Asianet Suvarna News Asianet Suvarna News

ಬೆಂಗಳೂರಿನಲ್ಲಿ ಟೆಂಡರ್'ಶ್ಯೂರ್ ರೀತಿ ಇನ್ನೂ 50 ರಸ್ತೆ ಅಭಿವೃದ್ಧಿ

ಟೆಂಡರ್‌ ಶ್ಯೂರ್‌ ರಸ್ತೆಗಳಾಗಿ ಅಭಿವೃದ್ಧಿಪಡಿಸಲಾಗಿರುವ ನೃಪತುಂಗ ರಸ್ತೆ, ಫೀಲ್ಡ್‌ ಮಾರ್ಷಲ್‌ ಕಾರಿಯಪ್ಪ ರಸ್ತೆ, ಜನರಲ್‌ ತಿಮ್ಮಯ್ಯ ರಸ್ತೆ, ಕಮಿಷನರಿಯೇಟ್‌ ರಸ್ತೆ, ಮ್ಯೂಸಿಯಂ ರಸ್ತೆಗಳನ್ನು ಮುಖ್ಯಮಂತ್ರಿಗಳು ಸಾರ್ವಜನಿಕ ಸಂಚಾರಕ್ಕೆ ಸಮರ್ಪಿಸಿದರು. ಎಲ್ಲೆಡೆಗೂ ಬಿಎಂಟಿಸಿ ಬಸ್‌'ನಲ್ಲೇ ಸಂಚರಿಸಿದ ಮುಖ್ಯಮಂತ್ರಿಗಳಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ವಸತಿ ಸಚಿವ ಎಂ. ಕೃಷ್ಣಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಗರಾಭಿವೃದ್ಧಿ ಸಚಿವ ರೋಷನ್‌'ಬೇಗ್‌ ಸಾಥ್‌ ನೀಡಿದರು.

bbmp to develop 50 more tendersure roads in bengaluru
  • Facebook
  • Twitter
  • Whatsapp

ಬೆಂಗಳೂರು(ಮೇ 17): ಸುಗಮ ಸಂಚಾರ ಹಾಗೂ ಪಾದಚಾರಿಗಳ ಅನುಕೂಲಕ್ಕಾಗಿ ಮೂರನೇ ಹಂತದಲ್ಲಿ ರಾಜಧಾನಿ ಬೆಂಗಳೂರಿನ ಇನ್ನೂ 50 ರಸ್ತೆಗಳನ್ನು 700 ಕೋಟಿ ರು. ವೆಚ್ಚದಲ್ಲಿ ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಬಿಬಿಎಂಪಿಯಿಂದ ಅಭಿವೃದ್ಧಿಪಡಿಸಿರುವ 5 ಟೆಂಡರ್‌'ಶ್ಯೂರ್‌ ರಸ್ತೆಗಳು ಹಾಗೂ ಬ್ರಿಗೇಡ್‌ ಜಂಕ್ಷನ್‌'ನಲ್ಲಿ ನವೀಕೃತ ಯುದ್ಧ ಸ್ಮಾರಕವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ನಗರದ 12 ರಸ್ತೆಗಳನ್ನು 2 ಹಂತದಲ್ಲಿ ಟೆಂಡರ್‌ ಶ್ಯೂರ್‌ ರಸ್ತೆಗಳಾಗಿ ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಅದರಲ್ಲಿ ಈಗಾಗಲೇ ಮೊದಲ ಹಂತದ 7 ರಸ್ತೆಗಳು ಮತ್ತು ಎರಡನೇ ಹಂತದ 5 ರಸ್ತೆಗಳಲ್ಲಿ ಎರಡು ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಮೂರು ರಸ್ತೆ ಕಾಮಗಾರಿಗಳು ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿವೆ. ಇದರ ನಡುವೆಯೇ ಮೂರನೇ ಹಂತದಲ್ಲಿ ಇನ್ನೂ 50 ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ಟೆಂಡರ್‌ ಶ್ಯೂರ್‌ ರಸ್ತೆಗಳ ಬಗ್ಗೆ ಸಾರ್ವಜನಿಕವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆಯಲ್ಲಿ ನೀರಿನ ಪೈಪ್‌, ವಿದ್ಯುತ್‌ ತಂತಿಗಳೆಲ್ಲವೂ ಪಾದಚಾರಿ ಮಾರ್ಗದ ಕೆಳಗೆ ಹಾದುಹೋಗುತ್ತವೆ. ಇದರಿಂದ ಬೇಕಾಬಿಟ್ಟಿಯಾಗಿ ರಸ್ತೆ ಅಗೆಯುವುದು ತಪ್ಪುತ್ತದೆ. ಹಾಗಾಗಿ ಮೂರನೇ ಹಂತದಲ್ಲಿ 700 ಕೋಟಿ ರು. ವೆಚ್ಚದಲ್ಲಿ ಇನ್ನೂ 50 ರಸ್ತೆಗಳ ಅಭಿವೃದ್ಧಿಗೆ ನಿರ್ಧರಿಸಲಾಗಿದೆ. ಈಗಾಗಲೇ ಸೂಕ್ತ ರಸ್ತೆಗಳನ್ನು ಗುರುತಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿ ದ್ದೇನೆ. 2ನೇ ಹಂತದಲ್ಲಿ ಬಾಕಿ ಇರುವ ರಸ್ತೆಗಳ ಕಾಮಗಾರಿ ಪೂರ್ಣಗೊಳ್ಳುತ್ತಲೇ 3ನೇ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿವೆ ಎಂದು ಹೇಳಿದರು.

ಟೆಂಡರ್‌ ಶ್ಯೂರ್‌ ರಸ್ತೆಗಳಾಗಿ ಅಭಿವೃದ್ಧಿಪಡಿಸಲಾಗಿರುವ ನೃಪತುಂಗ ರಸ್ತೆ, ಫೀಲ್ಡ್‌ ಮಾರ್ಷಲ್‌ ಕಾರಿಯಪ್ಪ ರಸ್ತೆ, ಜನರಲ್‌ ತಿಮ್ಮಯ್ಯ ರಸ್ತೆ, ಕಮಿಷನರಿಯೇಟ್‌ ರಸ್ತೆ, ಮ್ಯೂಸಿಯಂ ರಸ್ತೆಗಳನ್ನು ಮುಖ್ಯಮಂತ್ರಿಗಳು ಸಾರ್ವಜನಿಕ ಸಂಚಾರಕ್ಕೆ ಸಮರ್ಪಿಸಿದರು. ಎಲ್ಲೆಡೆಗೂ ಬಿಎಂಟಿಸಿ ಬಸ್‌'ನಲ್ಲೇ ಸಂಚರಿಸಿದ ಮುಖ್ಯಮಂತ್ರಿಗಳಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ವಸತಿ ಸಚಿವ ಎಂ. ಕೃಷ್ಣಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಗರಾಭಿವೃದ್ಧಿ ಸಚಿವ ರೋಷನ್‌'ಬೇಗ್‌ ಸಾಥ್‌ ನೀಡಿದರು.

ಶಾಸಕರಾದ ಹ್ಯಾರಿಸ್‌, ರೇವಣ್ಣ, ಮೇಯರ್‌ ಜಿ. ಪದ್ಮಾವತಿ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಮತ್ತಿತರರು ಹಾಜರಿದ್ದರು.

ಏನಿದು ಟೆಂಡರ್'ಶೂರ್ ರಸ್ತೆ?
ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸುವ ವಿಧಾನವಿದಾಗಿದೆ. ಸರಿಯಾದ ರೀತಿಯ ಫೂಟ್'ಪಾಥ್ ಅಥವಾ ಪಾದಚಾರಿ ಮಾರ್ಗದ ನಿರ್ಮಾಣ; ಫುಟ್'ಪಾಥ್ ಅಡಿಯಲ್ಲಿ ವಿದ್ಯುತ್, ನೀರು, ಚರಂಡಿ ಇತ್ಯಾದಿ ಅಗತ್ಯ ಸೌಕರ್ಯಗಳ ಅಭಿವೃದ್ಧಿ; ಎಲ್'ಇಡಿ ಬೀದಿ ದೀಪಗಳ ಅಳವಡಿಕೆ; ಮಳೆ ನೀರು ರಸ್ತೆಯ ಮೇಲೆ ನಿಲ್ಲದ ರೀತಿಯಲ್ಲಿ ಎರಡೂ ಕಡೆ ಸರಿಯಾದ ಚರಂಡಿ ವ್ಯವಸ್ಥೆ;

ಎಂಜಿನಿಯರ್‌ ರಕ್ಷಿಸಿದ ಸಚಿವ ಎಂ. ಕೃಷ್ಣಪ್ಪ:
ನೃಪತುಂಗ ರಸ್ತೆ ಉದ್ಘಾಟಿಸಿದ ಬಳಿಕ ಸ್ವಲ್ಪ ದೂರ ನಡೆದೇ ಸಾಗುವ ಮೂಲಕ ಮುಖ್ಯಮಂತ್ರಿಗಳು ರಸ್ತೆ ಪರಿಶೀಲನೆ ನಡೆಸಿದರು. ಈ ವೇಳೆ ಇದ್ದಕ್ಕಿದ್ದಂತೆ ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯ ಬೃಹತ್‌ ರಾಜಕಾಲುವೆ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವುದನ್ನು ನೆನಪು ಮಾಡಿಕೊಂಡು, ಬಿಬಿಎಂಪಿ ಆಯುಕ್ತ ಮಂಜುನಾಥ್‌ ಅವರಿಂದ ವಿವರಣೆ ಪಡೆದರು. ಕಳೆದ ವರ್ಷ ನಗರ ಪರಿವೀಕ್ಷಣೆ ವೇಳೆ ಮುಂದಿನ ಆರು ತಿಂಗಳಲ್ಲಿ ಆ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದೆ, ಏಕೆ ಪೂರ್ಣಗೊಳ್ಳಲಿಲ್ಲ? ಎಲ್ಲಿ ಬೃಹತ್‌ ಮಳೆ ನೀರುಗಾಲುವೆ ಮುಖ್ಯ ಇಂಜಿನಿಯರ್‌ ಸಿದ್ದೇಗೌಡರನ್ನು ಕರೆಯಿರಿ, ಅವರನ್ನು ಅಮಾನತು ಮಾಡಿ ಎಂದು ಸೂಚಿಸಿದರು. ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಸಚಿವ ಎಂ. ಕೃಷ್ಣಪ್ಪ, ಗುತ್ತಿಗೆದಾರರ ಸಮಸ್ಯೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಅವರಿಗೆ ನಾನೇ ಎಚ್ಚರಿಕೆ ನೀಡಿ ಶೀಘ್ರ ಕಾಮಗಾರಿ ಮುಗಿಸುವಂತೆ ಸೂಚಿಸಿದ್ದೇನೆ ಎಂದು ಸಮಜಾಯಿಷಿ ನೀಡಿ ಸಿದ್ದೇಗೌಡರ ರಕ್ಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios