Asianet Suvarna News Asianet Suvarna News

ಚಿತ್ರಸಂತೆ  ನಂತರ ಸಂಗ್ರಹವಾದ ತ್ಯಾಜ್ಯ ವಿಲೇವಾರಿ ಮಾಡದ ಚಿತ್ರಕಲಾ ಪರಿಷತ್ ಗೆ 5 ಲಕ್ಷ ದಂಡ

ಚಿತ್ರಸಂತೆ  ನಂತರದಲ್ಲಿ ಸಂಗ್ರಹವಾದ ತ್ಯಾಜ್ಯ ವಿಲೇವಾರಿ ಮಾಡಿಲ್ಲ ಎಂದು ಬಿಬಿಎಂಪಿ 5 ಲಕ್ಷ  ದಂಡವಿಧಿಸಿದೆ. ಬಿಬಿಎಂಪಿ ಕ್ರಮಕ್ಕೆ ಚಿತ್ರಕಲಾ ಪರಿಷತ್ತು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಎರಡೂ ಸಂಸ್ಥೆಗಳ ನಡುವೆ ಪರಸ್ಪರ ವಾದ, ವಿವಾದ ಆರಂಭವಾಗಿದೆ.

BBMP Imposed 5 lakh penalty for not deliver garbage after Chitrasante

ಬೆಂಗಳೂರು (ಜ.19): ಚಿತ್ರಸಂತೆ  ನಂತರದಲ್ಲಿ ಸಂಗ್ರಹವಾದ ತ್ಯಾಜ್ಯ ವಿಲೇವಾರಿ ಮಾಡಿಲ್ಲ ಎಂದು ಬಿಬಿಎಂಪಿ 5 ಲಕ್ಷ  ದಂಡವಿಧಿಸಿದೆ. ಬಿಬಿಎಂಪಿ ಕ್ರಮಕ್ಕೆ ಚಿತ್ರಕಲಾ ಪರಿಷತ್ತು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಎರಡೂ ಸಂಸ್ಥೆಗಳ ನಡುವೆ ಪರಸ್ಪರ ವಾದ, ವಿವಾದ ಆರಂಭವಾಗಿದೆ.

ನಗರದ ಶಿವಾನಂದ ವೃತ್ತದಿಂದ ಕುಮಾರಕೃಪಾ ರಸ್ತೆಯಲ್ಲಿ ಒಂದು ದಿನದ ಮಟ್ಟಿಗೆ ಮುಚ್ಚಿ ಚಿತ್ರಸಂತೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಚಿತ್ರಾಕೃತಿಗಳ ಪ್ರದರ್ಶನಕಾರರು ಹಾಗೂ ಸಾರ್ವಜನಿಕರು ರಸ್ತೆಯಲ್ಲೇ ತ್ಯಾಜ್ಯ ಎಸೆದಿದ್ದಾರೆ. ಚಿತ್ರಸಂತೆಯಾಗಿ ಎರಡು ದಿನಗಳು ಕಳೆದರೂ ತ್ಯಾಜ್ಯ ವಿಲೇವಾರಿಗೆ ಚಿತ್ರಕಲಾಪರಿಷತ್ ಸೂಕ್ತ ಕ್ರಮಕೈಗೊಳ್ಳದೆ ನಿರ್ಲಕ್ಷ್ಯವಹಿಸಿತ್ತು. ಮುಖ್ಯಮಂತ್ರಿಗಳ ನಿವಾಸ ಹಾಗೂ ಗೃಹ ಕಚೇರಿ ಎರಡೂ ಇರುವ ಅತಿ ಮುಖ್ಯ ರಸ್ತೆಯಾಗಿರುವ ಕುಮಾರಕೃಪಾ ರಸ್ತೆ ತ್ಯಾಜ್ಯಮಯವಾಗಿತ್ತು. ಅದನ್ನು ಕಂಡ ಬಿಬಿಎಂಪಿ ಆಯುಕ್ತರು ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. 

