ಬಳ್ಳಾರಿ (ಜೂ. 22): ರಾಜ್ಯದಲ್ಲಿ ಅತ್ಯುತ್ತಮ ಮಳೆಯಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗಲಿ ಎಂದು ದೇವರನ್ನು ಪ್ರಾರ್ಥಿಸಿ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಶನಿವಾರದಿಂದ ಉಪವಾಸ ವ್ರತ ಆರಂಭಿಸಲಿದ್ದಾರೆ.

ನಗರದಲ್ಲಿ ಶುಕ್ರವಾರ ಹುಟ್ಟುಹಬ್ಬ ಆಚರಿಸಿಕೊಂಡ ರೆಡ್ಡಿ, ರೈತರು ಹಾಗೂ ಸಾರ್ವಜನಿಕರಿಗೆ ಒಳಿತಾಗಲಿ ಎಂದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಶ್ರೀ ಹನುಮಾನ್‌ ದೇವರಲ್ಲಿ ಹರಕೆ ಹೊತ್ತು ಉಪವಾಸ ವ್ರತ ಕೈಗೊಳ್ಳಲಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ರೆಡ್ಡಿ, ನೀರಿಲ್ಲದೇ ರೈತರು, ಜನರು ತೀವ್ರ ಕಂಗಾಲಾಗಿದ್ದಾರೆ. ಹೀಗಾಗಿ ಜಲಾಶಯ ಭರ್ತಿಯಾಗಬೇಕು, ತುಂಬಿಹರಿಯಬೇಕು ಎಂದು ಹನುಮಾನ್‌ ದೇವರಲ್ಲಿ ಹರಕೆ ಹೊತ್ತಿರುವುದಾಗಿ ತಿಳಿಸಿದರು.

ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಮಾತನಾಡಿ, ನನ್ನ ಸೋದರ ಸೋಮಶೇಖರ ರೆಡ್ಡಿ ಚಿಕ್ಕಂದಿನಿಂದಲೂ ಹನುಮಾನ್‌ ದೇವರ ಭಕ್ತರಾಗಿದ್ದಾರೆ. 2009ರಲ್ಲಿ ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿಲ್ಲದೇ ರೈತರು ಸಮಸ್ಯೆ ಎದುರಿಸುತ್ತಿದ್ದಾಗ 18 ದಿನಗಳ ಕಾಲ ಉಪವಾಸ ಮಾಡಿದ್ದರು. ಆಗ ಮಳೆ ಬಂದು ಜಲಾಶಯವು ಭರ್ತಿಯಾಗಿದ್ದು, ಈಗಲೂ ಅವರ ಸಂಕಲ್ಪ ಈಡೇರಲಿ ಎಂದು ಹಾರೈಸಿದರು.