ಬೆಳಗಾವಿ :  ಉತ್ತರ ಕರ್ನಾಟಕದ ಅಭಿವೃದ್ಧಿಯ ಸಲುವಾಗಿ ಸುವರ್ಣ ವಿಧಾನಸೌಧಕ್ಕೆ ಕೆಲ ಇಲಾಖೆಗಳನ್ನು ಸ್ಥಳಾಂತರಿಸಿ ಎಂದು ಹೋರಾಟಗಾರರು ಒತ್ತಾಯಿಸುತ್ತಿರುವ ವೇಳೆಯಲ್ಲೇ, ಸರ್ಕಾರ ಬೆಳಗಾವಿಯಲ್ಲಿದ್ದ ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ (ಕೆ-ಶಿಪ್‌) ವಿಭಾಗ ಮಟ್ಟದ ಕಚೇರಿಯನ್ನೇ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ತವರು ಜಿಲ್ಲೆ ಹಾಸನಕ್ಕೆ ಹುದ್ದೆಸಹಿತ ಎತ್ತಂಗಡಿ ಮಾಡಿ ಆದೇಶಿಸಿರುವ ಬೆಳವಣಿಗೆ ನಡೆದಿದೆ.

ರಾಜ್ಯ ಸರ್ಕಾರದ ಈ ಧೋರಣೆ ಸಹಜವಾಗಿಯೇ ಉತ್ತರ ಕರ್ನಾಟಕದ ಜನತೆ, ಕನ್ನಡಪರ ಸಂಘಟನೆಗಳು ಸೇರಿದಂತೆ ನಾನಾ ಸಂಘ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರದ ಈ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಸಂಘಟನೆಗಳು ಮತ್ತೆ ಹೋರಾಟದ ಹಾದಿ ಹಿಡಿಯುವ ಎಚ್ಚರಿಕೆ ನೀಡಿವೆ. ಮಾತ್ರವಲ್ಲದೆ ಯಾವುದೇ ಕಾರಣಕ್ಕೂ ಬೆಳಗಾವಿಯ ಯಾವ ವಿಭಾಗೀಯ ಕಚೇರಿಯನ್ನೂ ಸ್ಥಳಾಂತರಿಸಬಾರದು ಎಂದೂ ಆಗ್ರಹಿಸಿವೆ.

ಸರ್ಕಾರದ ಆದೇಶವೇನು?:  ಲೋಕೋಪಯೋಗಿ ಇಲಾಖೆ ಸಚಿವ ಎಚ್‌.ಡಿ.ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಜೂನ್‌ 11 ಮತ್ತು 25 ರಂದು ಅಧಿಕಾರಿಗಳ ಸಭೆಯಲ್ಲಿ ಈ ಕಚೇರಿಗಳನ್ನು ಬೆಳಗಾವಿಯಿಂದ ಸ್ಥಳಾಂತರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ ಜುಲೈ 27 ರಂದು ಬೆಳಗಾವಿಯ ಕೆ-ಶಿಪ್‌ ವಿಭಾಗೀಯ ಮಟ್ಟದ ಕಚೇರಿಯನ್ನು ಹಾಸನಕ್ಕೆ ಹಾಗೂ ಉಪವಿಭಾಗದ ಕಚೇರಿಯನ್ನು ಮಡಿಕೇರಿಗೆ ಹುದ್ದೆಗಳ ಸಮೇತ ಸ್ಥಳಾಂತರಿಸುವಂತೆ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜಿ. ವೆಂಕಟೇಶಯ್ಯ ಅವರು ಆದೇಶ ಹೊರಡಿಸಿದ್ದಾರೆ.

ಕೆ-ಶಿಪ್‌ ಹಾಸನ ಕಚೇರಿ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಅರಕಲಗೂಡು, ಆಲೂರು, ಬೇಲೂರು, ಸಕಲೇಶಪುರ ಉಪ ವಿಭಾಗಗಳು ಕಾರ್ಯನಿರ್ವಹಿಸಲಿವೆ. ಅಲ್ಲದೇ, ಮಡಿಕೇರಿ ಉಪವಿಭಾಗದ ಕಚೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧೀನದಲ್ಲಿ ಕಾರ್ಯನಿರ್ವಹಿಸಲಿದೆ. ಈ ಹಿಂದೆ ಹಾಸನದಲ್ಲಿ ಕೆಶಿಪ್‌ ಕಚೇರಿ ಕಾರ್ಯನಿರ್ವಹಿಸುತ್ತಿರಲಿಲ್ಲ.

