ಮಹಿಳೆಯರಿಗೆ ನೈರ್ಮಲ್ಯಯುತ ಶೌಚಾಲಯ ಒದಗಿಸಲು ದಕ್ಷಿಣ ದೆಹಲಿಯ ಮಹಾನಗರ ಪಾಲಿಕೆ ಜಾರಿಗೊಳಿಸಿರುವ ‘ಪಿಂಕ್ ಟಾಯ್ಲೆಟ್’ ವ್ಯವಸ್ಥೆಯನ್ನು ಬೆಂಗಳೂರಿನಲ್ಲೂ ಆರಂಭಿಸಲು ಬಿಬಿಎಂಪಿ ಮೇಯರ್ ಆರ್.ಸಂಪತ್‌ರಾಜ್ ಆಸಕ್ತಿ ತೋರಿದ್ದಾರೆ.
ಬೆಂಗಳೂರು: ಮಹಿಳೆಯರಿಗೆ ನೈರ್ಮಲ್ಯಯುತ ಶೌಚಾಲಯ ಒದಗಿಸಲು ದಕ್ಷಿಣ ದೆಹಲಿಯ ಮಹಾನಗರ ಪಾಲಿಕೆ ಜಾರಿಗೊಳಿಸಿರುವ ‘ಪಿಂಕ್ ಟಾಯ್ಲೆಟ್’ ವ್ಯವಸ್ಥೆಯನ್ನು ಬೆಂಗಳೂರಿನಲ್ಲೂ ಆರಂಭಿಸಲು ಬಿಬಿಎಂಪಿ ಮೇಯರ್ ಆರ್.ಸಂಪತ್ರಾಜ್ ಆಸಕ್ತಿ ತೋರಿದ್ದಾರೆ.
ಬೆಂಗಳೂರು ಅಭಿವೃದ್ಧಿಗೆ ಬಿಬಿಎಂಪಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ಶುಕ್ರವಾರ ನಗರಕ್ಕೆ ಭೇಟಿ ನೀಡಿದ್ದ ದಕ್ಷಿಣ ದೆಹಲಿಯ ಮಹಾನಗರ ಪಾಲಿಕೆಯ ನೇಮಕಾತಿ ಭರ್ತಿ ಶಿಸ್ತುಕ್ರಮ ಸ್ಥಾಯಿ ಸಮಿತಿ ಸದಸ್ಯರ ನಿಯೋಗದೊಂದಿಗೆ ಮೇಯರ್ ನಗರ ಪ್ರದಕ್ಷಿಣೆ ನಡೆಸಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ, ದಕ್ಷಿಣ ದೆಹಲಿ ಪಾಲಿಕೆ ಜಾರಿಗೆ ತಂದಿರುವ ಪಿಂಕ್ ಟಾಯ್ಲೆಟ್ ಯೋಜನೆ ಕುರಿತು ಪ್ರಸ್ತಾಪಿಸಿದ ಮೇಯರ್, ಮುಂದಿನ ದಿನಗಳಲ್ಲಿ ನಗರದಲ್ಲೂ ಈ ಯೋಜನೆ ಜಾರಿಗೊಳಿಸುವ ಆಸಕ್ತಿ ಹೊಂದಿರುವುದಾಗಿ ತಿಳಿಸಿದರು.
