ಬೆಂಗಳೂರು :  ಬೆಳ್ಳಂದೂರು ಅಗರ ಕೆರೆಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ ನಿಗದಿ ಮಾಡಿರುವ ಬಫರ್‌ಜೋನ್‌ ಅಂತಿಮ ತೀರ್ಪಿನ ವಿಚಾರಣೆ ಜ.8ರಂದು ನಿಗದಿಯಾಗಿದೆ.

ಆದರೆ, ಹಸಿರು ನ್ಯಾಯಪೀಠದ ಜನಪರ ಆದೇಶಕ್ಕೆ ತಡೆ ಒಡ್ಡುವುದಕ್ಕಾಗಿ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ರಕ್ಷಣೆಗಾಗಿ ದುಬಾರಿ ಹಾಗೂ ಪ್ರಭಾವಿ ವಕೀಲರ ದಂಡನ್ನು ನೇಮಿಸಲಾಗಿದೆ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ ಆರೋಪಿಸಿದೆ.

ರಾಜ್ಯ ಸರ್ಕಾರ, ಪ್ರಾಧಿಕಾರಗಳು ಮತ್ತು ಇತರೆ ಬಿಲ್ಡರ್‌ಗಳು ಅಡ್ವೋಕೇಟ್‌ ಜನರಲ್‌ ಉದಯ್‌ ಹೊಳ್ಳ, ಹಿರಿಯ ವಕೀಲರಾದ ಬಸವ ಪ್ರಭು ಪಾಟೀಲ್‌, ಕಿರಣ್‌ ಸೂರಿ, ಶಶಿಕಿರಣ್‌ ಶೆಟ್ಟಿಅವರನ್ನು ನೇಮಿಸಿದೆ. ಮಂತ್ರಿ ಟೆಕ್‌ ಜೋನ್‌ನಿಂದ ಹಿರಿಯ ವಕೀಲರಾದ ಗೋಪಾಲ್‌ ಸುಬ್ರಹ್ಮಣ್ಯನ್‌, ದುಷ್ಯಂತ್‌ ದಾವೆ, ನೀರಜ್‌ ಕಿಶನ್‌ ಕೌಲ್‌, ವೆಂಕಟರಮಣ ಮತ್ತು ಕೋರ್‌ ಮೈಂಡ್‌ ಸಾಫ್ಟ್‌ವೇರ್‌ ಸವೀರ್‍ಸಸ್‌ ಸಂಸ್ಥೆಯು ಕಪಿಲ್‌ ಸಿಬಲ್‌ ಅವರನ್ನು ನೇಮಿಸಿದೆ.

ಮುಂಚೂಣಿಯಲ್ಲಿ ಎನ್‌ಬಿಎಫ್‌:

ಬೆಂಗಳೂರಿನ ಕೆರೆಗಳು ಮತ್ತು ಜಲಮೂಲಗಳನ್ನು ರಕ್ಷಿಸುವ ಹೋರಾಟವನ್ನು ಅಪಾರ ಜನ ಬೆಂಬಲದಿಂದಾಗಿಯೇ ಸುಪ್ರೀಂಕೋರ್ಟ್‌ ಮತ್ತು ಎನ್‌ಜಿಟಿಗೆ ಹೋಗಲು ಸಾಧ್ಯವಾಗಿದೆ. ಆದರೆ, ರಾಜ್ಯ ಸರ್ಕಾರ ಸಾರ್ವಜನಿಕ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸದೆ, ಬಿಲ್ಡರ್‌ಗಳ ಜೊತೆ ಕೈಜೋಡಿಸಿ ದುಬಾರಿ ವಕೀಲರಿಗೆ ಸುರಿಯಲು ಹೊರಟಿದೆ ಎಂದು ಪ್ರತಿಷ್ಠಾನದ ಸಿಇಒ ಎನ್‌.ಆರ್‌.ಸುರೇಶ್‌ ಆರೋಪಿಸಿದ್ದಾರೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ; ಆರ್‌ಸಿ

ನಾಗರಿಕರ ಹಕ್ಕುಗಳನ್ನು ಹತ್ತಿಕ್ಕಲು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಲಾಗುತ್ತಿದೆ. ಬಿಲ್ಡರ್‌ಗಳು ಹಸಿರು ಪೀಠದ ಆದೇಶಕ್ಕೆ ತಡೆಯೊಡ್ಡಲು ಯತ್ನಿಸುತ್ತಿದ್ದರೆ, ಎನ್‌ಬಿಎಫ್‌ ಬೆಂಗಳೂರನ್ನು ಉಳಿಸಲು ಹೋರಾಡುತ್ತಿದೆ. ಹೀಗಾಗಿ, ಈ ಹೋರಾಟವನ್ನು ಬೆಂಬಲಿಸುವಂತೆ ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ್‌ ಮನವಿ ಮಾಡಿದ್ದಾರೆ.

ಸಮ್ಮಿ ಶ್ರ ಸರ್ಕಾರವು ಬೆಂಗಳೂರನ್ನು ನಾಶಪಡಿಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಜೊತೆ ನಂಟು ಹೊಂದಿರುವುದನ್ನು ಸಾಬೀತುಪಡಿಸಿದೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಬಿಲ್ಡರ್‌ಗಳಿಗೆ ನೀಡುತ್ತಿರುವ ಬೆಂಬಲ ರಾಹುಲ್‌ ಗಾಂಧಿ ಅವರ ಬೂಟಾಟಿಕೆಯನ್ನು ಬಯಲು ಮಾಡಿದೆ ಎಂದಿದ್ದಾರೆ.