ಈಗಾಗಲೇ ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಹಿರಿಯ ನಾಗರಿಕರ ರಕ್ಷಣೆಗೆ ‘ಹೈಟೆಕ್‌ ಸೇವೆ' ಕಲ್ಪಿಸಿರುವ ಪೊಲೀಸರು, ಈಗ ಠಾಣಾ ಸರಹದ್ದಿನ ಕುರಿತು ಮಾಹಿತಿ ನೀಡಲು ಪ್ರತ್ಯೇಕ ‘ಆ್ಯಪ್‌' ಸೇವೆಗೆ ನಿರ್ಧರಿಸಿದ್ದಾರೆ. ಇದರಿಂದ ತಮ್ಮ ಏರಿಯಾದ ಪೊಲೀಸರ ಕುರಿತು ಬೆರಳ ತುದಿಯಲ್ಲಿ ನಾಗರಿಕರಿಗೆ ಮಾಹಿತಿ ಸಿಗಲಿದೆ.

ಬೆಂಗಳೂರು: ಕ್ರೈಂ ಆಗಿದೆ. ಪೊಲೀಸರಿಗೆ ಹೇಳ್ಬೇಕು. ಆದರೆ ಆ ಸ್ಥಳ ಯಾವ ಠಾಣಾ ಸರಹದ್ದಿಗೆ ಬರುತ್ತದೆ. ಆ ಠಾಣೆ ಎಲ್ಲಿದೆ ಎಂಬುದೇ ಗೊತ್ತಿಲ್ಲ..! ಪೊಲೀಸರ ವಿಚಾರದಲ್ಲಿ ನಾಗರಿಕರಿಗೆ ಎದುರಾಗುವ ಇಂತಹ ‘ತಲೆಬಿಸಿ'ಗೆ ಪೂರ್ಣ ವಿರಾಮ ಹಾಕಲು ಬೆಂಗಳೂರು ನಗರ ಪೊಲೀಸರು ಮುಂದಾಗಿದ್ದಾರೆ.

ಈಗಾಗಲೇ ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಹಿರಿಯ ನಾಗರಿಕರ ರಕ್ಷಣೆಗೆ ‘ಹೈಟೆಕ್‌ ಸೇವೆ' ಕಲ್ಪಿಸಿರುವ ಪೊಲೀಸರು, ಈಗ ಠಾಣಾ ಸರಹದ್ದಿನ ಕುರಿತು ಮಾಹಿತಿ ನೀಡಲು ಪ್ರತ್ಯೇಕ ‘ಆ್ಯಪ್‌' ಸೇವೆಗೆ ನಿರ್ಧರಿಸಿದ್ದಾರೆ. ಇದರಿಂದ ತಮ್ಮ ಏರಿಯಾದ ಪೊಲೀಸರ ಕುರಿತು ಬೆರಳ ತುದಿಯಲ್ಲಿ ನಾಗರಿಕರಿಗೆ ಮಾಹಿತಿ ಸಿಗಲಿದೆ. ಅಲ್ಲದೆ ತಮ್ಮ ಠಾಣಾ ವ್ಯಾಪ್ತಿಗೆ ಬರುವುದಿಲ್ಲ ಎಂಬ ಪೊಲೀಸರ ಸಬೂಬು ಮಾತುಗಳಿಗೂ ಬ್ರೇಕ್‌ ಬೀಳಲಿದೆ.

ಮಾಸಾಂತ್ಯಕ್ಕೆ ಆ್ಯಪ್‌ ಬಿಡುಗಡೆ: ಜನರಿಗೆ ಠಾಣೆಗಳ ಸರಹದ್ದು ಕುರಿತು ಮಾಹಿತಿ ನೀಡಲು ‘Know Jurisdiction ' ಆ್ಯಪ್‌ ಸಿದ್ಧಪಡಿಸಲಾಗಿದ್ದು, ಈ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಗೊಳಿಸುತ್ತೇವೆ ಎಂದು ಕಮಾಂಡೋ ಸೆಂಟರ್‌ ಡಿಸಿಪಿ ನಾಗೇಂದ್ರ ಕುಮಾರ್‌ ತಿಳಿಸಿದರು.