ನವದೆಹಲಿ[ಆ.22]:  ಬಿಜೆಪಿ ಸೇರ ಬಯಸುವ ಇತರೆ ಪಕ್ಷಗಳ ನಾಯಕರ ಪೂರ್ವಾಪರ ಪರಿಶೀಲಿಸಿಯೇ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕಟ್ಟಪ್ಪಣೆ ಹೊರಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇತರೆ ಪಕ್ಷಗಳ ಹಲವು ನಾಯಕರು ಬಿಜೆಪಿಗೆ ಬರುತ್ತಿದ್ದು, ಅರ್ಹರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಶಾ ಈ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಕಾರ್ಯದರ್ಶಿ ಅನಿಲ್‌ ಜೈನ್‌, ಸದಸ್ಯತ್ವ ಕೋರಿ ನಮಗೆ ಹಲವಾರು ಅರ್ಜಿಗಳು ಬರುತ್ತಿವೆ. ಹಾಗಾಗಿ ಬಿಜೆಪಿ ಸೇರ ಬಯಸುವ ಎಲ್ಲಾ ಇತರೆ ಪಕ್ಷದ ನಾಯಕರನ್ನು ಕೂಲಂಕಷವಾಗಿ ಪರೀಕ್ಷೆ ಮಾಡಬೇಕು ಎಂದು ಅಮಿತ್‌ ಶಾ ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ನಿರೀಕ್ಷೆಗೂ ಮೀರಿದ ಸಾಧನೆ: ಬಿಜೆಪಿಗೆ 3.8 ಕೋಟಿ ಹೊಸ ಸದಸ್ಯರು!

2019ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಬೇರೆ ಬೇರೆ ಪಕ್ಷಗಳ ಹಲವು ನಾಯಕರು ಬಿಜೆಪಿ ಪರ ವಾಲುತ್ತಿದ್ದು, ರಾಜ್ಯಸಭೆಯೊಂದರಲ್ಲೇ 4 ಟಿಡಿಪಿ ಹಾಗೂ ಕಾಂಗ್ರೆಸ್‌ ಮತ್ತು ಬಿಜೆಪಿಯ ತಲಾ ಒಬ್ಬರು ಸಂಸದರು ಬಿಜೆಪಿ ಸೇರಿದ್ದರು.

ಬಿಜೆಪಿಗೆ ಹೊಸ ಸದಸ್ಯರ ಹೊಳೆ

ಬಿಜೆಪಿ ನೀಡಿರುವ ಮಾಹಿತಿಯ ಪ್ರಕಾರ 3.78 ಕೋಟಿ ಹೊಸ ಸದಸ್ಯತ್ವ ನೋಂದಣಿ ಮಾಡಿಕೊಳ್ಳಲಾಗಿದೆ. ಅಭಿಯಾನದಲ್ಲಿ 2.2 ಕೋಟಿ ಹೊಸ ಸದಸ್ಯರ ನೋಂದಣಿಯ ಗುರಿ ಹೊತ್ತಿದ್ದ ಬಿಜೆಪಿ ನಿರೀಕ್ಷೆಗಿಂತ 1.6 ಕೋಟಿ ಹೆಚ್ಚು ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಕಳೆದ ಒಂದೂವರೆ ತಿಂಗಳ ಕಾಲ ದೇಶಾದ್ಯಂತ ನಡೆದ ಸದಸ್ಯತ್ವ ಅಭಿಯಾನ ಮಂಗಳವಾರ ಕೊನೆಗೊಂಡಿದೆ.