ವಿಶ್ವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ​ಯನ್ನು ಮಾ.8ರಂದು ಬಿಬಿಎಂಪಿಯಲ್ಲಿ ವಿಶೇಷವಾಗಿ ಆಚರಿಸಲಾಗು​ವುದು ಎಂದು ಮೇಯರ್‌ ಜಿ.ಪದ್ಮಾವತಿ ತಿಳಿಸಿದ್ದಾರೆ.

ಬೆಂಗಳೂರು(ಮಾ.07): ವಿಶ್ವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ​ಯನ್ನು ಮಾ.8ರಂದು ಬಿಬಿಎಂಪಿಯಲ್ಲಿ ವಿಶೇಷವಾಗಿ ಆಚರಿಸಲಾಗು​ವುದು ಎಂದು ಮೇಯರ್‌ ಜಿ.ಪದ್ಮಾವತಿ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಬಿಬಿಎಂಪಿ ವ್ಯಾಪ್ತಿಯಲ್ಲಿ 102 ಮಹಿಳಾ ಸದಸ್ಯರಿದ್ದಾರೆ. ಅವರೆಲ್ಲರ ಒಗ್ಗಟ್ಟು ಪ್ರದರ್ಶನಕ್ಕೆ ಮಾ.8ರಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮ ಸಾಕ್ಷಿಯಾಗಲಿದೆ. ಮಹಿಳಾ ದಿನದ ಅಂಗವಾಗಿ ಬುಧವಾರ ಬೆಳಗ್ಗೆ ಸದಸ್ಯೆಯ​ರಿಂದ ಕೇಂದ್ರ ಕಚೇರಿ ಆವರಣದಲ್ಲಿ ಮಾನವ ಸರಪಳಿ ರಚಿಸಲಾಗುವುದು. ಜತೆಗೆ ಪಾಲಿಕೆ ಆವರಣದಲ್ಲಿ 50ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು ಮಹಿ​ಳೆಯರು ಮತ್ತು ಸ್ವಸಹಾಯ ಗಂಪು​ಗಳು, ಸಂಘ ಸಂಸ್ಥೆ​ಗಳು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಏರ್ಪ​ಪಡಿಲಾಗುವುದು ಎಂದರು.

ವಸ್ತು ಪ್ರದರ್ಶನವನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಉದ್ಘಾಟಿಸಲಿದ್ದು, ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಸೇರಿದಂತೆ ವಿವಿಧ ಗಣ್ಯರು ಆಗಮಿಸಲಿದ್ದಾರೆ. ಇದರೊಂದಿಗೆ ಮಹಿಳೆಯರು ಉದ್ದಿಮೆದಾರರಾಗುವ ಕುರಿತು, ಮಹಿಳೆಯರ ದೌರ್ಜನ್ಯದ ವಿರುದ್ಧ, ಮಹಿಳೆಯರ ಹಕ್ಕುಗಳು ಮತ್ತು ಹೋರಾಟ ಸೇರಿದಂತೆ ಹಲವು ವಿಚಾರಗಳ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ ಎಂದರು. ಅಂದು ಮಧ್ಯಾಹ್ನದ ನಂತರ ಮುಖ್ಯಮಂತ್ರಿ ಭಾಗವಹಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ವರದಿ: ಕನ್ನಡ ಪ್ರಭ