Asianet Suvarna News Asianet Suvarna News

ಬೆಂಗಳೂರಿನಲ್ಲಿ ಓಲಾ ಕ್ಯಾಬ್ ಡ್ರೈವರ್'ನ ಪುಂಡಾಟ: ಒಂಟಿ ಮಹಿಳೆಗೆ ಕಾರಿನಲ್ಲಿ ತನ್ನೊಂದಿಗೆ ಸ್ಮೋಕ್ ಮಾಡುವಂತೆ ಒತ್ತಾಯ

Bengaluru Ola Cab Driver Locked A Woman In The Car

ಬೆಂಗಳೂರು(ಸೆ.30): ರಾಜಧಾನಿ ಬೆಂಗಳೂರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಳಂಕ ತರುವ ಕೆಲಸಕ್ಕೆ ಆಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಡ್ರೈವರ್'ಗಳು ಮುಂದಾಗಿದ್ದಾರೆ. ಈ ಡ್ರೈವರ್ ಗಳು ಒಂಟಿ ಮಹಿಳೆಯರು ಕ್ಯಾಬ್ ಬುಕ್ ಮಾಡಿದರೆ ಅವರೊಂದಿಗೆ ಅನುಚಿತವಾಗಿ ವರ್ತಿಸುವ ಘಟನೆಗಳು ಮೇಲಿಂದ ಮೇಲೆ ಮರುಕಳಿಸುತ್ತಲೇ ಇದೆ.

ಈಗ ಮತ್ತೊಂದು ಇದೇ ರೀತಿ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಬೆಂಗಳೂರಿನ ಮಹಿಳಾ ಲಾಯರ್ ಒಬ್ಬರು ಓಲಾ ಡ್ರೈವರ್ ನಿಂದ ತೊಂದರೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ತನ್ನ ನೋವನ್ನು ಆಕೆ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. 

ಬೆಂಗಳೂರಿನಲ್ಲಿ ಸುಮಾರು 20 ವರ್ಷಗಳಿಂದ ನೆಲೆಸಿರುವ ಮಹಿಳಾ ವಕೀಲರೊಬ್ಬರು ಇದೇ ಮಂಗಳವಾರ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಸ್ವಲ್ಪ ತಡವಾಗಿದೆ. ವಿಜಯ್ ಮಿಠಲ್ ರಸ್ತೆಯಿಂದ ಹೆಬ್ಬಾಳಕ್ಕೆ ತೆರಳಲು ಈ ವೇಳೆಯಲ್ಲಿ ಕ್ಯಾಬ್ ನಲ್ಲಿ ತೆರಳಿದರೆ ಸೇಫ್ ಎನ್ನುವ ಕಾರಣಕ್ಕೆ ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ, ಆದರೆ ಇದೇ ಅವರ ಪಾಲಿಗೆ ತೊಂದರೆಯನ್ನು ತಂದಿದೆ.

ಮನೆ ತಲುಪಲು ಕ್ಯಾಬ್ ಏರಿದ ನಂತರ ಮಹಿಳೆಯೊಂದಿಗೆ ಡ್ರೈವರ್ ಒಂದೊಂದಾಗಿ ತನ್ನ ತಲೆಹರಟೆಯನ್ನು ಶುರು ಮಾಡಿದ್ದಾನೆ, ಅಲ್ಲದೇ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಕಿರಿ-ಕಿರಿ ಮಾಡಿದ್ದಾನೆ ಎಂದು ಮಹಿಳೆಯೇ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ನೀವು ಕುಡಿಯುತ್ತಿರಾ, ಸಿಗರೇಟ್ ಸೇದುತ್ತೀರಾ, ದಿನ ಲೇಟ್ ಆಗಿ ಮನೆಗೆ ಹೋಗ್ತಿರಾ, ಒಬ್ಬರೇ ಇರೋದ ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳಿದ ಕ್ಯಾಬ್ ಡ್ರೈವರ್, ಮಾರ್ಗ ಮಧ್ಯದಲ್ಲಿ ಮಹಿಳೆ ಕಾರಿನ ಒಳಗೆ ಇದ್ದರು ಹೊರಗಿನಿಂದ ಲಾಕ್ ಮಾಡಿಕೊಂಡು ಅಂಗಡಿಗೆ ಹೋಗಿ ಸಿಗರೇಟ್ ತಂದಿದ್ದಾನೆ ಎನ್ನಲಾಗಿದೆ.

ಸಿಗರೇಟ್ ತಂದ ನಂತರ ಕಾರ್ ಒಳಗೆಯೇ ತನೊಂದಿಗೆ ಸಿಗರೇಟ್ ಸೇದುವಂತೆ ಮಹಿಳೆಯನ್ನು ಒತ್ತಾಯಿಸಿದ್ದಾನೆ. ಇಷ್ಟಕ್ಕೇ ಸುಮ್ಮನಾಗದೆ ಆಕೆಯ ಪೋನ್ ನಂಬರ್ ಅನ್ನು ಒತ್ತಾಯ ಪೂರ್ವಕವಾಗಿ ಪಡೆದುಕೊಂಡಿದ್ದಾನೆ. ಇನ್ನು ಮುಂದೆ ಹೀಗೆ ರಾತ್ರಿ ವೇಳೆಯಲ್ಲಿ ಒಂಟಿಯಾಗಿ ಹೋಗಬೇಕು ಅಂದ್ರೆ ನಂಗೆ ಕಾಲ್ ಮಾಡಿ ಎಂದು ವ್ಯಂಗ್ಯವಾಗಿ ಹೇಳಿದ್ದಾನೆ.

ನಂತರ ಮಹಿಳೆ ಕ್ಯಾಬ್ ಇಂದ ಇಳಿದ ಮೇಲೆ ತನಗೆ ರೇಟಿಂಗ್ ನಲ್ಲಿ ಫೈವ್ ಸ್ಟಾರ್ ನೀಡುವಂತೆ ಒತ್ತಾಯ ಮಾಡಿದ್ದಲ್ಲದೇ, ಆಕೆ ಕ್ಯಾಬ್ ಬುಕ್ ಮಾಡಿದ ನಂಬರ್ ಅನ್ನು ಹೇಗೋ ಪಡೆದು, ಕಾಲ್ ಮಾಡಿ ಮಾತನಾಡುವ ಪ್ರಯತ್ನ ಮಾಡಿದ್ದಾನೆ ಎಂದು ಮಹಿಳಾ ವಕೀಲರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. 
 

Latest Videos
Follow Us:
Download App:
  • android
  • ios