ಮುಂದಿನ 48 ಗಂಟೆಗಳ ಬಳಿಕ ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದ ಅಲ್ಲಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರು: ಮುಂದಿನ 48 ಗಂಟೆಗಳ ಬಳಿಕ ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದ ಅಲ್ಲಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬಂಗಾಳಕೊಲ್ಲಿಯ ನೈಋತ್ಯ ದಿಕ್ಕಿನಿಂದ ತಮಿಳುನಾಡು ಮತ್ತು ಶ್ರೀಲಂಕಾ ನಡುವಿನ ಕೊಮರಿನೇರಿಯಾವರೆಗೆ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಇದರ ಪ್ರಭಾವ ಇನ್ನೆರಡು ದಿನಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇದೆ.
ಇದರಿಂದ ಮಂಗಳವಾರ ರಾತ್ರಿ ನಂತರ ಮಳೆಯಾಗುವ ನಿರೀಕ್ಷೆ ಇದೆ ಎಂದು ಬೆಂಗಳೂರು ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಮೇತ್ರಿ ತಿಳಿಸಿದ್ದಾರೆ. ಭಾನುವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಸದ್ಯ ಉಂಟಾಗಿರುವ ವಾಯುಭಾರ ಕುಸಿತದಿಂದ ಮುಂದಿನ 48 ಗಂಟೆಗಳವರೆಗೆ ಕರ್ನಾಟಕದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.
2 ದಿನಗಳ ನಂತರ ಅತಿ ವಾಯುಭಾರ ಕುಸಿತ ಉಂಟಾದರೆ ಅರಬ್ಬಿ ಸಮುದ್ರದ ಮೇಲೆ ಆಗ್ನೇಯ ದಿಕ್ಕಿಗೆ ವ್ಯಾಪಿಸಲಿದೆ. ಆಗ ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
