ಅಪನಗದೀಕರಣ ಆದೇಶದ ಬಳಿಕ ಬೇನಾಮಿ ಆಸ್ತಿ ಕಾಯ್ದೆ-1988ನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮೋದಿ ಸರ್ಕಾರ ತೀರ್ಮಾನಿಸಿತ್ತು. ನವೆಂಬರ್ 1, 2016ರಿಂದ ಈ ಆದೇಶ ಜಾರಿಗೆ ಬಂದಿತ್ತು.

ನವದೆಹಲಿ(ಜ.31): 500 ರು. ಹಾಗೂ 1000 ರು. ಅಪನಗದೀಕರಣದ ಮೂಲಕ ಕಾಳಧನಿಕರು ಹಾಗೂ ಖೋಟಾ ನೋಟುದಾರರ ಮೇಲೆ ಪ್ರಹಾರ ಮಾಡಲಾಗಿತ್ತು. ಇದಾದ ನಂತರ ಮುಂದಿನ ಗುರಿ ಬೇನಾಮಿ ಆಸ್ತಿಕೋರರು ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದರು. ಇದು ಈಗ ಕಾರ್ಯರೂಪಕ್ಕೆ ಬರುತ್ತಿದೆ. ನ.8ರ ನೋಟು ರದ್ದತಿ ಆದೇಶದ ನಂತರ ಆದಾಯ ತೆರಿಗೆ ಇಲಾಖೆ 87 ನೋಟಿಸ್‌ಗಳನ್ನು ಬೇನಾಮಿ ಹಣ ಇಟ್ಟವರಿಗೆ ಜಾರಿಗೊಳಿಸಿದೆ ಮತ್ತು ಅವರಿಗೆ ಸಂಬಂಧಿಸಿದ ಕೋಟ್ಯಂತರ ರೂ. ಮೌಲ್ಯದ 42 ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಂಡಿದೆ.

ಅಪನಗದೀಕರಣ ಆದೇಶದ ಬಳಿಕ ಬೇನಾಮಿ ಆಸ್ತಿ ಕಾಯ್ದೆ-1988ನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮೋದಿ ಸರ್ಕಾರ ತೀರ್ಮಾನಿಸಿತ್ತು. ನವೆಂಬರ್ 1, 2016ರಿಂದ ಈ ಆದೇಶ ಜಾರಿಗೆ ಬಂದಿತ್ತು. ಈ ಪ್ರಕಾರ, ಇನ್ನಾರದೋ ಖಾತೆಯಲ್ಲಿ ಹಳೆಯ ನೋಟಿನ ರೂಪದಲ್ಲಿದ್ದ ಬೇನಾಮಿ ಹಣ ಇಟ್ಟಿದ್ದು ಸಾಬೀತಾದರೆ ಕನಿಷ್ಠ 1ರಿಂದ ಗರಿಷ್ಠ 7 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಸಾರ್ವಜನಿಕ ಪ್ರಕಟಣೆ ಮೂಲಕ ಎಚ್ಚರಿಸಲಾಗಿತ್ತು.

‘ಈಗ ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಬೇನಾಮಿ ಹಣ, ಆಸ್ತಿಯ ಆಳಕ್ಕಿಳಿದು ತನಿಖೆ ಆರಂಭಿಸಿದ್ದು, ನ.8ರಿಂದ ಈವರೆಗೆ 87 ನೋಟಿಸ್‌ಗಳನ್ನು ಬೇನಾಮಿ ಹಣ ಇರಿಸಿದವರಿಗೆ ನೀಡಿದೆ. ಅಲ್ಲದೆ, ಇದೇ ಕಾಯ್ದೆಯಡಿ 42 ಆಸ್ತಿಗಳನ್ನು (ಇದು ಬ್ಯಾಂಕ್ ಖಾತೆಗಳಲ್ಲಿರುವ ಹಣದ ರೂಪದಲ್ಲಿದೆ ಮತ್ತು ಸ್ಥಿರಾಸ್ತಿ ರೂಪದಲ್ಲೂ ಇದೆ) ವಶಪಡಿಸಿಕೊಳ್ಳಲಾಗಿದೆ’ ಎಂದು ಇಲಾಖೆಯ ವಿಶ್ಲೇಷಣಾ ವರದಿ ಹೇಳಿದೆ.

ಬೇನಾಮಿ ಆಸ್ತಿ ಕಾಯ್ದೆಯನ್ನು ಜಾರಿಗೆ ತರುವ ನೋಡಲ್ ಸಂಸ್ಥೆ ಆದಾಯ ತೆರಿಗೆ ಇಲಾಖೆಯಾಗಿದೆ.ಜನಧನ ಖಾತೆಗಳು, ಡಾರ್ಮ್ಯಾಟ್ ಖಾತೆಗಳು ಮತ್ತು ಕೆಲ ಬೇನಾಮಿ ಖಾತೆಗಳಲ್ಲಿ ಯಾವುದೇ ಸೂಕ್ತ ಲೆಕ್ಕವಿಲ್ಲದ ರದ್ದಾದ ನೋಟುಗಳ ರೂಪದಲ್ಲಿ ಹಣ ಇಡಲಾಗುತ್ತಿದೆ ಎಂಬ ಗುಮಾನಿ ಮೇರೆಗೆ ದೇಶಾದ್ಯಂತ ತಪಾಸಣೆ ನಡೆಸಲಾಗುತ್ತಿದೆ. ಕಾಳಧನಿಕರು ಹಳೆಯ ನೋಟುಗಳ ರೂಪದಲ್ಲಿ ಠೇವಣಿ ಇಟ್ಟು ಅವನ್ನು ಸಕ್ರಮಗೊಳಿಸುವ ಹುನ್ನಾರದಲ್ಲಿ ನಿರತರಾಗಿದ್ದು ಈ ವೇಳೆ ಕಂಡುಬಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಯ್ದೆ ಏನು ಹೇಳುತ್ತೆ?: ಕಾಯ್ದೆಯ ಪ್ರಕಾರ, ಬೇನಾಮಿ ಹಣ ಇರಿಸಿದವರನ್ನು ಫಲಾನುಭವಿ ಮಾಲೀಕ ಎಂದು ಕರೆಯಲಾಗುತ್ತದೆ ಹಾಗೂ ಬೇನಾಮಿ ಹಣ ಹೊಂದಿದವರ ಹಣವನ್ನು ಇರಿಸಿಕೊಂಡ ಖಾತೆದಾರನ್ನು ಬೇನಾಮಿದಾರ ಎಂದು ಸಂಬೋಧಿಸಲಾಗುತ್ತದೆ. ಬೇನಾಮಿದಾರರು, ಫಲಾನುಭವಿ ಮಾಲೀಕ ಮತ್ತು ಇವರ ವ್ಯವಹಾರಕ್ಕೆ ಅನುಕೂಲ ಕಲ್ಪಿಸುವವರಿಗೆ 1ರಿಂದ 7 ವರ್ಷ ಕಠಿಣ ಜೈಲು ವಾಸ ವಿಧಿಸಲಾಗುತ್ತದೆ.

ಇನ್ನು ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಿಕೊಂಡು ಅದರ ಮಾರುಕಟ್ಟೆ ಮೌಲ್ಯದ ಶೇ.25ರಷ್ಟು ದಂಡವನ್ನೂ ವಿಧಿಸಲಾಗುತ್ತದೆ.