ಟ್ಯಾಕ್ಸ್ ಕಟ್ಟಬೇಕು ಅನ್ನೋದನ್ನು ನೀವೇ ಹೇಳಿ ಎಂದು ಪ್ರಶ್ನಿಸಿದ್ದಾರೆ.
'ಬೆಂಗಳೂರು ನಗರದಲ್ಲಿ ಉತ್ತಮ ತೆರಿಗೆ ಸಂಗ್ರಹವಾಗಬೇಕು. ನೀರು, ರಸ್ತೆ ಸೇರಿದಂತೆ ಅನೇಕ ಮೂಲಸೌಕರ್ಯಗಳನ್ನು ನೀಡಿದ್ದೇವೆ. ಆದರೆ ಅನೇಕರು ಇದಕ್ಕೆ ತಕ್ಕಂತೆ ತೆರಿಗೆ ಪಾವತಿ ಮಾಡುತ್ತಿಲ್ಲ. ಇಂತಹ ಅಕ್ರಮಗಳನ್ನು 'ಎಐ' ತಂತ್ರಜ್ಞಾನದ ಮೂಲಕ ಪತ್ತೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು' ಎಂದು ಡಿ.ಕೆ ಶಿವಕುಮಾರ್ ಅವರು ಪುನರುಚ್ಚರಿಸಿದ್ದರು.
ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕಾರಿಗೆ ಗುದ್ದಿದ ಐರಾವತ ಬಸ್; ಅಂತ್ಯಕ್ರಿಯೆಗೆ ಹೊರಟ ನಾಲ್ವರು ದುರ್ಮರಣ
ಒಂದೆಡೆ ಸರ್ಕಾರವು 'ಬ್ರಾಂಡ್ ಬೆಂಗಳೂರು' ಉಪಕ್ರಮದ ಅಡಿಯಲ್ಲಿ ಭರ್ಜರಿ ಘೋಷಣೆ ಮಾಡಿ ಜನರ ಕಿವಿಗೆ ಹೂ ಇಡುತ್ತಿದೆ. ಆದರೆ ಫಲಿತಾಂಶಗಳು ಮಾತ್ರ 2 ವರ್ಷವಾದರೂ ಕಾಣುತ್ತಿಲ್ಲ. ಒಳಚರಂಡಿ, ರಸ್ತೆ ನಿರ್ವಹಣೆ ಮತ್ತು ಸಂಚಾರ ನಿರ್ವಹಣೆಯಂತಹ ನೈಜ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವ ಬದಲು, ಅವರು ಪ್ರಾಯೋಗಿಕ ಪರಿಹಾರಗಳಿಗಿಂತ ರಾಜಕೀಯ ಗಿಮಿಕ್‌ಗಳಾಗಿ ಕಾರ್ಯನಿರ್ವಹಿಸುವ ಮಿಂಚಿನ ಯೋಜನೆಗಳನ್ನು ಮುಂದಿಡುತ್ತಿದ್ದಾರೆ.
ಬೇಸಿಗೆಯಲ್ಲಿ ಲಾಲ್‌ಬಾಗ್ ‘ಬಟಾನಿಕಲ್ ಗಾರ್ಡನ್’ ಹಸರಿನಿಂದ ಕಂಗೊಳಿಸುವ ಹಿಂದಿನ ರಹಸ್ಯವೇನು ಗೊತ್ತೆ?
ಹಾಗಾಗಿ ಸರ್ಕಾರ ಬೆಂಗಳೂರಿನ ನೈಜ ಸಮಸ್ಯೆಗಳತ್ತ ಕಣ್ಣು ಹಾಯಿಸುವ ಬದಲು ಬರೀ ಘೋಷಣೆಗಳನ್ನು ಮಾಡುತ್ತಿದ್ದರೆ, ಸರ್ಕಾರದ ವತಿಯಿಂದಲೇ ಬೆಂಗಳೂರಿನ ಜನರಿಗೆ ಸ್ವಿಮ್ಮಿಂಗ್ ಕ್ಲಾಸ್‌ಗಳನ್ನು ಕಲಿಸುವುದು ಒಳಿತು.
