ಈ ಬಗ್ಗೆ ಲೆಕ್ಕಪರಿಶೋಧಕರಿಗೆ ಉತ್ತರಿಸಿರುವ ಬಿಬಿಎಂಪಿಯು ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆಯ ಆಸ್ಪತ್ರೆಗಳಿವೆ. ತಮ್ಮ ಸ್ವಂತ ಆಸ್ಪತ್ರೆಗಳಿಂದ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದೇವೆ. ಹೀಗಾಗಿ ಹೆಲ್ತ್‌ ಸೆಸ್‌ ಸರ್ಕಾರಕ್ಕೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದೆ. ಆದರೆ, ಸ್ಪಷ್ಟನೆಗೆ ಮಹಾಲೇಖ ಪಾಲಕರ (ಸಿಎಜಿ) ವರದಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದು ನಿಮ್ಮ ಉತ್ತರ ಸ್ವೀಕಾರಾರ್ಹವಲ್ಲ. ಕರ್ನಾಟಕ ಹೆಲ್ತ್‌ ಸೆಸ್‌ ಕಾಯ್ದೆ 1962ರ ಪ್ರಕಾರ ಸ್ಥಳೀಯ ಸಂಸ್ಥೆಗಳಿಗೆ ಹೆಲ್ತ್‌ ಸೆಸ್‌ ಬಳಕೆ ಮಾಡಿಕೊಳ್ಳುವ ಹಕ್ಕು ನೀಡಿಲ್ಲ. ಒಂದು ವೇಳೆ ಬಳಕೆ ಮಾಡಿಕೊಂಡರೆ ಅದು ನಿಯಮಗಳ ಸ್ಪಷ್ಟಉಲ್ಲಂಘನೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಬೆಂಗಳೂರು (ಫೆ.05): ಬಿಬಿಎಂಪಿಯು ಆಸ್ತಿ ತೆರಿಗೆ ಜತೆ ಸಂಗ್ರಹಿಸುತ್ತಿದ್ದ ಭಿಕ್ಷುಕರ ಕರ, ಗ್ರಂಥಾಲಯ ಕರ ಬಾಕಿ ಉಳಿಸಿಕೊಂಡಿರುವುದು ಮಾತ್ರವಲ್ಲ. ಬರೋಬ್ಬರಿ 674.07 ಕೋಟಿ ರೂ. ಆರೋಗ್ಯ ಕರ (ಹೆಲ್ತ್ ಸೆಸ್) ಹಣವನ್ನು ನಿಯಮ ಬಾಹಿರವಾಗಿ ಬಳಕೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಬಿಬಿಎಂಪಿಯು ಸಂಗ್ರಹ ಮಾಡುವ ಆಸ್ತಿ ತೆರಿಗೆ ಜತೆಗೆ ಗ್ರಂಥಾಲಯ, ಶಿಕ್ಷಣ, ಭಿಕ್ಷುಕರ ಸೆಸ್ ಹಾಗೂ ಹೆಲ್ತ್ ಸೆಸ್ ಸಂಗ್ರಹ ಮಾಡುತ್ತದೆ. ನಿಯಮಗಳ ಪ್ರಕಾರ ಬಿಬಿಎಂಪಿ ಸಂಗ್ರಹ ಮಾಡಿರುವ ವಿವಿಧ ಕರಗಳ ಬಾಬ್ತು ಹಣದಲ್ಲಿ ಶೇ.10ರಷ್ಟುಸಂಗ್ರಹ ಶುಲ್ಕವಾಗಿ ಉಳಿಸಿಕೊಂಡು, ಉಳಿದ ಹಣವನ್ನು ಸಂಬಂಧಪಟ್ಟಇಲಾಖೆಗಳಿಗೆ ಕಾಲ ಮಿತಿಯೊಳಗೆ ವರ್ಗಾಯಿಸಬೇಕು. ಆದರೆ, 2010-15ನೇ ಸಾಲಿನಲ್ಲಿ ಸಂಗ್ರಹಿಸಿರುವ ಗ್ರಂಥಾಲಯ ಹಾಗೂ ಭಿಕ್ಷುಕರ ಸೆಸ್'ನ 177 ಕೋಟಿ ರೂ. ಬಾಕಿ ಉಳಿಸಿಕೊಂಡು ಛೀಮಾರಿ ಹಾಕಿಸಿಕೊಂಡಿತ್ತು.
