ಸಕಲೇಶಪುರ [ಜು.23]:  ತಾಲೂಕಿನ ಶಿರಿವಾಗಿಲು ಸಮೀಪ ರೈಲು ಹಳಿಗಳ ಮೇಲೆ ಬಿದ್ದ ಮಣ್ಣನ್ನು ರೈಲ್ವೆ ಇಲಾಖೆ ಸಿಬ್ಬಂದಿ ನಿರಂತರ ಶ್ರಮ ವಹಿಸಿ ತೆರವುಗೊಳಿಸುವಲ್ಲಿ ಸೋಮವಾರ ಯಶಸ್ವಿಯಾಗಿದ್ದಾರೆ.

ಶನಿವಾರ ಮುಂಜಾನೆ 3.30ರ ವೇಳೆಯಲ್ಲಿ ಶಿರಿವಾಗಿಲು ಸಮೀಪದ 86ನೇ ಮೈಲುಗಲ್ಲಿನ ಸುರಂಗವೊಂದರ ಸಮೀಪ ರೈಲು ಹಳಿಗಳ ಪಕ್ಕದಲ್ಲಿ ನೀರು ನಿಂತಿದ್ದು ಜೊತೆಗೆ ಬಂಡೆಗಳು ರೈಲು ಹಳಿಗಳ ಮೇಲೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ರೈಲುಗಳ ಸಂಚಾರವನ್ನು ರದ್ದುಪಡಿಸಿ ಮಣ್ಣು ತೆರವುಗೊಳಿಸಲು ಶನಿವಾರ ಮುಂಜಾನೆಯಿಂದಲೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸೋಮವಾರ ಮಧ್ಯಾಹ್ನದ ಹೊತ್ತಿಗೆ ಮಣ್ಣು ತೆರವು ಕಾರ್ಯಾಚರಣೆ ಮುಕ್ತಾಯಗೊಂಡಿದೆ.

ಮಳೆ ವಿಪರೀತ ಸುರಿಯುತ್ತಿದೆ. ಆದ್ದರಿಂದ ಸೋಮವಾರವೂ ಸಹ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಒಂದು ವೇಳೆ ರಾತ್ರಿಯ ವೇಳೆಯಲ್ಲಿ ಯಾವುದೆ ಭೂ ಕುಸಿತವಾಗದಿದ್ದಲ್ಲಿ ಮಂಗಳವಾರದಿಂದ ರೈಲುಗಳನ್ನು ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆಯಿದೆ.