ಬೆಂಗಳೂರು[ಆ.04]: ನಿಷೇಧಿತ ಪ್ಲಾಸ್ಟಿಕ್‌ ಬಳಸಿದ ತಪ್ಪಿಗೆ ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಅವರು .500 ದಂಡ ಪಾವತಿಸಿದ್ದಾರೆ.

ಕಳೆದ ಜುಲೈ30 ರಂದು ನೂತನ ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶುಭಕೋರುವ ವೇಳೆ ಪ್ಲಾಸ್ಟಿಕ್‌ ಹೊದಿಕೆ ಇರುವ ಡ್ರೈ ಫ್ರೂಟ್ಸ್ ಬುಟ್ಟಿಯನ್ನು ಮುಖ್ಯಮಂತ್ರಿಗಳಿಗೆ ನೀಡಿ ಶುಭಾಶಯ ತಿಳಿಸಿದ್ದರು. ಪ್ಲಾಸ್ಟಿಕ್‌ ಬಳಕೆ ಮಾಡಬೇಡಿ ಎಂದು ಹೇಳುತ್ತಿರುವ ಮೇಯರ್‌ ಅವರೇ ನಿಷೇಧಿತ ಪ್ಲಾಸ್ಟಿಕ್‌ ಬಳಸಿದಕ್ಕೆ ಸಾರ್ವಜನಿಕ ವಲಯದಲ್ಲಿ ಮೇಯರ್‌ ವಿರುದ್ಧ ಟೀಕೆ ಕೇಳಿಬಂದ ಹಿನ್ನೆಲೆಯಲ್ಲಿ ಶನಿವಾರ ಪಾಲಿಕೆಯ ಸಂಪಂಗಿರಾಮನಗರ ವಾರ್ಡ್‌ ಆರೋಗ್ಯಾಧಿಕಾರಿ ಕಚೇರಿಗೆ ತೆರಳಿ ಪ್ಲಾಸ್ಟಿಕ್‌ ಬಳಕೆ ಮಾಡಿದ್ದಕ್ಕೆ ನಿಯಮ ಪ್ರಕಾರ .500 ದಂಡ ಪಾವತಿಸಿದ್ದಾರೆ.

ಸಾರ್ವಜನಿಕರಿಗೂ ದಂಡ?:

ಬೆಂಗಳೂರಿನ ಪ್ರಥಮ ಪ್ರಜೆ ಮೇಯರ್‌ ಅವರಿಗೆ ಪ್ಲಾಸ್ಟಿಕ್‌ ಬಳಸಿದ ಕಾರಣಕ್ಕೆ ಪಾಲಿಕೆ ದಂಡ ಪಾವತಿಸಿರುವುದರಿಂದ ಪ್ಲಾಸ್ಟಿಕ್‌ ಬಳಸುವ ಸಾರ್ವಜನಿಕರಿಗೂ ದಂಡ ಬೀಳಲಿದೆಯೇ ಎಂಬ ಆತಂಕ ಶುರುವಾಗಿದೆ. ಈ ವರೆಗೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಪ್ಲಾಸ್ಟಿಕ್‌ ಬಳಸುವ ಸಾರ್ವಜನಿಕರಿಗೆ ದಂಡ ಹಾಕದಿದ್ದರೂ ಕೆಎಂಸಿ ಕಾಯ್ದೆ ಸೆಕ್ಷನ್‌ 431(ಎ) ಪ್ರಕಾರ ಪರಿಸರಕ್ಕೆ ಹಾನಿ ಉಂಟು ಮಾಡುವ ಮತ್ತು ನಿಷೇಧಿತ ಪ್ಲಾಸ್ಟಿಕ್‌ ಬಳಸುವ ಸಾರ್ವಜನಿಕರಿಗೆ ದಂಡ ವಿಧಿಸುವ ಅಧಿಕಾರ ಪಾಲಿಕೆಗೆ ಇದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರೇ 2016 ಮೇ 4ರಂದು ಆದೇಶ ಹೊರಡಿಸಿದ್ದಾರೆ ಎಂದು ಪಾಲಿಕೆ ಆರೋಗ್ಯವಿಭಾಗದ ಮುಖ್ಯಅಧಿಕಾರಿ ಬಿ.ಕೆ.ವಿಜಯೇಂದ್ರ ತಿಳಿಸಿದ್ದಾರೆ.

ಮುಖ್ಯಮಂತ್ರಿ ಭೇಟಿ ವೇಳೆ ಪ್ಲಾಸ್ಟಿಕ್‌ ಹೊದಿಕೆ ಇರುವ ಡ್ರೈ ಫ್ರೂಟ್ಸ್ ಬುಟ್ಟಿಯನ್ನು ನೀಡಿವ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಗರದ ಪ್ರಥಮ ಪ್ರಜೆಯಾಗಿ ಪ್ಲಾಸ್ಟಿಕ್‌ ಬಳಕೆ ಮಾಡುತ್ತಿದ್ದಾರೆ ಎಂಬ ತಪ್ಪು ಸಂದೇಶ ನಾಗರಿಕರಿಗೆ ಹೋಗಬಾರದು ಎಂಬ ಕಾರಣಕ್ಕೆ .500 ದಂಡ ಪಾವತಿಸಿದ್ದೇನೆ.

-ಗಂಗಾಂಬಿಕೆ, ಮೇಯರ್‌.