* ಈ ಚಾನಲ್‌'ಗೆ ಆಯುಕ್ತರ ಕೇಂದ್ರ ಕಚೇರಿ ಕಟ್ಟಡದಲ್ಲೇ ಸ್ಥಳಾವಕಾಶ* ಜೂನ್‌'ನಲ್ಲಿ ಅಧಿಕೃತವಾಗಿ ಚಾನೆಲ್‌ ಪ್ರಸಾರ ಮಾಡಲು ಸಕಲ ಸಿದ್ಧತೆ* ಐದನೇ ಮಹಡಿಯಲ್ಲಿ ಅತ್ಯಾಧುನಿಕ ಮಟ್ಟದ ಸ್ಟುಡಿಯೋ ನಿರ್ಮಾಣ* ಸಾಮಾನ್ಯ ಚಾನಲ್‌ ರೀತಿ ಟಿವಿ ವೀಕ್ಷಣೆ ಲಭ್ಯವಿಲ್ಲ, ವೆಬ್‌'ನಲ್ಲಿ ಮಾತ್ರ ಪ್ರಸಾರ

ಬೆಂಗಳೂರು: ಬಹಳ ದಿನಗಳಿಂದ ಚರ್ಚೆಯಲ್ಲಿರುವ ಬೆಂಗಳೂರು ಪೊಲೀಸರ ‘ಬಿಸಿಪಿ ಟಿವಿ' (ಬೆಂಗಳೂರು ಸಿಟಿ ಪೊಲೀಸ್‌ ಟಿವಿ) ಯೋಜನೆಯು ಸಕಾರಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ಶೀಘ್ರದಲ್ಲೇ ಚಾನಲ್‌ ಪ್ರಸಾರಕ್ಕೆ ಪೊಲೀಸರು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ.

ಈ ವಿಚಾರವನ್ನು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಅವರೇ ಖುದ್ದು ಶುಕ್ರವಾರ ಸಂಜೆ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಚಾನೆಲ್‌ ಕುರಿತು ಟೀಸರ್‌'ವೊಂದನ್ನು ಟ್ವೀಟರ್‌'ನಲ್ಲಿ ಬೆಂಗಳೂರು ಪೊಲೀಸರು ಹರಿಬಿಟ್ಟಿದ್ದಾರೆ. ಇದಕ್ಕೆ ಜನರಿಂದ ಬಾರಿ ಸ್ಪಂದನೆ ವ್ಯಕ್ತವಾಗಿದೆ. ಆದರೆ ಚಾನೆಲ್‌ ಹೇಗಿರುತ್ತದೆ. ಯಾವ ಮಾದರಿ ಕಾರ್ಯಕ್ರಮಗಳು ಪ್ರಸಾರವಾಗಲಿವೆ ಸೇರಿದಂತೆ ಇನ್ನಿತರೆ ಮಾಹಿತಿ ನೀಡದೆ ಗೌಪ್ಯವಾಗಿರಿಸಿದ್ದಾರೆ.

ಈ ಬಗ್ಗೆ ‘ಕನ್ನಡಪ್ರಭ'ದ ಜತೆ ಮಾತನಾಡಿದ ಆಯುಕ್ತ ಪ್ರವೀಣ್‌ ಸೂದ್‌ ಅವರು, ಚಾನೆಲ್‌ ಪ್ರಾರಂಭಿಸಲಿದ್ದೇವೆ. ಆದರೆ ವೃತ್ತಿಪರ ಪತ್ರಕರ್ತರು ನಡೆಸುವ ಚಾನೆಲ್‌'ನಂತೆ ನಾವು ನಡೆಸಲು ಸಾಧ್ಯ​ವಿಲ್ಲ. ನಾವು ಹೇಗೆಲ್ಲಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತೇವೆ ಎಂಬ ಮಾಹಿತಿ ತಿಳಿಯಲು ಇನ್ನೂ ಹತ್ತು ದಿನಗಳಾದರೂ ತಾಳ್ಮೆ ವಹಿಸುವಂತೆ ಹೇಳಿ ಕೌತುಕ ಮೂಡಿಸಿದ್ದಾರೆ.