ಇದರಿಂದ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ ನಿರ್ವಹಣೆಗೂ ಹಣವಿಲ್ಲದೆ ಕನಿಷ್ಠ ದಿನಪತ್ರಿಕೆ ಶುಲ್ಕ ಪಾವತಿಸಲೂ ಆಗದೆ ಹಲವೆಡೆ ದಿನಪತ್ರಿಕೆ ವಿಭಾಗವೇ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಛೀಮಾರಿ ಹಾಕಿಸಿಕೊಂಡಿದ್ದ ಪಾಲಿಕೆಯು ಇದೀಗ 674 ಕೋಟಿ ರೂ. ಹೆಲ್ತ್ ಸೆಸ್ ಸಂಗ್ರಹಿಸಿ ನಯಾಪೈಸೆಯೂ ಸರ್ಕಾರಕ್ಕೆ ಪಾವತಿ ಮಾಡದಿರುವುದು ಬೆಳಕಿಗೆ ಬಂದಿದೆ.
ಈ ಅಂಶ ಮಹಾಲೇಖ ಪಾಲಕರ (ಸಿಎಜಿ) 2016ರ ಲೆಕ್ಕಪರಿಶೋಧನಾ ವರದಿಯಲ್ಲಿ ಬಹಿರಂಗಗೊಂಡಿದ್ದು, 2015ರ ಮಾಚ್ರ್ ವೇಳೆಗೆ ಐದು ವರ್ಷದಲ್ಲಿ ಸಂಗ್ರಹಿಸಿರುವ 674 ಕೋಟಿ ಹೆಲ್ತ್ ಸೆಸ್ ಹಣವನ್ನು ನಿಯಮ ಬಾಹಿರವಾಗಿ ಬಳಕೆ ಮಾಡಿಕೊಂಡಿದೆ. ಇದು ಕಾನೂನಿನ ಸ್ಪಷ್ಟಉಲ್ಲಂಘನೆ ಎಂದು ವರದಿ ಉಲ್ಲೇಖಿಸಿದೆ.
ದುರ್ಬಳಕೆ ಹೇಗೆ?:
ಬಿಬಿಎಂಪಿಯು ಪ್ರತಿ ವರ್ಷ ಪಾಲಿಕೆ ವ್ಯಾಪ್ತಿಯಲ್ಲಿನ ಖಾಲಿ ನಿವೇಶನ, ವಸತಿ ಹಾಗೂ ವಾಣಿಜ್ಯ ಕಟ್ಟಡಗಳಿಂದ ಆಸ್ತಿ ತೆರಿಗೆ ಸಂಗ್ರಹಿಸುತ್ತದೆ. ಈ ಆಸ್ತಿ ತೆರಿಗೆ ಸಂಗ್ರಹಣೆ ವೇಳೆ ಶೇ. 15 ರಷ್ಟುಆರೋಗ್ಯ ಸೆಸ್, ಶೇ. 10 ರಷ್ಟುಶಿಕ್ಷಣ ಸೆಸ್, ಶೇ. 6 ರಷ್ಟುಗ್ರಂಥಾಲಯ ಸೆಸ್, ಶೇ. 3 ರಷ್ಟುಭಿಕ್ಷುಕರ ಸೆಸ್ ಸಂಗ್ರಹ ಮಾಡಬೇಕು. ಇದರಲ್ಲಿ ಶೇ.10 ರಷ್ಟುಹಣವನ್ನು ಸಂಗ್ರಹ ಶುಲ್ಕವಾಗಿ ಪಾಲಿಕೆ ಇಟ್ಟುಕೊಂಡು ಉಳಿದ ಮೊತ್ತವನ್ನು ಸರ್ಕಾರ ಸೂಚಿಸಿದ ದಿನಾಂಕದೊಳಗಾಗಿ ಸಂಬಂಧಪಟ್ಟಇಲಾಖೆಗಳಿಗೆ ವರ್ಗಾಯಿಸಬೇಕು.
