ಬೆಂಗಳೂರು (ಜು. 21):  ನಗರದಲ್ಲಿ ಆ.1ರಿಂದ ಪ್ಲಾಸ್ಟಿಕ್‌ ಚೀಲ ಬಳಸುವ ಅಂಗಡಿಗಳ ಮೇಲೆ ಐದು ಪಟ್ಟು ದಂಡ ಮತ್ತು ಅಂಗಡಿ ಪರವಾನಗಿ ರದ್ದುಪಡಿಸುವುದಾಗಿ ಮೇಯರ್‌ ಗಂಗಾಬಿಕೆ ಮಲ್ಲಿಕಾರ್ಜುನ್‌ ಎಚ್ಚರಿಸಿದ್ದಾರೆ.

ಜಯನಗರದ ಭೈರಸಂದ್ರ ವಾರ್ಡ್‌ನಲ್ಲಿ ಶಾಲಾ ಮಕ್ಕಳೊಂದಿಗೆ ‘ನಮ್ಮ ಕಸ ನಮ್ಮ ಜವಾಬ್ದಾರಿ’ ಹಾಗೂ ‘ಬೇಡ ಬೇಡ ಪ್ಲಾಸ್ಟಿಕ್‌ ಬೇಡ’ ಘೋಷಣೆಯೊಂದಿಗೆ ಆಯೋಜಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸೆಪ್ಟೆಂಬರ್‌ 1ರಿಂದ ಪ್ರತಿಯೊಂದು ಮನೆಗಳಲ್ಲೂ ಕಸ ವಿಂಗಡಿಸಿ ನೀಡಬೇಕು. ಇಲ್ಲದಿದ್ದರೆ ದಂಡ ವಿಧಿಸುವ ಪದ್ಧತಿ ಜಾರಿಗೆ ಬರಲಿದೆ. ಎಲ್ಲೆಂದರಲ್ಲಿ ಮನಸೋ ಇಚ್ಛೆ ಕಸ ಎಸೆಯುವವರನ್ನು ಪತ್ತೆ ಮಾಡಿ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ. ಬಿಬಿಎಂಪಿ ಸದಸ್ಯ ಎನ್‌.ನಾಗರಾಜು ಮಾತನಾಡಿ, ಜಯನಗರ ಪ್ರದೇಶವನ್ನು ಪ್ಲಾಸ್ಟಿಕ್‌ ಮುಕ್ತಮಾಡಲು ಜಾಗೃತಿ ಅಭಿಯಾನ ಆರಂಭಿಸಿದ್ದೇವೆ. ಪ್ರತಿಯೊಂದು ಅಂಗಡಿಗಳಿಗೆ ತೆರಳಿ ಪರಿಶೀಲಿಸಿ ಪ್ಲಾಸ್ಟಿಕ್‌ ಬಳಕೆ ಮಾಡಿದರೆ ದಂಡ ವಿಧಿಸುತ್ತೇವೆ ಎಂದರು.