ಕಳೆದ 2-3 ವರ್ಷಗಳಿಂದಲೂ ಬೆಂಗಳೂರು ಪೊಲೀಸರು, ತಮ್ಮ ಅಪರಾಧ ಪ್ರಕರಣಗಳ ತನಿಖೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರತ್ಯೇಕ ವಾಹಿನಿ ಪ್ರಾರಂಭಿಸಲಿ​ದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದರಲ್ಲೂ ಎಂ.ಎನ್‌. ರೆಡ್ಡಿ ಅವರು ಆಯುಕ್ತರಾಗಿದ್ದ ಸಮಯದಲ್ಲಿ ಚಾನೆಲ್‌ ಪ್ರಾರಂಭಿಸುವ ಯೋಜನೆ ವೇಗ ಪಡೆದು ಸ್ತಬ್ಧವಾಗಿತ್ತು. ಈಗ ಮತ್ತೆ ಆ ಯೋಜನೆಯು ಚಾಲನೆ ಪಡೆದುಕೊಂಡಿದ್ದು ಪ್ರವೀ​ಣ್‌ ಸೂದ್‌ ಅವರು, ಜೂನ್‌ನಲ್ಲಿ ಅಧಿಕೃತ​ವಾಗಿ ಚಾನೆಲ್‌ ಪ್ರಸಾರ ಮಾಡಲು ಸಕಲ ಸಿದ್ಧತೆ ನಡೆಸಿದ್ದಾರೆ. 

ಜನರಿಗೆ ಮಾಹಿತಿ ನೀಡುವ ಜತೆಗೆ ನೇರ ಸಂಪರ್ಕ ಸಾಧಿಸಲು ಬೆಂಗಳೂರು ಪೊಲೀಸರು, ಸಾಮಾಜಿಕ ತಾಣಗಳನ್ನು ದೇಶದ ಇತರೆ ರಾಜ್ಯಗಳ ಪೊಲೀಸರಿಗಿಂತಲೂ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಟ್ವೀಟರ್‌ ಹಾಗೂ ಫೇಸ್‌ಬುಕ್‌ನಲ್ಲಿ ಬೆಂಗಳೂರು ಪೊಲೀಸರಿಗೆ ಲಕ್ಷಾಂತರ ಜನರು ಫಾಲೋವ​ರ್‍ಸ್ಗಳಿದ್ದಾರೆ. ಈಗ ಚಾನೆಲ್‌ ಮುಖೇನ ಮತ್ತಷ್ಟುಹೈಟೆಕ್‌ ಆಗುತ್ತಿದ್ದಾರೆ. 

ಪೊಲೀಸರ ಚಾನೆಲ್‌'ಗೆ ಆಯುಕ್ತರ ಕೇಂದ್ರ ಕಚೇರಿ ಕಟ್ಟಡದಲ್ಲೇ ಅಗತ್ಯ ಸ್ಥಳಾವಾಕಾಶ ಕಲ್ಪಿಸಲಾಗಿದೆ. ಕಚೇರಿ ಐದನೇ ಮಹಡಿಯಲ್ಲಿ ಅತ್ಯಾಧುನಿಕ ಮಟ್ಟದ ಪುಟ್ಟಸ್ಟುಡಿಯೊ ಹೊಂದಿದ್ದು, ಕೆಳ ಮಹಡಿಯಲ್ಲಿ ಸಾರ್ವಜನಿಕರ ಜತೆ ಆಯುಕ್ತರ ಸಂವಾದಕ್ಕೆ ಪ್ರತ್ಯೇಕ ಸಭಾಂಗಣವಿದೆ.

ಈಗಾಗಲೇ ಸಾಮಾಜಿಕ ತಾಣಗಳ ನಿರ್ವಹಣೆಗೆ ನಿಯೋಜಿಸಿರುವ ಸಿಬ್ಬಂದಿಯೇ ಚಾನೆಲ್‌ಗೂ ಕೆಲಸ ಮಾಡಲಿದ್ದಾರೆ. ಆನಂತರ ಚಾನೆಲ್‌ಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ಆಯುಕ್ತರು ನಿರ್ಧರಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಪೊಲೀಸ್‌ ವೆಬ್‌'ಸೈಟ್‌'ನಲ್ಲಿ ಪ್ರಸಾರ:
ಬೆಂಗಳೂರು ನಗರ ಪೊಲೀಸರ ‘ಬಿಸಿಪಿ ಟಿವಿ'ಯು ಪೊಲೀಸರ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಸಾರವಾಗ ಲಿದೆ. ಇದರಲ್ಲಿ ನಗರ ಪೊಲೀಸರ ಕುರಿತು ಕ್ಷಣ ಕ್ಷಣದ ಮಾಹಿತಿ ಬಿತ್ತರವಾಗಲಿದೆ. ಆದರೆ, ಸಾಮಾನ್ಯ ಚಾನಲ್‌ಗಳ ರೀತಿ ಟಿವಿಯಲ್ಲಿ ವೀಕ್ಷಣೆ ಲಭ್ಯವಿರುವುದಿಲ್ಲ ಎಂದು ಪೊಲೀಸ್‌ ಇಲಾಖೆಯ ಮೂಲಕಗಳು ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ
epaper.kannadaprabha.in