ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಬಿಡುಗಡೆ ಮಾಡಿರುವ ವಿಶ್ವದ ಅಗ್ಗದ ನಗರಗಳ ಪಟ್ಟಿಯಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರು 5ನೇ ಸ್ಥಾನ ಪಡೆದುಕೊಂಡಿದೆ.
ಲಂಡನ್ [ಜು.30]: ಬ್ರಿಟನ್‌ನ ಮೂಲದ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಬಿಡುಗಡೆ ಮಾಡಿರುವ ವಿಶ್ವದ ಅಗ್ಗದ ನಗರಗಳ ಪಟ್ಟಿಯಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರು 5ನೇ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಭಾರತದ ಮೂರು ನಗರಗಳು ಸ್ಥಾನ ಪಡೆದುಕೊಂಡಿದ್ದು, ಚೆನ್ನೈ ಹಾಗೂ ದೆಹಲಿ ಕ್ರಮವಾಗಿ 8 ಮತ್ತು 10ನೇ ಸ್ಥಾನ ಪಡೆದುಕೊಂಡಿವೆ.
ವಿಶ್ವದೆಲ್ಲೆಡೆಯ ಜೀವನ ವೆಚ್ಚ ಸಮೀಕ್ಷೆ -2019ರ ಪ್ರಕಾರ, ವೆನಿಜುವೆಲಾದ ಕ್ಯಾರಕಾಸ್ ವಿಶ್ವದ ಅತಿ ಅಗ್ಗದ ನಗರ ಎನಿಸಿಕೊಂಡಿದೆ. ಕಳೆದ 30 ವರ್ಷಗಳಿಂದ ಈ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದ್ದು, ಮನೆಬಳಕೆಯ ಸಾಮಗ್ರಿಗಳು, ಆಹಾರ, ಬಟ್ಟೆ, ಪಾನಿಯಗಳು ಸೇರಿದಂತೆ 160 ಉತ್ಪನ್ನಗಳಿಗೆ ಬೇರೆ ಬೇರೆ ದೇಶಗಳ ನಗರಗಳಲ್ಲಿ ಇರುವ ದರಗಳನ್ನು ಆಧರಿಸಿ ವಿಶ್ವದ ಅಗ್ಗದ ಹಾಗೂ ದುಬಾರಿ ನಗರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಉದಾಹರಣೆಗೆ ಒಂದು ಒಂದು ಕೆ.ಜಿ. ಬ್ರೆಡ್‌ನ ಪ್ಯಾಕಿಗೆ ಪಾಕಿಸ್ತಾನದ ಕರಾಚಿಯಲ್ಲಿ ಸುಮಾರು 100 ರು. ಇದ್ದರೆ, ಅದೇ ಬ್ರೆಡ್‌ಗೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ 390 ರು. ವೆಚ್ಚ ಮಾಡಬೇಕು. ಹೀಗೆ ವಿವಿಧ ಮಾನದಂಡಗಳನ್ನು ಬಳಸಿ ವಿಶ್ವದ ಅಗ್ಗದ ನಗರಗಳ ಪಟ್ಟಿಯನ್ನು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಬಿಡುಗಡೆ ಮಾಡಿದೆ. ವಿಶ್ವದ ಅತಿ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರ, ಪ್ಯಾರಿಸ್ ಹಾಗೂ ಹಾಂಕಾಂಗ್ ಮೊದಲ ಸ್ಥಾನ ಪಡೆದುಕೊಂಡಿವೆ.
ವಿಶ್ವದ 10 ಅತಿ ಅಗ್ಗದ ನಗರಗಳು
1. ಕ್ಯಾರಕಾಸ್- ವೆನಿಜುವೆಲಾ
2. ಡಮಾಸ್ಕಸ್- ಸಿರಿಯಾ
3. ತಾಷ್ಕೆಂಟ್- ಉಜ್ಬೇಕಿಸ್ತಾನ
4. ಅಲ್ಮಾಟಿ- ಕಜಕಸ್ತಾನ
5. ಬೆಂಗಳೂರು- ಭಾರತ
6. ಕರಾಚಿ- ಪಾಕಿಸ್ತಾನ
7. ಲಾಗೋಸ್- ನೈಜೀರಿಯಾ
8. ಚೆನ್ನೈ- ಭಾರತ
9. ಬ್ಯೂನಸ್ ಐರಸ್ - ಅರ್ಜೆಂಟೀನಾ
10. ನವದೆಹಲಿ- ಭಾರತ