ರೇವಣ್ಣ ಪ್ರಭಾವ ಆರೋಪ: ಬೆಳಗಾವಿ ಕೆಶಿಪ್‌ ವಿಭಾಗೀಯ ಮಟ್ಟದ ಕಚೇರಿ ವ್ಯಾಪ್ತಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿವೆ. ಶೇ.70ರಷ್ಟುಕಾಮಗಾರಿ ಪೂರ್ಣಗೊಂಡಿದ್ದು, ಶೇ.30 ರಷ್ಟುಕಾಮಗಾರಿ ನಡೆಯಬೇಕಿದೆ. ಇದೀಗ ದಿಢೀರನೇ ಹುದ್ದೆಗಳ ಸಮೇತ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರಿಸಿರುವುದು ತೀವ್ರ ಚರ್ಚೆಗೆ ಎಡೆಮಾಡಿದೆ. ಇದರ ಹಿಂದೆ ಲೋಕೋಪಯೋಗಿ ಇಲಾಖೆ ಸಚಿವ ಎಚ್‌.ಡಿ.ರೇವಣ್ಣ ಅವರ ಪ್ರಭಾವ ಕೆಲಸ ಮಾಡಿದೆ ಎನ್ನುವ ಆರೋಪ ಕೇಳಿಬರುತ್ತಿದೆ.


ಸರ್ಕಾರ ಕೂಡಲೇ ಉತ್ತರ ಕರ್ನಾಟಕದ ಬೆಳಗಾವಿಯ ರಾಜ್ಯಮಟ್ಟದ ಯಾವ ಕಾರ್ಯಾಲಯವನ್ನು ಸ್ಥಳಾಂತರಿಸುವ ದುಸ್ಸಾಹಕ್ಕೆ ಕೈ ಹಾಕಬಾರದು. ಕೂಡಲೇ ಸ್ಥಳಾಂತರಗೊಳಿಸಲು ನಿರ್ಧರಿಸಿರುವ ಲೋಕೋಪಯೋಗಿ ಇಲಾಖೆಯ ಕೆಶಿಪ್‌ ಕಾರ್ಯಾಲಯವನ್ನು ಬೆಳಗಾವಿಯಲ್ಲಿಯೇ ಉಳಿಸಬೇಕು. ಒಂದು ವೇಳೆ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಾರ್ಯಾಲಯಗಳನ್ನು ವರ್ಗಾಯಿಸಿ ಆಡಳಿತಾತ್ಮಕ ಶಕ್ತಿ ತುಂಬುವ ಕಾರ್ಯಕ್ಕೆ ಹಿಂದೇಟು ಹಾಕಿದರೆ ಉಗ್ರ ಹೋರಾಟ ಅನಿವಾರ್ಯ.

- ಅಶೋಕ ಪೂಜಾರಿ, ಉತ್ತರ ಕರ್ನಾಟಕ ವಿಕಾಸ ವೇದಿಕೆ ಮುಖಂಡ.


ಸಿಎಂ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ತಾಳಮೇಳವೇ ಇಲ್ಲ. ತಮ್ಮ ಕುಮಾರಸ್ವಾಮಿ ಬೆಳಗಾವಿಗೆ ಎರಡನೇ ರಾಜಧಾನಿ ಘೋಷಣೆ, ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಕಚೇರಿ ಸ್ಥಳಾಂತರ ಮಾಡುವುದಕ್ಕೆ ಬದ್ಧವಿದ್ದಾರೆ. ಆದರೆ ರೇವಣ್ಣ ಬೆಳಗಾವಿ ಕೆಶಿಪ್‌ ಕಚೇರಿ ಸ್ಥಳಾಂತರಿಸಿದ್ದಾರೆ. ಸ್ಥಳಾಂತರ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕು.

- ಅಶೋಕ ಚಂದರಗಿ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ


ಉತ್ತರ ಕರ್ನಾಟಕದ ಅಭಿವೃದ್ದಿಗೆ ಪೂರಕವಾಗಿ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಕಚೇರಿಗಳನ್ನು ಸ್ಥಳಾಂತರ ಮಾಡುವಂತೆ ರಾಜ್ಯ ಸರ್ಕಾರದ ಮೇಲೆ ನಾವು ಒತ್ತಡ ಹಾಕುತ್ತಲೇ ಇದ್ದೇವೆ. ಆದರೆ, ಸರ್ಕಾರ ಬೆಳಗಾವಿಯಲ್ಲಿರುವ ವಿಭಾಗೀಯ ಮಟ್ಟದ ಕಚೇರಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದರೆ ಈ ಭಾಗದ ಅಭಿವೃದ್ಧಿಯಾಗುವುದಾದರೂ ಹೇಗೆ? ಹಾಸನಕ್ಕೆ ಸ್ಥಳಾಂತರ ಮಾಡಿರುವ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕು.

- ಡಾ.ಸಿದ್ಧರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ, ಬೆಳಗಾವಿ