ಬಿಟಿಎಂ ಲೇಔಟ್'ನ ಇಡಬ್ಲ್ಯೂಎಸ್ ಲೇಔಟ್'ನಲ್ಲಿರುವ ಸೂರಿ, ಎಸ್ಸೆಸ್ಸೆಲ್ಸಿಯಲ್ಲಿ 20ನೇ ರ್ಯಾಂಕ್ ಪಡೆದಿದ್ದಾನಂತೆ. ಡಿಪ್ಲೊಮಾ, ಎಂಜಿನಿಯರಿಂಗ್, ಎಂಸಿಎಸ್ ಇತ್ಯಾದಿ ಶಿಕ್ಷಣ ಪಡೆದಿರುವೆ ಎಂದು ಹೇಳಿಕೊಳ್ಳುತ್ತಾನೆ. ಈತನ ತಂದೆ ಬೆಂಗಳೂರಿನವರಾದರೆ, ಈತನ ತಾಯಿ ಹಾಸನದ ಚನ್ನರಾಯಪ್ಪಟಣದವರು. ಏಳೆಂಟು ಜನರಿರುವ ಈತನ ಇಡೀ ಕುಟುಂಬವೇ ರಿಯಲ್ ಎಸ್ಟೇಟ್'ನಲ್ಲಿ ತೊಡಗಿಸಿಕೊಂಡಿದೆಯಂತೆ. ಆದರೆ, ಏನೇ ಆಗಲೀ ತಾನು ಎಲ್ಲವನ್ನೂ ಕಾನೂನು ಪ್ರಕಾರವಾಗಿ ಮಾಡುತ್ತಿದ್ದು, ಪ್ರತಿಯೊಂದಕ್ಕೂ ತೆರಿಗೆ ಕಟ್ಟುತ್ತಿರುವುದಾಗಿ ಆತ್ಮವಿಶ್ವಾಸದಿಂದ ಹೇಳುತ್ತಾನೆ.
ಬೆಂಗಳೂರು(ಆ. 08): ವರಮಹಾಲಕ್ಷ್ಮೀ ಹಬ್ಬದಂದಿನಿಂದ ವಾಟ್ಸಾಪ್'ನಲ್ಲಿ ಕೆಲ ಫೋಟೋಗಳು ವೈರಲ್ ಆಗಿ ಹರಿದಾಡುತ್ತಿವೆ. ಕಂತೆ ಕಂತೆ ಹಣದ ಮೇಲೆ ವರಲಕ್ಷ್ಮೀಯನ್ನಿಟ್ಟುಕೊಂಡು ಪೂಜೆ ಮಾಡುತ್ತಿರುವ ಕುಟುಂಬದ ಫೋಟೋವಿದು. ದೇವರ ಮುಂದೆ ಹಣ್ಣಿನ ನೈವೇದ್ಯದಂತೆ ಕೆಜಿಗಟ್ಟಲೆ ಚಿನ್ನವನ್ನಿಡಲಾಗಿತ್ತು. ಇವನ್ಯಾರಪ್ಪಾ ಲಕ್ಷ್ಮೀ ಪುತ್ರ ಎಂಬ ಕುತೂಹಲ ಪ್ರತಿಯೊಬ್ಬರದ್ದಾಗಿದೆ.
ಈ ಲಕ್ಷ್ಮೀಪುತ್ರನ ಗುರುತು ಪತ್ತೆಯಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರಿ ಹಾಗೂ ಬಿಡಿಎ ಬ್ರೋಕರ್ ಆಗಿರುವ ಸೂರಿ ಅಲಿಯಾಸ್ ಸೂರ್ಯನಾರಾಯಣ. ಕಾರ್ನರ್ ಸೂರಿ ಅಥವಾ ಕಟ್ಟಿಂಗ್ ಸೂರಿ ಎಂದೂ ಈತ ಫೇಮಸ್ ಅಂತೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಸೂರಿ, ತಾನು ಕಳೆದ 10 ವರ್ಷದಿಂದಲೂ ಹೀಗೆಯೇ ಪೂಜೆ ಮಾಡಿಕೊಂಡು ಬಂದಿದ್ದೇನೆ. ಇದು ತಪ್ಪು ಎಂದು ತನಗೆ ಅನಿಸಿಲ್ಲ. ತನ್ನ ಫೋಟೋಗಳು ಜನರಿಗೆ ತಪ್ಪು ಸಂದೇಶ ಕೊಡುತ್ತದೆಂದೂ ನಾನು ಭಾವಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.
ಅಂದಹಾಗೆ, ಈ ಫೋಟೋದಲ್ಲಿ ಕಾಣಿಸುವ ನೋಟುಗಳ ಮೊತ್ತ ಮತ್ತು ಒಡವೆಗಳು ಎಷ್ಟಿರಬಹುದೆಂಬ ಕುತೂಹಲ ನಿಮಗಿದ್ದಿರಬಹುದು. ಈತನೇ ಹೇಳುವ ಪ್ರಕಾರ ಅಲ್ಲಿ 83 ಲಕ್ಷ ನಗದು ಹಣ, 1 ಕಿಲೋ 120 ಗ್ರಾಂ ಚಿನ್ನವನ್ನು ಈತ ದೇವರ ಮುಂದಿಟ್ಟಿದ್ದಾನೆ.
ತಾನು ಬಿಡಿಎ ಸೈಟು ಖರೀದಿಸಿ ಮರುಮಾರಾಟ ಮಾಡುವ ಮೂಲಕ ಹಣ ಗಳಿಸುತ್ತಾ ಬಂದಿದ್ದೇನೆ ಎಂದು ಹೇಳುವ ಈತ ತನ್ನ ಬಳಿ 10-12 ಕೋಟಿ ಮೌಲ್ಯದಷ್ಟು ಆಸ್ತಿಪಾಸ್ತಿ ಇರಬಹುದು ಎಂದು ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾನೆ. ಈತ ಹೇಳುವ ಪ್ರಕಾರ, 2002ರಿಂದಲೂ ಬಿಡಿಎನಲ್ಲಿ ಬ್ರೋಕರ್ ಆಗಿರುವ ಈತ ಬಿಡಿಎಯಿಂದ ಸೈಟ್ ಅಲಾಟ್ ಮಾಡಿಸಿಕೊಂಡ ಜನರ ಬಳಿ ಹೋಗಿ ಮನವಿ ಮಾಡಿಕೊಂಡು ಖರೀದಿ ಮಾಡುತ್ತಾನೆ. ಆ ಬಳಿಕ ಅದರಲ್ಲಿ ಮನೆ ಅಥವಾ ಕಟ್ಟಡ ಕಟ್ಟಿ, ಅಥವಾ ಹಾಗೆಯೇ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾನೆ. ಆ ಮೂಲಕ ಹಣ ಸಂಪಾದಿಸುತ್ತಾನೆ.
ತಾನು ಲೈವ್ ಬ್ಯಾಂಡ್, ರೇಸಿಂಗ್ ಆಡಿ ಹಣ ಕಳೆದುಕೊಳ್ಳದೇ ನ್ಯಾಯಯುತವಾಗಿ ದುಡಿದು ಹಣ ಸಂಪಾದಿಸಿದ್ದೇ ತಪ್ಪಾ ಎಂದು ಸೂರಿ ಮಾಧ್ಯಮದವರನ್ನು ಕೇಳುತ್ತಾನೆ.