ಲೆಕ್ಕ ಪರಿಶೋಧನಾ ವರದಿ ಪ್ರಕಾರ 2015ರ ಮಾಚ್ರ್ ವೇಳೆಗೆ ಬಿಬಿಎಂಪಿಯು ಗ್ರಂಥಾಲಯ ಹಾಗೂ ಭಿಕ್ಷುಕರ ಸೆಸ್ ಸೇರಿ ಒಟ್ಟು 403.29 ಕೋಟಿ ರೂ. ಸಂಗ್ರಹ ಮಾಡಿದೆ. ಇದರಲ್ಲಿ 225.33 ಕೋಟಿ ರೂ. ಸಂಬಂಧಪಟ್ಟಇಲಾಖೆಗಳಿಗೆ ಪಾವತಿಸಿದ್ದು ಕಳೆದ ಹಲವು ವರ್ಷಗಳಿಂದ 177.96 ಕೋಟಿ ರೂ. ಮೊತ್ತ ಬಾಕಿ ಉಳಿಸಿಕೊಂಡಿದೆ. ಉಳಿದಂತೆ ಹೆಲ್ತ್ ಸೆಸ್ ಆಗಿ ಒಟ್ಟು 674 ಕೋಟಿ ರೂ. ಸಂಗ್ರಹ ಮಾಡಿದ್ದು, ಈವರೆಗೂ ನಯಾಪೈಸೆಯನ್ನೂ ಸರ್ಕಾರ ಅಥವಾ ಆರೋಗ್ಯ ಇಲಾಖೆಗೆ ವರ್ಗಾವಣೆ ಮಾಡಿಲ್ಲ. ಈ ಬಗ್ಗೆ ಲೆಕ್ಕಪರಿಶೋಧಕರು ಬಿಬಿಎಂಪಿಗೆ ಪ್ರಶ್ನಿಸಿದರೆ ತಾನೇ ಖರ್ಚು ಮಾಡಿಕೊಂಡಿರುವುದಾಗಿ ಹೇಳಿದೆ. ನಿಯಮಗಳಲ್ಲಿ ಈ ರೀತಿ ಬಳಕೆ ಮಾಡಿಕೊಳ್ಳಲು ಅವಕಾಶವಿಲ್ಲ ಹೀಗಾಗಿ ಇದು ನಿಯಮ ಬಾಹಿರ ಬಳಕೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಂಗ್ರಹ ಗುರಿ ತಲುಪಲೂ ವಿಫಲ:
ಜತೆಗೆ 2010-15ರವರೆಗೆ ಪ್ರತಿವರ್ಷ ತೆರಿಗೆ ಸಂಗ್ರಹಕ್ಕೆ ಗುರಿ ನಿಗದಿ ಮಾಡಲಾಗಿದ್ದರೂ, ಯಾವ ವರ್ಷವೂ ಗುರಿ ತಲುಪಿಲ್ಲ. ಗುರಿಯ ಮುಕ್ಕಾಲು ಮೊತ್ತವನ್ನೂ ಯಾವ ವರ್ಷದಲ್ಲೂ ಸಂಗ್ರಹಿಸಿಲ್ಲ. ಹೀಗಾಗಿಯೇ ಆರ್ಥಿಕ ಸಂಕಷ್ಟಎದುರಾಗಿ ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸಲೂ ಪರದಾಡುವಂತಾಗಿದೆ ಎಂದು ಮಹಾಲೇಖಪಾಲಕರ ವರದಿಯಲ್ಲಿ ಹೇಳಲಾಗಿದೆ. 2010-11ರಿಂದ 2014-15ನೇ ಸಾಲಿನವರೆಗಿನ ಸಂಗ್ರಹದಲ್ಲಿ 2011-12ನೇ ಸಾಲಿನ (ಶೇ.76) ತೆರಿಗೆಯೇ ಹೆಚ್ಚು. ಉಳಿದಂತೆ 2013-14ರಲ್ಲಿ ಅತಿ ಕಡಿಮೆ (ಶೇ. 53) ತೆರಿಗೆ ಸಂಗ್ರಹವಾಗಿದೆ. ಸಿಬ್ಬಂದಿಯ ನಿರ್ಲಕ್ಷ್ಯ, ತೆರಿಗೆ ವಲಯಗಳ ಪುನರ್ ವರ್ಗೀಕರಣದಲ್ಲಿನ ವಿಳಂಬ, ಎಸ್ಎಎಸ್ (ಸ್ವಯಂ ಘೋಷಿತ ಆಸ್ತಿ ತೆರಿಗೆ) ವ್ಯವಸ್ಥೆಯಲ್ಲಿನ ಲೋಪವೇ ಇದಕ್ಕೆ ಕಾರಣ ಎಂದು ಉಲ್ಲೇಖಿಸಿದೆ.