ಇದಕ್ಕೆ ಪ್ರತಿಯಾಗಿ ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್. ಶಂಕರ್ ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿ, ಐದು ಲಕ್ಷ ದಂಡ ವಿಧಿಸುವ ಸಂದರ್ಭದಲ್ಲಿ ಅನುಸರಿಸಿರುವ ಮಾನದಂಡ ಯಾವುದು ಹಾಗೂ ನಗರದಲ್ಲಿ ಇಂತಹುದೇ ಕಾರ್ಯಕ್ರಮಗಳು ನಡೆದಾಗ ಇಷ್ಟೇ ಪ್ರಮಾಣದ ದಂಡ ವಿಧಿಸಲಾಗಿದೆಯೇ ಎಂಬ ಮಾಹಿತಿಯನ್ನು ನೀಡುವಂತೆ ಆಗ್ರಹಿಸಿದ್ದಾರೆ.

ಚಿತ್ರ ಸಂತೆ ರಾತ್ರಿ 9 ಕ್ಕೆ ಮುಕ್ತಾಯವಾಗಿದೆ. ರಾತ್ರಿ 24 ಗಂಟೆಯ ನಂತರ ರಾಶಿ ಮಾಡಿದ್ದ ಕಸವನ್ನು ಸಾಗಿಸಬೇಕಿದ್ದ ಗುತ್ತಿಗೆದಾರರು ಒಟ್ಟು ಮಾಡಿದ್ದ ಕಸವನ್ನು ಸಾಗಿಸುವಲ್ಲಿ ವಿಳಂಬ ಮಾಡಿ ಮುಂಜಾನೆ ಸಾಗಿಸಿದ್ದಾರೆ. ಇದರ ಸಾಗಾಣಿಕೆ ವೆಚ್ಚವನ್ನು ಚಿತ್ರಕಲಾ ಪರಿಷತ್ತು ಭರಿಸಿದೆ.

ನಮಗೆ ನೋಟೀಸು ನೀಡಿ ಏಳು ದಿನಗಳ ಕಾಲಾವಕಾಶ ನೀಡಿ, ನಮ್ಮ ಪ್ರತಿಕ್ರಿಯೆ ಪಡೆದುಕೊಳ್ಳುವ ಮೊದಲೇ ಮಾಧ್ಯಮಗಳಿಗೆ ನೀಡಿದ ಜಂಟಿ ಆಯುಕ್ತರ ಉದ್ದೇಶವೇನು?, ಇಡೀನಗರದಲ್ಲಿ ಇವರು ಇಷ್ಟೇ ಸಕ್ರಿಯರಾಗಿ ಕಾರ್ಯನಿರ್ವಹಿಸಿ ತಪ್ಪಿತಸ್ಥರಿಗೆ ಇಷ್ಟೇ ಪ್ರಮಾಣದಲ್ಲಿ ದಂಡ ವಿಧಿಸಿದ್ದರೆ ವಸೂಲಾದ ದಂಡವೆಷ್ಟು ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಇಷ್ಟೆಲ್ಲ ಮುನ್ನೆಚ್ಚರಿಕೆ ಹೊರತಾಗಿಯೂ, ಒಟ್ಟುಗೂಡಿಸಿದ ಕಸವನ್ನು ನಮ್ಮ ಗುತ್ತಿಗೆದಾರರು ಸಾಗಿಸುವಲ್ಲಿ ಉಂಟಾದ ವಿಳಂಬಕ್ಕೆ ವಿಷಾದಿಸುತ್ತೇವೆ.ಈ ಪ್ರಕರಣವು ದೊಡ್ಡ ಪ್ರಮಾಣದ ದಂಡ ವಿಧಿಸುವ ಅಥವಾ ಕರ್ನಾಟಕ ಪುರಸಭಾ ಕಾಯ್ದೆಯನ್ವಯ ಕ್ರಮ ಕೈಗೊಳ್ಳುವ ಮಟ್ಟಿನ ಅಪರಾಧವಲ್ಲವೆಂದು ಹೇಳಿದ್ದಾರೆ.

ಈ ವಿವರಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ನೀಡಿರುವ ನೋಟಿಸನ್ನು ಪುನರ್ ಪರಿಶೀಲಿಸಬೇಕೆಂದು ಮೇಯರ್‌ಗೆ ಪತ್ರ ಬರೆದಿರುವುದಾಗಿ ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ವಾದವೇನು?

