ಬೆಂಗಳೂರು[ಜು.30]: ಹಿಂದೆ ನಿಮ್ಮವರೇ ಷಡ್ಯಂತ್ರ ರೂಪಿಸಿ ನಿಮ್ಮನ್ನು ಅಧಿಕಾರದಿಂದ ಇಳಿಸಿದ್ದರು. ಛಲದಂಕ ಮಲ್ಲನಂತೆ ಮತ್ತೆ ನೀವು ಮುಖ್ಯಮಂತ್ರಿಯಾಗುವ ಗುರಿ ಸಾಧಿಸಿದ್ದೀರಿ. ಈ ಬಾರಿಯಾದರೂ ತಮ್ಮ ಅಕ್ಕಪಕ್ಕ ಇರುವವರ ಬಗ್ಗೆ ಹುಷಾರಾಗಿರಿ...

ಸೋಮವಾರ ವಿಧಾನ ಪರಿಷತ್‌ ಕಲಾಪದ ವೇಳೆ ಕಾಂಗ್ರೆಸ್‌ ನಾಯಕ ಎಸ್‌.ಆರ್‌.ಪಾಟೀಲ್‌ ಅವರು ಯಡಿಯೂರಪ್ಪ ಅವರಿಗೆ ನೀಡಿದ ಸಲಹೆ ರೂಪದ ಟಾಂಗ್‌ ಇದು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರ್ನಾಟಕ ಧನವಿನಿಯೋಗ ವಿಧೇಯಕ 2019ಅನ್ನು ಮಂಡಿಸಿ ಅನುಮೋದನೆಗಾಗಿ ಕೋರಿದಾಗ ಮಾತನಾಡಿದ ಎಸ್‌.ಆರ್‌.ಪಾಟೀಲ್‌, ತಾವು ಮಂಡಿಸಿರುವ ಧನವಿನಿಯೋಗ ವಿಧೇಯಕ ಮೈತ್ರಿ ಸರ್ಕಾರದ ಕೂಸು. ನಮ್ಮ ಸಂಖ್ಯಾಬಲ ಹೆಚ್ಚಿದ್ದರೂ ನಾವು ಮೇಲ್ಮನೆಯಲ್ಲಿ ಈ ವಿಧೇಯಕ ಅನುಮೋದನೆಗೆ ಅಡ್ಡಿ ಮಾಡುವುದಿಲ್ಲ. ಆದರೆ, ಕಳೆದ ಬಾರಿಯಂತೆ ನಿಮ್ಮವರಿಂದಲೇ ನೀವು ಅಧಿಕಾರ ಕಳೆದುಕೊಂಡಿದ್ದೀರಿ. ಈ ಬಾರಿ ಸ್ವಲ್ಪ ಹುಷಾರಾಗಿರಿ ಎಂದರು. ಇದಕ್ಕೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಗಮಿಸುತ್ತಿದ್ದಂತೆ ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ, ಐವನ್‌ ಡಿಸೋಜಾ, ನಟಿ ಜಯಮಾಲಾ, ಎಚ್‌.ಎಂ.ರೇವಣ್ಣ, ಕೆ.ಬಿ.ಕೋಳಿವಾಡ, ಜೆಡಿಎಸ್‌ನ ಬಸವರಾಜ ಹೊರಟ್ಟಿ, ಶ್ರೀಕಂಠೇಗೌಡ ಸೇರಿದಂತೆ ಹಲವು ಸದಸ್ಯರು ಹಸ್ತಲಾಘವ ನೀಡಿ ಅಭಿನಂದನೆ ತಿಳಿಸಿದರು.