ದೇಶದಲ್ಲಿ ನೀರು ಪೋಲು ಮಾಡುವ ನಗರಗಳ ಪೈಕಿ ಬೆಂಗಳೂರಿಗೆ 2ನೇ ಸ್ಥಾನ | ಲೆಕ್ಕೆಕ್ಕೆ ಸಿಗುತ್ತಿಲ್ಲ ಅರ್ಧದಷ್ಟು ನೀರು

ಬೆಂಗಳೂರು (ಅ.12): ಕಾವೇರಿ ವಿವಾದ ರಾಜ್ಯವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ‘‘ಬೆಂಗಳೂರಿನ ಮೂರನೇ ಒಂದರಷ್ಟುಭಾಗ ಕಾವೇರಿ ಕೊಳ್ಳದ ವ್ಯಾಪ್ತಿಗೇ ಬರುವುದಿಲ್ಲ,'' ಎಂಬ ಹೊಸ ವಾದವನ್ನು ಸುಪ್ರೀಂ ಕೋರ್ಟ್‌ ಮುಂದಿಟ್ಟಿರುವ ತಮಿಳುನಾಡು, ಮಹಾನಗರದ ಕಾವೇರಿ ನೀರಿನ ಬಳಕೆಯನ್ನೇ ಪ್ರಶ್ನಿಸುತ್ತಿದೆ. ಹೀಗಿರುವಾಗಲೇ ನಗರದಲ್ಲಿ ಪೂರೈಕೆಯಾಗುತ್ತಿರುವ ಕಾವೇರಿನ ನೀರಿನ ಪ್ರಮಾಣದಲ್ಲಿ ಶೇ. 46ರಷ್ಟುನೀರು ಲೆಕ್ಕಕ್ಕೇ ಸಿಗುತ್ತಿಲ್ಲ ಎಂದು ಸ್ವತಃ ಜಲಮಂಡಳಿ ಹೇಳಿಕೊಂಡಿದೆ. ಈ ಮೂಲಕ ನೀರು ಪೋಲು ಮಾಡುತ್ತಿರುವ ನಗರಗಳ ಪೈಕಿ ಬೆಂಗಳೂರು 2ನೇ ಸ್ಥಾನದಲ್ಲಿದೆ.

ಅಧಿಕಾರಿಗಳ ಅದಕ್ಷತೆಯೇ ಈ ಸಮಸ್ಯೆಗೆ ಕಾರಣ. ತಜ್ಞರ ಸಲಹೆಗಳನ್ನು ಸ್ವೀಕರಿಸುವ ಪ್ರವೃತ್ತಿ ರೂಢಿಸಿಕೊಳ್ಳಬೇಕು. 
ಬಸವರಾಜು ಜಲಮಂಡಳಿ ನಿವೃತ್ತ ಎಂಜಿನಿಯರ್‌

ಕಾವೇರಿ ನದಿಯ ಪ್ರತಿ ಹನಿ ನೀರನ್ನು ಪಡೆಯಲು ತಮಿಳುನಾಡಿನೊಂದಿಗೆ ಹೋರಾಟವನ್ನೇ ನಡೆಸುತ್ತಿರುವ ಈ ಹೊತ್ತಿನಲ್ಲಿ, ಅಮೂಲ್ಯವಾದ ನೀರು ಭಾರಿ ಪ್ರಮಾಣದಲ್ಲಿ ಪೋಲಾಗುತ್ತಿರುವುದು ಆತಂಕ ಹುಟ್ಟಿಸಿದೆ. ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಏರಿಕೆಗೆ ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂಬುದನ್ನು ಮಂಡಳಿಯೂ ಒಪ್ಪಿಕೊಳ್ಳುತ್ತಿದೆ. ಆದರೆ, ನಿಯಂತ್ರಣಕ್ಕೆ ದಿಟ್ಟಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ.

ನೀರಿನ ಸದ್ಬಳಕೆ ಮತ್ತು ವಿನಿಯೋಗದ ಆದ್ಯತೆ ಬಗ್ಗೆ ಅರಿವು ಮೂಡಿಸಬೇಕು. ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ತಗ್ಗಿಸಲು ಅಧಿಕಾರಿಗಳು ದಿಟ್ಟಕ್ರಮ ಕೈಗೊಳ್ಳಬೇಕು.

