ನವದೆಹಲಿ: ಉಭಯ ರಾಷ್ಟ್ರಗಳ ನಡುವೆ ಶಾಂತಿ ಮರು ಸ್ಥಾಪಿಸುವ ನಿಟ್ಟಿನಲ್ಲಿ ತಾವು ವಶಕ್ಕೆ ಪಡೆದ ಭಾರತದ ವಾಯು ಪಡೆ ಪೈಲಟ್‌ ಅಭಿನಂದನ್‌ ಅವರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಪಾಕಿಸ್ತಾನ, ಮತ್ತೆ ತನ್ನ ನೀಚ ಕೃತ್ಯದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿಗೆ ಗುರಿಯಾಗಿದೆ. ಬಿಡುಗಡೆಗೂ ಮುನ್ನ ಪಾಕ್‌ ಸೇನೆ ಅಭಿಯ ತಿರುಚಿದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಅವರು ಪಾಕ್‌ ಸೇನೆಯನ್ನು ಹೊಗಳಿದ ಮತ್ತು ಭಾರತೀಯ ಮಾಧ್ಯಮಗಳನ್ನು ತೆಗಳುವ ರೀತಿಯಲ್ಲಿ ತೋರಿಸಲಾಗಿದೆ.

ವಿಡಿಯೋದಲ್ಲಿ ಏನಿದೆ?:

‘ನನ್ನ ಹೆಸರು ವಿಂಗ್‌ ಕಮಾಂಡರ್‌ ಅಭಿನಂದನ್‌. ನಾನು ಭಾರತೀಯ ವಾಯು ಸೇನೆಯಲ್ಲಿ ಯುದ್ಧ ವಿಮಾನದ ಪೈಲಟ್‌ ಆಗಿದ್ದೇನೆ. ನಾನು ನನ್ನ ಗುರಿಯನ್ನು ಬೆನ್ನಟ್ಟಿ ಹೋಗುವಾಗ ನೀವು(ಪಾಕಿಸ್ತಾನ) ನನ್ನ ವಿಮಾನವನ್ನು ಹೊಡೆದುರುಳಿಸಿದ್ದಿರಿ. ಈ ವೇಳೆ ವಿಮಾನ ಪತನಗೊಂಡಿದ್ದು, ವಿಮಾನದಿಂದ ನಾನು ಹೊರಜಿಗಿಯಬೇಕಾಯಿತು. ನಾನು ವಿಮಾನದಿಂದ ಹೊರಜಿಗಿದಾಗನನ್ನ ಬಳಿ ಪ್ಯಾರಾಶೂಟ್‌ ಮತ್ತು ಕೈಯಲ್ಲಿ ಗನ್‌ ಮಾತ್ರವೇ ಇತ್ತು. ನಾನು ಕೆಳಕ್ಕೆ ಇಳಿದಾಗ, ಹಲವಾರು ಜನರು ನನ್ನನ್ನು ಸುತ್ತುವರಿದರು. ಈ ಸಂದರ್ಭದಲ್ಲಿ ಪ್ರಾಣ ಉಳಿಸಿಕೊಳ್ಳಲು ಪಿಸ್ತೂಲ್‌ ಬಿಸಾಡಿ, ಓಡಿ ಹೋಗುವುದೊಂದೇ ನನಗೆ ಉಳಿದ ಮಾರ್ಗವಾಗಿತ್ತು,’

‘ಈ ವೇಳೆ ಪಾಕಿಸ್ತಾನ ಜನರು ಭಾರೀ ಕೋಪದಲ್ಲಿ ನನ್ನನ್ನು ಬೆನ್ನಟ್ಟಿದ್ದರು. ಈ ವೇಳೆ ಪಾಕಿಸ್ತಾನದ ಇಬ್ಬರು ಯೋಧರು, ಅಲ್ಲಿಗೆ ಬಂದು ನನ್ನನ್ನು ಉದ್ರಿಕ್ತ ಜನರಿಂದ ರಕ್ಷಣೆ ಮಾಡಿದರು. ಅಲ್ಲದೆ, ಜನರಿಂದ ನನಗೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ಆ ನಂತರ ನನ್ನನ್ನು ಪಾಕ್‌ ಸೇನಾ ಘಟಕಕ್ಕೆ ಕರೆದೊಯ್ಯಲಾಯಿತು. ಅಲ್ಲಿ ನನಗೆ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದರು. ಪಾಕಿಸ್ತಾನ ಸೇನೆ ಸೇವೆ ವಿಚಾರದಲ್ಲಿ ಹೆಚ್ಚು ಕಾರ್ಯಕ್ಷಮತವಾಗಿದೆ. ಅದರಲ್ಲಿ ನಾನು ಶಾಂತಿ-ನೆಮ್ಮದಿ ಕಂಡಿದ್ದೇನೆ. ಪಾಕಿಸ್ತಾನ ಸೇನೆಯ ವೈಖರಿಯಿಂದ ನಾನು ಪ್ರಭಾವಿತನಾಗಿದ್ದೇನೆ. ಆದರೆ, ಭಾರತದ ಮಾಧ್ಯಮಗಳು ಪ್ರತೀ ಬಾರಿಯೂ ಸಣ್ಣ ವಿಚಾರವನ್ನು ದೊಡ್ಡದಾಗಿ ಬಿಂಬಿಸುತ್ತವೆ. ಇದಕ್ಕಾಗಿ ನಾನು ವಿಷಾದಿಸುತ್ತೇನೆ. ಪ್ರತಿ ಸಣ್ಣ ವಿಚಾರದ ಮೂಲಕ ಜನರ ದಿಕ್ಕು ತಪ್ಪಿಸಲಾಗಿದೆ,’ ಎಂದು ಅಭಿ ವಿಡಿಯೋದಲ್ಲಿ ಹೇಳಿದ್ದಾರೆ.

ಈ ಹಿಂದೆ ಬಿಡುಗಡೆ ಮಾಡಿದ 3 ವಿಡಿಯೋಗಳಂತೆ ಈ ವಿಡಿಯೋ ಕೂಡಾ ಒತ್ತಡ ಹೇರಿ ಅಭಿನಂದನ್‌ ಬಾಯಲ್ಲಿ ಸುಳ್ಳು ಹೇಳಿಸಲಾಗಿದೆ ಎಂದು ಖಚಿತವಾಗಿದೆ.