Asianet Suvarna News Asianet Suvarna News

ನವೆಂಬರ್‌ ವೇಳೆಗೆ ರೈತರಿಗೆ ರಿಲೀಫ್ : ಸಿಎಂ

ಸಾಲದ ಮನ್ನಾದ ಬಗ್ಗೆ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಹಂತ ಹಂತವಾಗಿ ರೈತರ ಎಲ್ಲಾ ಸಾಲವನ್ನೂ ಮನ್ನಾ ಮಾಡುತ್ತೇವೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. 

Before November Farmers Get Loan Waiver Letter Says HD Kumaraswamy
Author
Bengaluru, First Published Oct 27, 2018, 9:26 AM IST

ಮಂಡ್ಯ :  ಸಾಲಮನ್ನಾಕ್ಕಾಗಿ ಸರ್ಕಾರ ದೇವಸ್ಥಾನದ ಹುಂಡಿಗೆ ಕೈ ಹಾಕಿದೆ, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತೀವ್ರ ಕಿಡಿಕಾರಿದ್ದಾರೆ. ಬಿಎಸ್‌ವೈ ಹೇಳಿಕೆ ಬಾಲಿಶವಾಗಿದ್ದು, ಮುಂದಿನ ತಿಂಗಳಲ್ಲಿ ರೈತರಿಗೆ ಸಾಲಮನ್ನಾದ ಋುಣಮುಕ್ತ ಪತ್ರ ತಲುಪಲಿದೆ ಎಂದು ಇದೇ ವೇಳೆ ಘೋಷಿಸಿದ್ದಾರೆ.

ಮಂಡ್ಯ, ಮಳವಳ್ಳಿ, ಮದ್ದೂರು ಪಟ್ಟಣದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ಕುಮಾರಸ್ವಾಮಿ, ಯಡಿಯೂರಪ್ಪನವರಿಗೆ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವುದು ರೂಢಿಗತವಾಗಿದ್ದು, ಅವುಗಳನ್ನೆಲ್ಲಾ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ವ್ಯಂಗ್ಯವಾಡಿದರು.

ಸಮ್ಮಿಶ್ರ ಸರ್ಕಾರ ಯಾವ ದೇವಾಲಯದ ಹಣವನ್ನು ಯಾವ ಕಾರ್ಯಗಳಿಗೆ ಬಳಕೆ ಮಾಡಿಕೊಂಡಿದೆ ಎಂಬುದನ್ನು ಯಡಿಯೂರಪ್ಪ ಸಾಕ್ಷ್ಯ ಸಹಿತ ಸಾಬೀತುಪಡಿಸಲಿ. ಅದನ್ನು ಬಿಟ್ಟು ವಿನಾಕಾರಣ ಹೇಳಿಕೆ ನೀಡುವುದನ್ನು ಕೈಬಿಡಲಿ. ಇಂತಹ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ಆತಂಕ ಬೇಡ: ಸಾಲದ ಮನ್ನಾದ ಬಗ್ಗೆ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಹಂತ ಹಂತವಾಗಿ ರೈತರ ಎಲ್ಲಾ ಸಾಲವನ್ನೂ ಮನ್ನಾ ಮಾಡುತ್ತೇವೆ. ನವೆಂಬರ್‌ ತಿಂಗಳಲ್ಲಿ ಎಲ್ಲಾ ಜಿಲ್ಲೆಗಳ ಹತ್ತು ಲಕ್ಷ ರೈತರನ್ನು ಕರೆಸಿ ಸಂಪೂರ್ಣ ಸಾಲ ಮನ್ನಾದ ಬಗ್ಗೆ ಘೋಷಣೆ ಮಾಡುತ್ತೇನೆ. ನನ್ನ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ವ್ಯಂಗ್ಯ ಮಾಡುತ್ತಿರುವವರ ಬಗ್ಗೆ ಧೃತಿಗೆಡುವುದಿಲ್ಲ ಎಂದರು.

ಏತನ್ಮಧ್ಯೆ, ಋುಣಮುಕ್ತ ಕಾಯ್ದೆ ಅನುಷ್ಠಾನ ಜಾರಿಗೆ ತರಲು ರಾಷ್ಟ್ರಪತಿಯವರ ಸಹಿಗೆ ಹೋಗಿದೆ. ಧನಿಕರು ಸಾಲ ನೀಡಿ ಬಡ್ಡಿ, ಚಕ್ರಬಡ್ಡಿ ಹಾಕಿ ಸಾಲದ ಶೂಲದಲ್ಲಿ ಸಿಲುಕಿರುವ ಬಡವರನ್ನು ರಕ್ಷಿಸಲು ಮುಂದಿನ 15 ದಿನಗಳ ಋುಣಮುಕ್ತ ಕಾಯ್ದೆಯನ್ನು ಕೂಡ ಘೋಷಣೆ ಮಾಡಲು ಸಿದ್ಧತೆ ಮಾಡಲಾಗಿದೆ ಎಂದರು.

Follow Us:
Download App:
  • android
  • ios