ಬೆಂಗಳೂರು[ಏ.25]: ಡಾ.ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಅವರ ಸ್ಮಾರಕಗಳು ಪೂರ್ಣಗೊಳ್ಳಲಿ ಎಂದು ನಟಿ ಸುಮಲತಾ ಅಂಬರೀಶ್ ಹೇಳಿದ್ದಾರೆ

ಅಂಬರೀಶ್ ಅವರ ಐದನೇ ತಿಂಗಳ ಪುಣ್ಯತಿಥಿ ಪ್ರಯುಕ್ತ ಬುಧವಾರ ಬೆಳಗ್ಗೆ ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಂಬರೀಶ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಾಜ್ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪುಣ್ಯ ತಿಥಿ ಕಾರ್ಯಕ್ರಮದ ಸಂದರ್ಭದಲ್ಲಿ ಅಂಬರೀಶ್ ಇಲ್ಲದ ದಿನಗಳನ್ನು ನೆನಪಿಸಿಕೊಂಡ ಅವರು, ‘ಅಂಬಿ ನಮ್ಮ ಜತೆಗಿಲ್ಲ ಎನ್ನುವ ಸತ್ಯವನ್ನು ಮನಸ್ಸು ಒಪ್ಪುತ್ತಿಲ್ಲ. ಐದು ತಿಂಗಳು ಕಳೆದರೂ ಅವರಿಲ್ಲ ಎನ್ನಲಾಗುತ್ತಿಲ್ಲ. ಅವರ ಪ್ರೀತಿ, ಮಾತು, ನೆನಪು ಸಾಕಷ್ಟಿವೆ’ ಎಂದು ಭಾವುಕರಾದರು.

ಇದೇ ವೇಳೆ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಇದೇ ಮೊದಲು ರಾಜ್ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅಣ್ಣಾವ್ರ ಜತೆ ಅಂಬಿ ಒಳ್ಳೆ ಯ ಒಡನಾಟ ಹೊಂದಿದ್ದರು. ಅಂಬಿ ಸ್ಮಾರಕ ಕ್ಕಿಂತ ಮೊದಲು ಡಾ.ರಾಜ್, ವಿಷ್ಣು ವರ್ಧನ್ ಸ್ಮಾರಕಗಳು ಪೂರ್ಣಗೊಳ್ಳಲಿ ಎಂದರು

ಬೆಟ್ಟಿಂಗ್‌ಗೆ ಕೈ ಹಾಕಬೇಡಿ!: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಂಬರೀಶ್ ಅಭಿಮಾನಿಗಳು ಬೆಟ್ಟಿಂಗ್‌ಗೆ ಕೈಹಾಕಬಾರದು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯೂ ಆಗಿರುವ ಸುಮಲತಾ ಅಂಬರೀಶ್ ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ವಿಚಾರದಲ್ಲಿ ಬೆಟ್ಟಿಂಗ್ ಕಟ್ಟುವುದು ಸರಿಯಲ್ಲ. ನಾನು ಅದನ್ನು ವಿರೋಧಿಸುತ್ತೇನೆ. ಚುನಾವಣೆಯ ಸೋಲು-ಗೆಲುವಿನ ವಿಚಾರದಲ್ಲಿ ಅಂಬರೀಶ್ ಅಭಿಮಾನಿಗಳು ಬೆಟ್ಟಿಂಗ್ ಕಟ್ಟಿ ನಷ್ಟ ಮಾಡಿಕೊಳ್ಳುವುದು ನನಗೆ ಇಷ್ಟವಿಲ್ಲ ಎಂದರು.