ಬೆಂಗಳೂರು :  ಪ್ರತಿ ವರ್ಷವೂ ಬೇಸಿಗೆ ತೀವ್ರಗೊಂಡಿತೆಂದರೆ ಮಕ್ಕಳಿಂದ ವೃದ್ಧರವರೆಗೂ ಸಕಲರನ್ನು ಬಾಧಿಸುವ ಸಾಂಕ್ರಾಮಿಕ ರೋಗಗಳು ಪ್ರತ್ಯಕ್ಷವಾಗಿ ಬಿಡುತ್ತವೆ. ವಾತಾವರಣ ಶುಷ್ಕತೆಯಿಂದ ಕೂಡಿರುವುದರಿಂದ ಬ್ಯಾಕ್ಟೀರಿಯಾ, ವೈರಸ್‌ಗಳು ತೀವ್ರವಾಗಿ ಹರಡುತ್ತವೆ. ಹೀಗಾಗಿ ಸರದಿ ಸಾಲಿನಲ್ಲಿ ಕಾಯುತ್ತಿರುವ ಕಾಯಿಲೆಗಳು ಮೈಯೇರುವ ಮುನ್ನ ಸೂಕ್ತ ಎಚ್ಚರ ವಹಿಸುವುದು ಅಗತ್ಯ.

ಹೌದು, ರಾಜ್ಯಾದ್ಯಂತ ತೀವ್ರ ಬಿಸಿಲಿನಿಂದಾಗಿ ಸಾಂಕ್ರಾಮಿಕ ಕಾಯಿಲೆಗಳು ಹಾಗೂ ಬಿಸಿಲಿನಿಂದ ಉಂಟಾಗುವ ಕಾಯಿಲೆಗಳ ಪ್ರಮಾಣ ತೀವ್ರಗೊಳ್ಳುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತರೂ ಸುತ್ತೋಲೆ ಹೊರಡಿಸಿದ್ದು ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

ರಾಜ್ಯಾದ್ಯಂತ ಕರಳುಬೇನೆ, ನಿರ್ಜಲೀಕರಣ, ವಾಂತಿ-ಭೇದಿ, ಕಣ್ಣಿನ ತೊಂದರೆ, ಮಕ್ಕಳನ್ನು ಬಾಧಿಸುವ ಚಿಕನ್‌ ಫಾಕ್ಸ್‌, ಟೈಫಾಯ್ಡ್‌ ಜ್ವರ, ಬಿಸಿಲಿನಿಂದ ತಲೆ ಸುತ್ತು, ಸನ್‌ಸ್ಟೊ್ರೕಕ್‌, ಮೈಗ್ರೇನ್‌, ಮೂಗಿನಲ್ಲಿ ರಕ್ತ ಸುರಿಯುವುದು, ಅತಿಯಾದ ಸೂರ್ಯ ಕಿರಣಗಳಿಂದ ಚರ್ಮ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ.

ಬೇಸಿಗೆ ಕಾಲದಲ್ಲಿ ಸಕ್ರಿಯವಾಗುವ ಸಾಲ್ಮೊನಲ್ಲಾ ಟೈಸಿ ಆ್ಯಂಡ್‌ ಪ್ಯಾರಾಟೈಸಿ ಎ-ಬಿ ಬ್ಯಾಕ್ಟೀರಿಯಾದಿಂದ ಟೈಫಾಯ್ಡ್‌ ಬರುತ್ತದೆ. ವ್ಯಾರಿಸೆಲ್ಲಾ ಝಾಸ್ಟರ್‌ ವೈರಸ್‌ನಿಂದ ಚಿಕನ್‌ಫಾಕ್ಸ್‌ (ಅಮ್ಮ), ಹೆಪಟೈಟಿಸ್‌ ಎ ಎಂಬ ವೈರಸ್‌ನಿಂದ ಜಾಂಡೀಸ್‌ ಕಾಯಿಲೆ ಬರುತ್ತದೆ. ಎಂಟೆರೋ ವೈರಸ್‌ನಿಂದ ಮಕ್ಕಳಲ್ಲಿ ವಾಂತಿ ಭೇದಿ ಉಂಟಾಗುತ್ತದೆ.

