ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು : ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಅಗ್ರ ರ‌್ಯಾಂಕಿಂಗ್ ಗಳಿಕೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2018ರಲ್ಲಿ 10 ಉತ್ತಮ ನಗರಗಳ ಪಟ್ಟಿಯಲ್ಲಿ ಸ್ಥಾನ ದೊರೆಯುವುದೇ? ಬಿಬಿಎಂಪಿಗಂತೂ ಈ ಬಾರಿ ಇಂತಹದೊಂದು ನಿರೀಕ್ಷೆಯಲ್ಲಿದೆ.

ಕೇಂದ್ರ ಸರ್ಕಾರ ತನ್ನ ಸ್ವಚ್ಛ ಭಾರತ ಅಭಿಯಾನದ ಜತೆಗೆ, ಸ್ವಚ್ಛ ನಗರಗಳಿಗೆ ಶ್ರೇಯಾಂಕ ನೀಡುವ ಪದ್ಧತಿಯನ್ನು ಆರಂಭಿಸಿದೆ. ಈ ನಿಟ್ಟಿನಲ್ಲಿ ಮೊದಲ ಬಾರಿಗೆ 2015 ರಲ್ಲಿ ಆರಂಭವಾದ ಸ್ವಚ್ಛನಗರ ಸ್ಪರ್ಧೆಯಲ್ಲಿ ಬೆಂಗಳೂರಿಗೆ 2016 ರಲ್ಲಿ 38, 2017ರಲ್ಲಿ 210ನೇ ಸ್ಥಾನಕ್ಕೆ ಕುಸಿತ ಕಂಡಿತ್ತು.

ಶತಾಯಗತಾಯ 2018ರಲ್ಲಿ ಉತ್ತಮ  ರ್ಯಾಕಿಂಗ್ ಸಾಧಿಸಬೇಕೆಂದು ಬಿಬಿಎಂಪಿ ಜನವರಿಯಲ್ಲಿ  ಆರಂಭವಾಗುವ ಸ್ವಚ್ಛ  ಸರ್ವೇಕ್ಷಣಾಕ್ಕೂ ಒಂದು ತಿಂಗಳು ಮುಚ್ಚಿತವಾಗಿ ಸಿದ್ಧತೆ ಮಾಡಿಕೊಂಡಿದ್ದು, ಉತ್ತಮ ರ‌್ಯಾಂಕಿಂಗ್ ಗಳಿಸುವ ವಿಶ್ವಾಸದಲ್ಲಿದೆ. ಫೆ.15ರಿಂದ ಫೆ.17ರ ವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 80 ವಾರ್ಡ್‌ಗಳನ್ನು ಕೇಂದ್ರದ ತಂಡ ಪರಿಶೀಲನೆ ಮಾಡಿತ್ತು.

45 ಕ್ಕೂ ಹೆಚ್ಚು ಕೇಂದ್ರದ ಅಧಿಕಾರಿಗಳು ವಿವಿಧ ಬಡಾವಣೆಯಲ್ಲಿ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡಿದ್ದರು. ಇದೇ ಮೇ 18 ರ ಬಳಿಕ ನಗರ ಸ್ವಚ್ಛನಗರ ಶ್ರೇಯಾಂಕ ಪಟ್ಟಿಯನ್ನು ಕೇಂದ್ರ ನಗರಾಭಿವೃದ್ಧಿ ಇಲಾಖೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ.