ಶೀಘ್ರ ಒಂದೇ ಟಿಕೆಟ್’ನಲ್ಲಿ ಬಿಎಂಟಿಸಿಯ ಮೂರು ಸೇವೆ ಲಭ್ಯ

First Published 15, Mar 2018, 11:44 AM IST
Bengaluru Metropolitan Transport Corporation service News
Highlights

ಪ್ರಯಾಣಿಕರು ಮನೆಯಿಂದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಹಾಗೂ ನಿಲ್ದಾಣದಿಂದ ಮನೆಗೆ ಸುಲಭವಾಗಿ ಸಂಚರಿಸಲು(ಲಾಸ್ಟ್‌ಮೈಲ್ ಕನೆಕ್ಟಿವಿಟಿ) ಅನುವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ‘ಸಿದ್ಧ ಸೇವೆ’ ಹೆಸರಿನ ಯೋಜನೆ ಪರಿಚಯಿಸಿದೆ.

ಬೆಂಗಳೂರು : ಪ್ರಯಾಣಿಕರು ಮನೆಯಿಂದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಹಾಗೂ ನಿಲ್ದಾಣದಿಂದ ಮನೆಗೆ ಸುಲಭವಾಗಿ ಸಂಚರಿಸಲು(ಲಾಸ್ಟ್‌ಮೈಲ್ ಕನೆಕ್ಟಿವಿಟಿ) ಅನುವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ‘ಸಿದ್ಧ ಸೇವೆ’ ಹೆಸರಿನ ಯೋಜನೆ ಪರಿಚಯಿಸಿದೆ.

ಈ ಸಂಬಂಧ ಮೆಟ್ರೋ ಬೈಕ್ಸ್ ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಂಡಿರುವ ಬಿಎಂಟಿಸಿಯು ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಶಾಂತಿನಗರದ ನಿಗಮದ ಬಸ್ ನಿಲ್ದಾಣದಲ್ಲಿ ಬಾಡಿಗೆ ಆಧರಿತ ಬೈಕ್ ಸೇವೆ ಆರಂಭಿಸಿದೆ. ಈ ನೂತನ ಸೇವೆಗೆ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಬುಧವಾರ ಚಾಲನೆ ನೀಡಿದರು.

ಏನಿದು ಬೈಕ್ ಸೇವೆ?: ನಿಲ್ದಾಣದಲ್ಲಿ ಗೇರ್ ರಹಿತ ಬೈಕ್(ಹೋಂಡಾ ಆ್ಯಕ್ಸಿಸ್, ಆ್ಯಕ್ಟಿವಾ ಮಾದರಿ)ಗಳು ಬಾಡಿಗೆಗೆ ಸಿಗಲಿವೆ. ಗೂಗಲ್ ಫ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ‘ಮೆಟ್ರೋ ಬೈಕ್ಸ್’ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಪ್ರತಿ ಕಿ.ಮೀ.ಗೆ 5 ರು. (ಪೆಟ್ರೋಲ್ ಸಹಿತ) ಮತ್ತು ನಿಮಿಷಕ್ಕೆ 50ಪೈಸೆ ಬಾಡಿಗೆ ಪಾವತಿಸಬೇಕು.

ಈ ಬೈಕ್‌ಗಳು ಕೀ ರಹಿತವಾಗಿದ್ದು, ಸ್ಮಾರ್ಟ್‌ಫೋನ್‌ನಲ್ಲಿ ಒನ್ ಟೈಂ ಪಾಸ್‌ವರ್ಡ್ ಬಳಸಿ ಬೈಕ್ ಚಾಲನೆ ಮಾಡಬಹುದು. ಪ್ರಯಾಣಿಕರು ರಾತ್ರಿ ವೇಳೆ ಮನೆಗೆ ಬೈಕ್ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ. ಈ ಸೇವೆಗೆ ಪ್ರತಿ ಕಿ.ಮೀ.ಗೆ 6.50 ರು. ಪಾವತಿಸಬೇಕು. ಮೆಟ್ರೋ ಬೈಕ್ಸ್ ಸಂಸ್ಥೆಯ ಈಗಾಗಲೇ ನಗರದ 36 ಮೆಟ್ರೋ ನಿಲ್ದಾಣಗಳಲ್ಲಿ ಈ ಸೇವೆ ಆರಂಭಿಸಿದ್ದು, ಯಶಸ್ವಿಯಾಗಿ ಸಾಗುತ್ತಿದೆ.

ವಾರದೊಳಗೆ ಇಂದಿರಾ ಸಾರಿಗೆ: ಬಿಎಂಟಿಸಿಯಿಂದ ರೂಪಿಸಲಾಗಿರುವ ‘ಇಂದಿರಾ ಸಾರಿಗೆ’ ಯೋಜನೆಯನ್ನು ಒಂದು ವಾರದೊಳಗೆ ಅನುಷ್ಠಾನಕ್ಕೆ ತರಲಾಗುವುದು. ಈ ಸಂಬಂಧ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ಎಂದು ಸಾರಿಗೆ ಎಚ್.ಎಂ.ರೇವಣ್ಣ ತಿಳಿಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ‘ವಾಯುವಜ್ರ’ ಬಸ್‌ಗಳಿಗೆ ಹೆಚ್ಚಿನ ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ಬಿಎಂಟಿಸಿಯು ಒಂದೇ ಟಿಕೆಟ್‌ನಲ್ಲಿ ಮೂರು ಸೇವೆ ನೀಡುವ ಮತ್ತೊಂದು ಯೋಜನೆ ರೂಪಿಸುತ್ತಿದೆ.

ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕನಿಗೆ ಮನೆಯಿಂದ ಬಸ್ ನಿಲ್ದಾಣ ತಲುಪಲು ಅನುವಾಗುವಂತೆ ನಿಗಮ ಖಾಸಗಿ ಕ್ಯಾಬ್ ಮತ್ತು ಆಟೋಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಿದ್ದು, ಶೀಘ್ರದಲ್ಲೇ ಈ ಸೇವೆಗೂ ಚಾಲನೆ ನೀಡಲಿದೆ. ಈ ಯೋಜನೆಯಲ್ಲಿ ಮನೆಯಿಂದ ಬಸ್ ನಿಲ್ದಾಣಕ್ಕೆ ಟ್ಯಾಕ್ಸಿ, ಬಳಿಕ ವಾಯುವಜ್ರ ಬಸ್‌ನಲ್ಲಿ ವಿಮಾನ ನಿಲ್ದಾಣ ಜತೆಗೆ ಲಗೇಜ್ ಈ ಮೂರು ಸೇವೆಗಳು ಒಂದೇ ಟಿಕೆಟ್‌ನಲ್ಲಿ ಲಭ್ಯವಾಗಲಿವೆ. ಪ್ರಯಾಣಿಕರು ಈ ಟಿಕೆಟ್‌ಗಳನ್ನು ಮೊಬೈಲ್ ಆ್ಯಪ್ ಅಥವಾ ನಿಗಮದ ವೆಬ್‌ಸೈಟ್‌ನಲ್ಲಿ ಕಾಯ್ದಿರಿಸಲು ಅನುಕೂಲವಾಗುವ ಅಪ್ಲಿಕೇಶನ್ ಅಭಿವೃದ್ಧಿಗೊಳಿಸಲು ನಿಗಮ ಚಿಂತಿಸಿದೆ.

loader