ಇವೆಲ್ಲವೂ ಕಲುಷಿತ ನೀರಿನ ಸೇವನೆ, ವಾತಾವರಣದಲ್ಲಿ ಉಂಟಾಗುವ ಶುಷ್ಕತೆಯಿಂದ ಬ್ಯಾಕ್ಟೀರಿಯಾ ಹಾವಳಿ ಹೆಚ್ಚಾಗಿ ಕಾಯಿಲೆ ಹರಡಲು ಕಾರಣವಾಗುತ್ತದೆ. ಜತೆಗೆ ಕಣ್ಣು ಕೆಂಪಾಗುವುದು, ತುರಿಕೆ, ಕಣ್ಣಲ್ಲಿ ನೀರು, ಮದ್ರಾಸ್‌ ಕಣ್ಣಿನಂತಹ ಸಮಸ್ಯೆಗಳೂ ತೀವ್ರಗೊಳ್ಳುತ್ತಿವೆ.

ಮನೆ ಮದ್ದು ಬಗ್ಗೆ ಗಮನ ನೀಡಿ:

ಬೆವರು ರೂಪದಲ್ಲಿ ದೇಹದ ನೀರು ಹೊರ ಹೋಗುವುದರಿಂದ ದೇಹದಲ್ಲಿ ತೇವಾಂಶ ಕಡಿಮೆಯಾಗುತ್ತದೆ. ದೇಹ ನಿರ್ಜಲೀಕರಣಗೊಳ್ಳುವುದರಿಂದ ಹಲವು ಸಮಸ್ಯೆ ಸೃಷ್ಟಿಯಾಗುತ್ತದೆ. ಹೀಗಾಗಿ ನೀರಿನ ಜತೆಗೆ, ದೇಹಕ್ಕೆ ಶಕ್ತಿ, ಚೈತನ್ಯ ತುಂಬುವಂತಹ ಹಣ್ಣಿನ ರಸ, ಪಾನೀಯ ಸೇವನೆ ಮೂಲಕ ನೀರಿನಂಶ ಹೆಚ್ಚಿಸಿಕೊಳ್ಳಬೇಕು.

ಬೇಸಿಗೆಗೆ ಕಾಟನ್‌ ಉಡುಪು ಧರಿಸುವುದು, ಬಿಸಿಲಿಗೆ ಹೋಗುವಾಗ ತಂಪು ಕನ್ನಡಕ, ಛತ್ರಿ ಬಳಕೆ, ಅಗತ್ಯ ಪ್ರಮಾಣದ ನೀರು ಕೊಂಡೊಯ್ಯುವಂತಹ ಸಾಮಾನ್ಯ ಕ್ರಮ ಪಾಲಿಸಬೇಕು. ರಸ್ತೆ ಬೀದಿ ಬದಿಗಳಲ್ಲಿ ಮಾರುವ ಕತ್ತರಿಸಿದ ಹಣ್ಣು ಮತ್ತು ತೆರೆದಿಟ್ಟಆಹಾರ ಪದಾರ್ಥ ಸೇವಿಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.

ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಎಚ್ಚರ:

ಬೇಸಿಗೆ ಜತೆಗೆ ಪರೀಕ್ಷಾ ಸಮಯವೂ ಆಗಿರುವುದರಿಂದ ವಿಶೇಷವಾಗಿ ವಿದ್ಯಾರ್ಥಿಗಳು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು. ಪರೀಕ್ಷಾ ಸಿದ್ಧತೆಯ ಜ್ಞಾನದಲ್ಲಿ ಕೆಲವ ವಿದ್ಯಾರ್ಥಿಗಳು ಊಟ-ತಿಂಡಿ ಸೂಕ್ತ ವೇಳೆಗೆ ಮಾಡದೆ ನಿದ್ದೆಗೆಡಲು ಟೀ ನೆಚ್ಚಿಕೊಳ್ಳುತ್ತಾರೆ. ಊಟ ಮಾಡದಿರುವುದರಿಂದ ಮೆದುಳಿಗೆ ಗ್ಲೂಕೋಸ್‌ ಪೂರೈಕೆಯಾಗದೆ ಮೈಗ್ರೇನ್‌ ಸಮಸ್ಯೆ ಉಂಟಾಗಬಹುದು. ಹೀಗಾಗಿ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಊಟ ಮಾಡಬೇಕು.

ಆರೋಗ್ಯ ಇಲಾಖೆ ಸುತ್ತೋಲೆ:

ಬೇಸಿಗೆಯಿಂದ ಕಾಲರಾ, ಕರಳುಬೇನೆ, ವಾಂತಿ-ಬೇಧಿ, ಅತಿಸಾರ ಬೇಧಿ, ಕಾಮಾಲೆಯಂತಹ ಕಾಯಿಲೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿ ಅಗತ್ಯ ಕ್ರಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಾರ್ವಜನಿಕರು ಕುಡಿಯುವ ನೀರನ್ನು ಶುದ್ಧೀಕರಿಸಲು ಹಾಲೋಜನ್‌ ಮಾತ್ರೆಗಳನ್ನು ವಿತರಿಸಬೇಕು. ವೈಯಕ್ತಿಕ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಬಳಕೆ, ಆಹಾರದ ಸಂರಕ್ಷಣೆ, ಪರಿಸರ ನೈರ್ಮಲ್ಯದ ನಿರ್ವಹಣೆ ಬಗ್ಗೆ ಅರಿವು ಮೂಡಿಸಬೇಕು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳಿಗೂ ಮುನ್ನೆಚ್ಚರಿಕೆ ವಹಿಸಲು ತಿಳಿಸಬೇಕು.

ಎಲ್ಲಾ ಆಸ್ಪತ್ರೆಯಲ್ಲೂ ಸೂಕ್ತ ಚಿಕಿತ್ಸೆಗೆ ಅಗತ್ಯವಾದ ಜೀವ ರಕ್ಷಕ ಔಷಧ, ಕ್ರಿಮಿ-ಕೀಟ ನಾಶ ಲಭ್ಯವಿರಬೇಕು. ಹೆಚ್ಚಿನ ಅವಶ್ಯಕತೆ ಇದ್ದರೆ ಔಷಧಗಳನ್ನು ಕರ್ನಾಟಕ ರಾಜ್ಯ ಡ್ರಗ್ಸ್‌ ಆ್ಯಂಡ್‌ ಲಾಜಿಸ್ಟಿಕ್‌ ವೇರ್‌ ಹೌಸ್‌ ಸೊಸೈಟಿಯಿಂದ ಖರೀದಿಸಬೇಕು. ನಿರ್ಜಲೀಕರಣ ಸಮಸ್ಯೆ ಹಾಗೂ ನೀರಿನಿಂದ ಉಂಟಾಗುವ ಕಾಯಿಲೆಗಳ ನಿರ್ಮೂಲನೆಗಾಗಿ ಓಆರ್‌ಎಸ್‌ ಹಾಗೂ ಹಾಲೋಜೋನ್‌ ಮಾತ್ರೆಗಳು ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತರ ಬಳಿ ಸಾಕಷ್ಟುಪ್ರಮಾಣದಲ್ಲಿ ಲಭ್ಯವಿರುವಂತೆ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ.

ಕ್ಷಿಪ್ರ ಪ್ರತಿಕ್ರಿಯಾ ತಂಡ ರಚನೆ

ಬೇಸಿಗೆಯಿಂದಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡಿದಾಗ ಸೂಕ್ತ ಕ್ರಮಕ್ಕೆ ಪ್ರತಿ ಜಿಲ್ಲೆಯಲ್ಲೂ ಕ್ಷಿಪ್ರ ಪ್ರತಿಕ್ರಿಯಾ ತಂಡವನ್ನು ರಚಿಸಬೇಕು.

ತಂಡವನ್ನು ತಕ್ಷಣ ಕಾಯಿಲೆ ಪೀಡಿತ ಸ್ಥಳಕ್ಕೆ ಕಳುಹಿಸಿ, ಗ್ರಾಮದಲ್ಲಿಯೇ ಒಂದು ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಬೇಕು. ರೋಗವು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ದಿನದ 24 ಗಂಟೆಯೂ ನಿಗಾವಣೆ ಮತ್ತು ವೈದ್ಯಕೀಯ ಸೇವಾಸೌಲಭ್ಯ ನೀಡಬೇಕು. ಗಂಭೀರ ಸ್ವರೂಪದ ರೋಗಿಗಳಿಗೆ ಆ್ಯಂಬುಲೆನ್ಸ್‌, ರೋಗಪೀಡಿತ ಪ್ರದೇಶದಲ್ಲಿ 10 ದಿನದವರೆಗೆ ಸಮೀಕ್ಷೆ ನಡೆಸಬೇಕು ಎಂದು ಆದೇಶಿಸಿರುವುದಾಗಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ವಿಭಾಗದ ಜಂಟಿ ನಿರ್ದೇಶಕರಾದ ಸಜ್ಜನ್‌ಶೆಟ್ಟಿಹೇಳಿದ್ದಾರೆ.