ಇದೇ ವೇಳೆ ದೆಹಲಿ ಪಾಲಿಕೆ ನಿಯೋಗ ಎಂ.ಜಿ ರಸ್ತೆಯ ರಂಗೋಲಿ ಮೆಟ್ರೋ ಮಾದರಿಯನ್ನು ದೆಹಲಿಯಲ್ಲೂ ಅಳವಡಿಸಲು ಆಸಕ್ತಿ ವ್ಯಕ್ತಪಡಿಸಿದರು. ವಿವಿಧೆಡೆ ಮೆಟ್ರೋ ರೈಲಿನಲ್ಲಿ ಸಂಚರಿಸಿದ ನಿಯೋಗದ ಏಳು ಜನ ಸದಸ್ಯರು, ಗುಂಡಿ ಮುಕ್ತ ರಸ್ತೆ ನಿರ್ಮಾಣಕ್ಕೆ ಬಿಬಿಎಂಪಿ ನಿರ್ಮಿಸಿರುವ ಟೆಂಡರ್ ಶ್ಯೂರ್ ರಸ್ತೆಗಳನ್ನು ಪರಿಶೀಲಿಸಿ ಮಾಹಿತಿ ಪಡೆಯಿತು.
ಮೇಯರ್ ಸಂಪತ್ ರಾಜ್ ಮಾತನಾಡಿ, ನಗರಕ್ಕೆ ಭೇಟಿ ನೀಡಿರುವ ದಕ್ಷಿಣ ದೆಹಲಿ ಪಾಲಿಕೆ ನಿಯೋಗ ದೆಹಲಿಗೆ ಬರುವಂತೆ ಆಹ್ವಾನ ನೀಡಿದೆ. ಶೀಘ್ರದಲ್ಲೇ ತೆರಳಿ ಅಲ್ಲಿನ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಿ, ದೆಹಲಿಯಲ್ಲಿ ಮಹಿಳೆಯರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಪಿಂಕ್ ಟಾಯ್ಲೆಟ್ ವ್ಯವಸ್ಥೆಯನ್ನು ಬೆಂಗಳೂರಲ್ಲೂ ಶೀಘ್ರದಲ್ಲಿ ಪಿಂಕ್ ಟಾಯ್ಲೆಟ್ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದಕ್ಷಿಣ ದೆಹಲಿ ಪಾಲಿಕೆ ನೇಮಕಾತಿ ಭರ್ತಿ ಶಿಸ್ತು ಕ್ರಮ ಸ್ಥಾಯಿ ಸಮಿತಿ ಅಧ್ಯಕ್ಷ ನರೇಂದ್ರ ಚಾವ್ಲಾ, ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಒಂದು ರೈಲಿನಿಂದ ಮತ್ತೊಂದು ರೈಲಿಗೆ ಹತ್ತಲು ಪ್ರಯಾಣಿಕರು ನಡೆದು
ಹೋಗಬೇಕು. ಆದರೆ, ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿರುವ ಅತ್ಯಾಧುನಿಕ ಗುಣಮಟ್ಟದ ಇಂಟರ್ ಜಂಕ್ಷನ್ ವ್ಯವಸ್ಥೆ ಇದೆ. ಇಲ್ಲಿನ ಮೆಟ್ರೋ ವ್ಯವಸ್ಥೆಯನ್ನು ನಾವು ಅಳವಡಿಸಿಕೊಳ್ಳುತ್ತೇವೆ. ಎಂ.ಜಿ ರಸ್ತೆಯ ರಂಗೋಲಿ ಮೆಟ್ರೋ ಗ್ಯಾಲರಿ ತುಂಬಾ ಸುಂದರವಾಗಿದೆ. ಇರುವ ಸ್ಥಳಾವಕಾಶವನ್ನು ಉತ್ತಮವಾಗಿ ಬಳಕೆ ಮಾಡಿ ಕೊಳ್ಳಲಾಗಿದೆ. ಇದೇ ಮಾದರಿಯಲ್ಲಿ ದೆಹಲಿಯಲ್ಲಿಯೂ ನಿರ್ಮಿಸಲಾಗುವುದು. ಮಹಿಳೆಯರಿಗೆ ವಾಹನ ಪಾರ್ಕಿಂಗ್ನಲ್ಲಿ ಮೀಸಲಾತಿ ನೀಡಿರುವುದು ದೇಶಕ್ಕೆ ಮಾದರಿಯಾಗಿದೆ ಎಂದರು.