ನಗರದ ಶಿವಾನಂದ ವೃತ್ತದಿಂದ ಕುಮಾರಕೃಪಾ ರಸ್ತೆಯಲ್ಲಿ ಒಂದು ದಿನದ ಮಟ್ಟಿಗೆ ಮುಚ್ಚಿ ಚಿತ್ರಸಂತೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಚಿತ್ರಾಕೃತಿಗಳ ಪ್ರದರ್ಶನಕಾರರು ಹಾಗೂ ಸಾರ್ವಜನಿಕರು ರಸ್ತೆಯಲ್ಲೇ ತ್ಯಾಜ್ಯ ಎಸೆದಿದ್ದಾರೆ. ಚಿತ್ರಸಂತೆಯಾಗಿ ಎರಡು ದಿನಗಳು ಕಳೆದರೂ ತ್ಯಾಜ್ಯ ವಿಲೇವಾರಿಗೆ ಚಿತ್ರಕಲಾಪರಿಷತ್ ಸೂಕ್ತ ಕ್ರಮಕೈಗೊಳ್ಳದೆ ನಿರ್ಲಕ್ಷ್ಯವಹಿಸಿತ್ತು. ಮುಖ್ಯಮಂತ್ರಿಗಳ ನಿವಾಸ ಹಾಗೂ ಗೃಹ ಕಚೇರಿ ಎರಡೂ ಇರುವ ಅತಿ ಮುಖ್ಯ ರಸ್ತೆಯಾಗಿರುವ ಕುಮಾರಕೃಪಾ ರಸ್ತೆ ತ್ಯಾಜ್ಯಮಯವಾಗಿತ್ತು. ಅದನ್ನು ಕಂಡ ಬಿಬಿಎಂಪಿ ಆಯುಕ್ತರು ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿದ ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ಜಂಟಿ ಆಯುಕ್ತ ಸರ್ಫ್‌ರಾಜ್‌ಖಾನ್, ಕರ್ನಾಟಕ ಚಿತ್ರಕಲಾ ಪರಿಷತ್ ಮುಂಭಾಗದ ರಸ್ತೆ ಹಾಗೂ ಚಿತ್ರಕಲಾ ಪರಿಷತ್ ಆವರಣ ಪರಿಶೀಲನೆ ನಡೆಸಿ 5 ಲಕ್ಷ ರೂ. ದಂಡ ವಿಧಿಸಿ ಆದೇಶ ಮಾಡಿದರು. ಅಲ್ಲದೆ ಬಿಬಿಎಂಪಿ ಪೌರಕಾರ್ಮಿಕರನ್ನು ಕರೆಸಿ ಕಸವನ್ನೆಲ್ಲಾ ಸ್ವಚ್ಛಗೊಳಿಸಿ ವಿಲೇವಾರಿ ಮಾಡಿದರು.

ಚಿತ್ರಸಂತೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ಹಾಗೂ ಪ್ರದರ್ಶನಕಾರರು ಪರಿಷತ್ತಿನ ಆವರಣ ಹಾಗೂ ರಸ್ತೆಯಲ್ಲಿ ತಿಂಡಿ, ಊಟ ಮಾಡಿದ ಪ್ಲಾಸ್ಟಿಕ್ ಎಸೆದಿದ್ದಾರೆ. ಆದರೆ ಪರಿಷತ್ ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಿಲ್ಲ. ಹೀಗಾಗಿ ಆಯುಕ್ತರ ನಿರ್ದೇಶನದಂತೆ ಸ್ಥಳ ಪರಿಶೀಲನೆ ನಡೆಸಿದ ದಂಡ ವಿಧಿಸಲಾಗಿದ್ದು, ಪಾಲಿಕೆಯಿಂದ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ. 

- ಸರ್ಫ್‌ರಾಜ್‌ಖಾನ್, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ  

ವರದಿ: ನಯನಾ ಬಿ.ಜೆ 

ಫೋಟೋ: ಸೈಯದ್ ಇಶ್ತಿಯಾಕ್ 

BBMP Imposed 5 lakh penalty for not deliver garbage after Chitrasante

Follow Us:
Download App:
  • android
  • ios