ಬೆಂಗಳೂರು(ಆ.22): ಉತ್ತರ ಕರ್ನಾಟಕದಲ್ಲಿ ತಲೆದೂರಿರುವ ಭೀಕರ ಜಲಪ್ರಳಯ ಹಾಗೂ ನಿರಂತರ ಮಳೆಯಿಂದಾಗಿ ಮನೆ, ಆಸ್ತಿ ಕಳೆದುಕೊಂಡು ನಿರಾಶ್ರಿತರಾದ ಜನತೆಗೆ ಬಿಇಎಲ್ ಉತ್ತರ ಕರ್ನಾಟಕ ಬಳಗ ವಿಭಿನ್ನ ರೀತಿಯಲ್ಲಿ ನೆರವು ನೀಡಲು ಮುಂದಾಗಿದೆ.

ಸುಮಾರು 750 ಬಾಕ್ಸ್‌ಗಳಲ್ಲಿ ದಿನಬಳಕೆಯ ಪದಾರ್ಥ ಸೇರಿದಂತೆ ಒಟ್ಟು 20 ಬಗೆಯ ಆಹಾರ ಸಾಮಾಗ್ರಿಗಳನ್ನು ಒದಗಿಸುವುದರ ಜೊತೆಗೆ ಮನೆ ಕಳೆದು ಕೊಂಡವರಿಗೆ ಹಣ ನೀಡುವುದರ ಬದಲಾಗಿ ಮನೆ ಪುನರ್ ನಿರ್ಮಾಣಕ್ಕೆ ಅಗತ್ಯವಿರುವ ಇಟ್ಟಿಗೆ ಸಿಮೆಂಟ್, ಕಬ್ಬಿಣ ಇತ್ಯಾದಿ ವಸ್ತುಗಳನ್ನು ನೇರವಾಗಿ ಸಂತ್ರಸ್ತರಿಗೆ ಖರೀದಿಸಿ ಕೊಡುವ ಕಾರ್ಯಕ್ಕೆ ಮುಂದಾಗಿದೆ.

ನೆರೆ ಪೀಡಿತ ಪ್ರದೇಶಗಳಾದ ಬಾಗಲಕೋಟ ಜಿಲ್ಲೆಯ ಮುತ್ತೂರು, ಕಂಕಣವಾಡಿ, ಕಳಕೋಡ, ತಮದಡ್ಡಿ, ಹಿಪ್ಪರಗಿ, ಹಳಿಂಗಳಿ ಜಂಬಗಿ, ರೂಗಿ, ಒಂಟಗೋಡಿ ಹಾಗೂ ಅಥಣಿ ತಾಲೂಕಿನ ಸೇಗುಣಸಿ ಗ್ರಾಮಗಳಲ್ಲಿನ ನೆರೆ ಸಂತ್ರಸ್ತರಿಗೆ “ನೇರ ನೆರವು” ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ಸಹಾಯ ಹಸ್ತವನ್ನು ಜಾಲಹಳ್ಳಿಯ ಬಿಇಎಲ್‌ನ ಉತ್ತರ ಕರ್ನಾಟಕ ಬಳಗ ಕೈಗೊಂಡಿದೆ.

ಸರಿಸುಮಾರು ಒಂದು ತಿಂಗಳಿಗಾಗುವಷ್ಟು ಪ್ರತಿ ಕುಟುಂಬಕ್ಕೆ 20 ಆಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ. ಪ್ರಮುಖವಾಗಿ ಅಕ್ಕಿ, ಗೋದಿ ಹಿಟ್ಟು, ಸಕ್ಕರೆ, ಎಣ್ಣೆ, ಬೆಳೆ, ರವೆ, ಅವಲಕ್ಕಿ, ಚಹಾಪುಡಿ, ಉಪ್ಪು, ಬಿಸ್ಕತ್, ಮೇಣದ ಬತ್ತಿ, ಬೆಂಕಿ ಕೊಟ್ಟಣ, ಟಾರ್ಚ್, ಬ್ಯಾಟರಿ, ಸ್ಯಾನಿಟರಿ ಪ್ಯಾಡ್, ತಟ್ಟೆ ಸೇರಿದಂತೆ ಹಲವು ದಿನಬಳಕೆಯ ವಸ್ತುಗಳನ್ನು ನೀಡಲಾಗಿದೆ.