ಜೆ.ಸಿ.ನಗರ ಉಪವಿಭಾಗದ ಎಸಿಪಿ ಮಂಜುನಾಥ್ ಬಾಬು ಅವರಿಂದ ವಿನಾ ಕಾರಣ ಹಲ್ಲೆಗೊಳಗಿದ್ದರೂ ಪ್ರಕರಣ ಕುರಿತು ರಾಜಿ ಸಂಧಾನ ಮಾಡಿಕೊಳ್ಳುವಂತೆ ಕರೆಗಳು ಬರಲಾರಂಭಿಸಿವೆ ಎಂದು ‘ಶೆಟ್ಟಿ ಲಂಚ್ ಹೋಂ’ ಮಾಲೀಕ ರಾಜೀವ್‌ಶೆಟ್ಟಿ ಆರೋಪಿಸಿದ್ದಾರೆ.
ಬೆಂಗಳೂರು : ಜೆ.ಸಿ.ನಗರ ಉಪವಿಭಾಗದ ಎಸಿಪಿ ಮಂಜುನಾಥ್ ಬಾಬು ಅವರಿಂದ ವಿನಾ ಕಾರಣ ಹಲ್ಲೆಗೊಳಗಿದ್ದರೂ ಪ್ರಕರಣ ಕುರಿತು ರಾಜಿ ಸಂಧಾನ ಮಾಡಿಕೊಳ್ಳುವಂತೆ ಕರೆಗಳು ಬರಲಾರಂಭಿಸಿವೆ ಎಂದು ‘ಶೆಟ್ಟಿ ಲಂಚ್ ಹೋಂ’ ಮಾಲೀಕ ರಾಜೀವ್ಶೆಟ್ಟಿ ಆರೋಪಿಸಿದ್ದಾರೆ.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಳುತ್ತಲೇ ಮಾತು ಪ್ರಾರಂಭಿಸಿದ ಅವರು, ಕಳೆದ 15 ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದೇನೆ. ನನ್ನ ಹೋಟೆಲ್ನಿಂದ ಯಾವುದೇ ಪೊಲೀಸರಿಗೆ ನಯಾ ಪೈಸೆ ಲಂಚ ನೀಡಿಲ್ಲ. ಯಾವುದೇ ಪೊಲೀಸ್ ಅಧಿಕಾರಿಯೂ ಹಣಕ್ಕಾಗಿ ನನ್ನ ಬಳಿ ಬಂದಿರಲಿಲ್ಲ. ಕಾರಣವಿಲ್ಲದಿದ್ದರೂ ಹಲ್ಲೆ ನಡೆಸಿದ್ದಾರೆ. ಘಟನೆಯಿಂದಾಗಿ ನನ್ನ ಕುಟುಂಬ ಸಮಾಜದಲ್ಲಿ ತಲೆ ಎತ್ತಿ ತಿರುಗದಂತಾಗಿದೆ. ಘಟನೆ ಬಳಿಕ ಬೆದರಿಕೆ ಕರೆಗಳು ಮಾತ್ರ ಬರುತ್ತಿದ್ದವು. ಈಗ ರಾಜಿ ಮಾಡಿಕೊಳ್ಳುವಂತೆ ಕರೆಗಳು ಬರಲಾರಂಭಿಸಿವೆ ಎಂದರು.
ಅಲ್ಲದೆ, ಘಟನೆಯಲ್ಲಿ ಯಾವುದೇ ತಪ್ಪನ್ನು ಮಾಡಿಲ್ಲ. ನನ್ನ ತಪ್ಪಿದ್ದರೆ ಕಾನೂನು ಪ್ರಕಾರ ಶಿಕ್ಷೆ ನೀಡಲಿ. ಅದನ್ನು ಬಿಟ್ಟು ವಿನಾ ಕಾರಣ ಹಲ್ಲೆ ಮಾಡಲಾಗಿದೆ. ಅದಕ್ಕೆ ನ್ಯಾಯ ಸಿಗಬೇಕಾಗಿದೆ. ನ್ಯಾಯಾಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಆದರೂ ಈ ಬೆಳವಣಿಗೆ ಏಕೆ ಆಗುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ಬೇಸರದಿಂದ ನುಡಿದರು.
ನನ್ನ ಹೋಟೆಲ್ಗೆ ಪೊಲೀಸರು ಬಂದು ಊಟ ಮಾಡಿ ಹೋಗಿದ್ದಾರೆ. ಯಾರೂ ಸಹಾ ನನ್ನನ್ನು ಪ್ರಶ್ನಿಸಿಲ್ಲ. ಪಕ್ಕದ ಹೋಟೆಲ್ಗಳು ಮೂರು ಗಂಟೆಯವರೆಗೂ ತೆರೆದಿರುತ್ತದೆ. ಆದರೂ ಅವರನ್ನು ಪ್ರಶ್ನಿಸಿಲ್ಲ. ಎಸಿಪಿ ಮಂಜುನಾಥ್ ನೇರವಾಗಿ ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಕೈ ಮುಗಿದು ಕೇಳಿಕೊಂಡರೂ ಬಿಡಲಿಲ್ಲ. ಇದಕ್ಕೆ ಕಾರಣ ಏನು ಎಂಬುದು ತಿಳಿಯಬೇಕಾಗಿದೆ. ಅಲ್ಲದೆ, ತಪ್ಪು ಮಾಡಿದ ಅಧಿಕಾರಿ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ರಾಜಕೀಯ ಕೈವಾಡ ಶಂಕೆ: ಬಂಟರ ಸಂಘದ ಅಧ್ಯಕ್ಷ ಡಿ. ಚಂದ್ರಹಾಸ್ ರೈ ಮಾತನಾಡಿ, ಅಽಕಾರಿಗಳು ಸೇರಿದಂತೆ ಎಲ್ಲರಿಗೂ ಕಾನೂನು ಒಂದೇ. ಎಸಿಪಿ ಮಂಜುನಾಥ್ ಅವರು ರಾಜೇಶ್ ಶೆಟ್ಟಿಯವರನ್ನು ಪ್ರಾಣಿಯಂತೆ ಹಿಂಸೆ ನೀಡಿದ್ದಾರೆ. ಆದರೆ, ತಪ್ಪು ಮಾಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ಅಂಶವನ್ನು ಪರಿಗಣಿಸಿದರೆ ಘಟನೆ ಹಿಂದೆ ರಾಜಕೀಯ ಶಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದರು.
ತಪ್ಪಿತಸ್ಥ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಂಟರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಆರ್.ಟಿ. ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುವುದಾಗಿಯೂ ಅವರು ಎಚ್ಚರಿಸಿದರು.
ಸಂಘದ ಗೌರವ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಖಜಾಂಚಿ ಆನಂದರಾಮ್ ಶೆಟ್ಟಿ ಹಾಜರಿದ್ದರು.