ಕೃಷ್ಣರಾಜ್‌ ಸಹಾಯಕ ಪ್ರಾಧ್ಯಾಪಕ, ಐಸೆಕ್‌

ಕಾವೇರಿ ಕೊಳ್ಳದಿಂದ ಬೆಂಗಳೂರಿಗೆ ಪ್ರತಿದಿನ 1400 ಎಂಎಲ್‌ಡಿ ನೀರು ಸರಬರಾಜಾಗುತ್ತಿದ್ದು, ಹಲವೆಡೆ ಜಲಮಂಡಳಿಗೆ ತಿಳಿಯದಂತೆ ನೀರು ಕಳುವಾಗುತ್ತಿದೆ. ಜಲಮಂಡಳಿಯು ನೀರಿನ ನಿರ್ವಹಣೆಯಲ್ಲಿ ದಿಟ್ಟಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅದಕ್ಷತೆಯೇ ನೀರು ಪೋಲಾಗಲು ಕಾರಣ ಎಂದು ತಜ್ಞರು ಗಂಭೀರ ಆರೋಪ ಮಾಡಿದ್ದಾರೆ. ನೀರಿನ ಬಿಕ್ಕಟ್ಟು ಎದುರಾಗುತ್ತಿರುವ ಸಂದರ್ಭದಲ್ಲಿಯೂ ನೀರಿನ ಸಮರ್ಪಕ ನಿರ್ವಹಣೆಯತ್ತ ಜಲಮಂಡಳಿ ಗಮನ ಹರಿಸಿದಂತಿಲ್ಲ. ಈ ಹಿನ್ನೆಲೆಯಲ್ಲಿ ಪೋಲಾಗುತ್ತಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡುವಂತೆ ಸಚಿವ ಜಾಜ್‌ರ್‍ ಅವರು ಇತ್ತೀಚೆಗೆ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ.

ನಗರ ನೀರಿನ ಅವಶ್ಯಕತೆ: ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ನಗರಗಳಲ್ಲಿ ಪ್ರತಿ ವ್ಯಕ್ತಿಗೆ ಕನಿಷ್ಠ 150 ಲೀಟರ್‌ ನೀರಿನ (ಎಲ್‌ಪಿಸಿಡಿ) ಅಗತ್ಯವಿದೆ. ಆದರೆ ಸದ್ಯ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿಗೆ ಸಿಗುತ್ತಿರುವುದು ಕೇವಲ 80 ಲೀಟರ್‌ ಮಾತ್ರ. ಜಯನಗರ, ಸದಾಶಿವನಗರ, ಕೋರ­ಮಂಗಲ, ಮಾರತ್‌ಹಳ್ಳಿ ಭಾಗಗಳಲ್ಲಿ 300 ಎಂಪಿಸಿಡಿ ಸರಬರಾಜು ಆಗುತ್ತಿದ್ದರೂ ಇದು ಕೆಲವು ಬಡಾವಣೆಗಳಿಗೆ ಸೀಮಿತವಾಗಿದೆ. ಆದರೆ ಇದೇ ಪ್ರದೇಶದ ಕೆಲ ಭಾಗದ ಜನರಿಗೆ ದಿನವೊಂದಕ್ಕೆ ಕೇವಲ 28ರಿಂದ 30 ಎಂಪಿಸಿಡಿ ನೀರು ಮಾತ್ರ.

ನೀರಿನ ಲೆಕ್ಕ ಸಿಗದಿರುವುದಕ್ಕೆ ಕಾರಣ

ಗೃಹ/ ವಾಣಿಜ್ಯ/ ಸಾರ್ವಜನಿಕ ಬಳಕೆಯ ಬಹುತೇಕ ನಲ್ಲಿಗಳು ಅವೈಜ್ಞಾನಿಕವಾಗಿದ್ದು , ಶೇ.75 ನೀರು ಪೋಲಾಗುತ್ತಿದೆ 
ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿನ ನೀರಿನ ಬಳಕೆ ಮತ್ತು ಸರಬರಾಜು 
ಮಳೆ ನೀರಿನ ಸಂಗ್ರಹಣೆ- ವೈಜ್ಞಾನಿಕ ಕ್ರಮಗಳ ನಿರ್ವಹಣೆಯಲ್ಲಿ ಹಿಂದುಳಿದಿರುವುದು

ಏನು ಮಾಡಬೇಕು?

ನೀರು ಸೋರಿಕೆಯ ಮೂಲ ಪತ್ತೆ ಮಾಡುವುದು 
ನೀರಿನ ಮಿತ ವ್ಯಯದ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವುದು 
ನೀರಿನ ಮೂಲದ ಕೊರತೆ ಎದುರಾಗಿದ್ದು , ಬಳಕೆದಾರರು ಎಚ್ಚೆತ್ತುಕೊಳ್ಳಬೇಕು 
ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪಠ್ಯ ಅಳವಡಿಸುವುದು

(ಕೃಪೆ: ಕನ್ನಡಪ್ರಭ)