ಇರ್ಫಾನ್' ಪಠಾಣ್'ಗೆ ಶಾಕ್ ನೀಡಿದ ಬಿಸಿಸಿಐ: ನಿರಾಕ್ಷೇಪಣ ಪತ್ರ ರದ್ದು !

ಮುಂಬೈ(ಮೇ.21): ಭಾರತದ ಆಲ್ರೌಂಡರ್‌ ಇರ್ಫಾನ್‌ ಪಠಾಣ್‌ಗೆ 2017ರ ಬಹರೇನ್‌ ಕ್ರಿಕೆಟ್‌ ಹಬ್ಬ ಪ್ರದರ್ಶನ ಟಿ20 ಪಂದ್ಯದಲ್ಲಿ ಆಡಲು ನೀಡಿದ್ದ ನಿರಾಕ್ಷೇಪಣ ಪತ್ರವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆ ಘಳಿಗೆಯಲ್ಲಿ ಹಿಂಪಡೆದ ಘಟನೆ ಬೆಳಕಿಗೆ ಬಂದಿದೆ. ಪಂದ್ಯದಲ್ಲಿ ಭಾಗವಹಿಸಲೆಂದು ಪಠಾಣ್‌, ಬಹರೇನ್‌ಗೆ ತೆರಳಿದ್ದರು. ಅಷ್ಟೇ ಅಲ್ಲ, ಪತ್ರಿಕಾ ಗೋಷ್ಠಿಯಲ್ಲೂ ಪಾಲ್ಗೊಂಡಿದ್ದರು. ಆದರೆ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದಾಗ ಅನಿರ್ದಿಷ್ಟಕಾರಣಗಳನ್ನು ನೀಡಿ ಬಿಸಿಸಿಐ ಅವರಿಗೆ ಅನುಮತಿ ನಿರಾಕರಿಸಿದೆ. 
ಇರ್ಫಾನ್‌ ಪಠಾಣ್‌ ತಮ್ಮ ಹೆಸರಿನಲ್ಲಿ ರಚಿಸಲಾಗಿದ್ದ ಇರ್ಫಾನ್‌ ಫ್ಯಾಲ್ಕನ್ಸ್‌ ತಂಡವನ್ನು ಮಿಸ್ಬಾ ಉಲ್‌ ಹಕ್‌ ಈಗಲ್ಸ್‌ ತಂಡದ ವಿರುದ್ಧ ಮುನ್ನಡೆಸಬೇಕಿತ್ತು. ಪಠಾಣ್‌ ಆಡದ ಕಾರಣ, ವೆಸ್ಟ್‌ಇಂಡೀಸ್‌ನ ಬ್ಯಾಟ್ಸ್‌ಮನ್‌ ಮರ್ಲಾನ್‌ ಸ್ಯಾಮುಯಲ್ಸ್‌, ಫ್ಯಾಲ್ಕನ್ಸ್‌ ತಂಡಕ್ಕೆ ನಾಯಕರಾದರು.
ಬಿಸಿಸಿಐ ಈ ರೀತಿ ಮಾಡುತ್ತಿರುವುದು ಇದು ಮೊದಲೇನಲ್ಲ. ಇದೇ ವರ್ಷ ಫೆಬ್ರವರಿ ವೇಳೆ ಹಾಂಕಾಂಗ್‌ ಟಿ20 ಪಂದ್ಯಾವಳಿಯಲ್ಲಿ ಭಾಗವಹಿಸಲು ಇರ್ಫಾನ್‌ರ ಸಹೋದರ ಯೂಸುಫ್‌ ಪಠಾಣ್‌ಗೆ ನೀಡಿದ್ದ ನಿರಾಕ್ಷೇಪಣ ಪತ್ರವನ್ನು ಬಿಸಿಸಿಐ, ಕೊನೆ ಕ್ಷಣದಲ್ಲಿ ಹಿಂಪಡೆದಿತ್ತು.